ಮಂಗಳೂರು, ಫೆ. 11: ಚುನಾವಣೆ ಹತ್ತಿರವಾಗುತ್ತಿದ್ದು, ಮಂಗಳೂರು ಹಾಗೂ ಶಿವಮೊಗ್ಗ ವಿಭಾಗಗಳ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಹಾಗಾಗಿ ಎಲ್ಲೆಲ್ಲಿ ಶಾಸಕರ ವಿರುದ್ಧ ಅಸಮಾಧಾನವಿದೆಯೋ ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ ಎಂದು ಕೇಂದ ಗೃಹ ಸಚಿವ ಅಮಿತ್ ಶಾ (Amit Shah) ಬಿಜೆಪಿ ಜನಪ್ರತಿನಿಧಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶನಿವಾರ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ ಬಳಿಕ ಮಂಗಳೂರಿನ ಕೆಂಜಾರು ಶ್ರೀದೇವಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಾಸು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ ಶಾ, ಇದು ಕೂಡಲೇ ಆಗಬೇಕಾದ ಕಾರ್ಯ, ತತ್ ಕ್ಷಣ ಗಮನ ಕೊಡಿ ಎಂದು ಆದೇಶಿಸಿದರು.
ಈ ಸಭೆಯಲ್ಲಿ ನಾಯಕರು ತುಟಿಬಿಚ್ಚಿಲ್ಲ, ಪದಾಧಿಕಾರಿಗಳು ಶಾಸಕರು ಹಾಗೂ ನಾಯಕರ ವಿರುದ್ಧ ಗರಂ ಅಮಿತ್ ಶಾ ಆಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯ ಬಿಜೆಪಿ ನಾಯಕರ ನೋಡಿ ಮತ ಹಾಕಲ್ಲ, ಮೋದಿ ಹಾಗೂ ಕಮಲ ಚಿಹ್ನೆ ನೋಡಿ ಮತ ಹಾಕುತ್ತಾರೆ ಎಂದು ಪದಾಧಿಕಾರಿಗಳ ಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆ.
ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಪಕ್ಷದ ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ ಅಮಿತ್ ಶಾ ಅವರು ,ಸಂಸದ ಶಾಸಕ ಸ್ಥಾನದ ಜತೆಗೆ ಚುನಾವಣೆಗೂ ಕೆಲಸ ಮಾಡಬೇಕು. ನಿಮಗೆ ಆಗದಿದ್ದರೆ ಕಾರ್ಯಕರ್ತರಿದ್ದಾರೆ. ನಾವು ಕಾರ್ಯಕರ್ತರಿಗೆ ಟಿಕೇಟ್ ನೀಡುತ್ತೇವೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಅಸಮಾಧಾನ ಶಮನಗೊಳಿಸಿ:
ಕರಾವಳಿಯ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬಗ್ಗೆ ಇರುವ ಅಸಮಾಧಾನದ ಬಗ್ಗೆ ಮಾಹಿತಿ ಪಡೆದಿದ್ದ ಅಮಿತ್ , ಅದನ್ನು ಕೂಡಲೇ ಶಮನಗೊಳಿಸಲು ಕಾರ್ಯ ಪ್ರವೃತ್ತರಾಗಿ ಬಿಕ್ಕಟ್ಟು ಶಮನಕ್ಕೆ ಮುಂದಾಗಿ ಅಗತ್ಯವಿದ್ದರೆ ಪಕ್ಷದ ಹಿರಿಯರ ನೆರವನ್ನು ಪಡೆಯಿರಿ, ಅಸಮಾಧಾನ ಇರುವಲ್ಲಿಗೆ ತೆರಳದೆ ಇರುವುದು ಸಲ್ಲದು. ಹಾಗಾಗಿ ಎಲ್ಲ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರನ್ನು ಮಾತನಾಡಿಸಿ, ಪಕ್ಷ ಸಂಘಟನೆಗೆ ಅವರನ್ನು ಹುರಿದುಂಬಿಸಿ, ಒಂದು ತಿಂಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಶಾಸಕರು ಪ್ರವಾಸ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿದರು.
ಸಿಎಂ ಬಸವರಾಜ ಬೊಮಾಯಿ, ಮಾಜಿ ಸಿಎಂ ಬಿಎಸ್ ವೈ, ಮಾಜಿ ಸಚಿವ ಈಶ್ವರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಹಾಲಿ ಶಾಸಕರು ಕ್ಷೇತ್ರಗಳ ಪೂರ್ಣ ಪ್ರವಾಸ ಮುಗಿಸಬೇಕು. ಎರಡು ವಿಭಾಗಗಳ ಆರು ಜಿಲ್ಲೆಗಳಲ್ಲಿ 33 ಕ್ಷೇತ್ರಗಳ ಪೈಕಿ 29 ರಲ್ಲಿ ಬಿಜೆಪಿ ಗೆದ್ದಿದೆ. ಆದರೆ 4 ಕ್ಷೇತ್ರ ಕೈ ತಪ್ಪಿದೆ, ಅವುಗಳನ್ನೂ ಗೆಲ್ಲಲು ಕಾರ್ಯತಂತ್ರ ರೂಪಿಸಿ ಕಾರ್ಯಶೀಲರಾಗಬೇಕು. ಅದಕ್ಕಾಗಿ ಎಸ್ ಸಿ, ಮಹಿಳಾ ಸೇರಿದಂತೆ ಎಲ್ಲ ಮೋರ್ಚಾಗಳನ್ನು ಕ್ರಿಯಾಶೀಲಗೊಳಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು
ಪ್ರತೀ ಹಳ್ಳಿ, ಮನೆಗಳಿಗೂ ಭೇಟಿ:
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಿಎಂ ಬಿಎಸ್‌ವೈ ತಿಂಗಳೊಳಗೆ ಮನೆ ಮನೆಗೆ ತೆರಳಿ ಮತ ದಾರರನ್ನು ಭೇಟಿ ಮಾಡಿ, ಸಭೆ ನಡೆಸಿ, ಬಳಿಕ ನಿಮ್ಮೊಂದಿಗೆ ಮಾತನಾಡುವೆ ಎಂದು ಶಾ ತಿಳಿಸಿದ್ದಾರೆ. ಪಕ್ಷ ಸಂಘಟನೆಯಾದರೆ ಗೆಲುವು ನಿಸ್ಸಂಶಯ ಎಂದಿರುವುದಾಗಿ ಹೇಳಿದರು ಬಿಎಸ್ವೈ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.