ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಿರ್ಮಿಸಲಾದ ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ಅಮರಗಿರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುಷ್ಪರ್ಚನೆ ಮೂಲಕ ಫೆ 11 ರಂದು ಮಧ್ಯಾಹ್ನ ಲೋಕಾರ್ಪಣೆಗೊಳಿಸಿದರು. ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಅವರೊಂದಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಜರಿದ್ದರು
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಶ್ರೀ ಕ್ಷೇತ್ರ ಹನುಮಗಿರಿಯ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ನಿರ್ಮಾಣ ಮಾಡಿದ ನೂತನ ಹೆಲಿಪ್ಯಾಡ್ ಗೆ ಗೃಹ ಸಚಿವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗಮಿಸಿದರು. ಪಾಸ್ ಪಡೆದು ಮಧ್ಯಾಹ್ನವೇ ಹೆಲಿಪ್ಯಾಡ್ ಮೇಲಭಾಗದ ಶಾಲಾ ಅವರಣದಲ್ಲಿ ಸೇರಿದ ಸಾರ್ವಜನಿಕರು ಅಮಿತ್ ಶಾ ಆಗಮಿಸುತ್ತಿದ್ದಂತೆ ಜೈಕಾರ ಹಾಕಿದರು, ನೆರೆದವರತ್ತ ಅಮಿತ್ ಶಾ ಕೈ ಬೀಸುತ್ತಾ ಹನುಮಗಿರಿಗೆ ಪ್ರವೇಶಿಸಿದರು.
ಶ್ರೀ ಕ್ಷೇತ್ರ ಹನುಮಗಿರಿಗೆ ಆಗಮಿಸಿ ಶ್ರೀ ಪಂಚಮುಖಿ ಆಂಜನೇಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆಂಜನೇಯ ಸ್ವಾಮಿಗೆ ಪಂಚರತ್ನ ಸಹಿತದ ರಜತ ಗದೆಯನ್ನು ಸಮರ್ಪಿಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರು ಗೃಹ ಸಚಿವರು, ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಶಾಲು ಹೊದಿಸಿ ಫಲಪುಷ್ಪಾಗಳೊಂದಿಗೆ ಗೌರವಿಸಿದರು.

ಅಮರಗಿರಿಗೆ ಆಗಮಿಸಿದ ಅಮಿತ್ ಶಾ ಅವರು ಶ್ರೀ ಭಾರತಿ ಅಮರ ಜ್ಯೋತಿ ಮಂದಿರವನ್ನು ಪುಷ್ಪರ್ಚನೆ ಮಾಡಿ ಲೋಕಾರ್ಪಣೆಗೊಳಿಸಿದರು. ವಿಜಯದ ಸಂಕೇತದ ಯೋಧನ ಕೈಯಲ್ಲಿದ್ದ ರಾಷ್ಟç ಧ್ವಜಕ್ಕೆ ಪುಷ್ಪರ್ಚನೆ ಮಾಡಿದರು. ಅಷ್ಟಭುಜಾಕೃತಿಯ ವಿಶೇಷ ಆಲಯದ ಒಳಗೆ ದೀಪ ಪ್ರಜ್ವಲನ ಮಾಡಿ ಭಾರತ ಮಾತೆಯ ಪ್ರತಿಮೆ, ಯೋಧ ಹಾಗೂ ರೈತನ ಶಿಲಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ವಿಸಿಟರ್ಸ್ ಪುಸ್ತಕದಲ್ಲಿ ಅಮಿತ್ ಷಾ ತಮ್ಮ ಹಸ್ತಾಕ್ಷರ ಮಾಡಿದರು. ಮೂಲ ಸಂವಿಧಾನದ ಪ್ರತಿಯನ್ನು ಕೊಡುಗೆಯಾಗಿ ಸಹಿ ಹಾಕಿ ಮಂದಿರಕ್ಕೆ ನೀಡಿದರು. ಅಮರಗಿರಿಯ ಮುಂಭಾಗಕ್ಕೆ ಬಂದು ನೆರೆದವರಿಗೆ ಕೈ ಬೀಸಿ ಪುತ್ತೂರಿಗೆ ತೆರಳಿದರು.

ಬಿಜೆಪಿ ರಾಜ್ಯಾಧ್ಯಕ್ಷ, ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವ ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು, ದ. ಕ. ಜಿಲ್ಲಾಧಿಕಾರಿ ರವಿ ಕುಮಾರ್, ಸಹಾಯಕ ಆಯುಕ್ತ ಗಿರೀಶ್ ನಂದನ್, ಇಒ ನವೀನ್ ಭಂಡಾರಿ ಮೊದಲಾದವರು ಸ್ವಾಗತಿಸಿದರು. ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.

ಬಂದೋಬಸ್ತ್
ಅಮಿತ್ ಶಾ ಆಗಮಿಸಿದ ಗಜಾನನ ವಿದ್ಯಾಸಂಸ್ಥೆಯ ಕ್ರೀಡಾಂಗಣದ ಹೆಲಿ ಪ್ಯಾಡ್ ನ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಮಾರ್ಗದರ್ಶನದಲ್ಲಿ, ಕಾರವಾರ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಪೊಲೀಸ್ ಹಾಗೂ ಸಿ ಆರ್ ಪಿ ಎಫ್ ಯೋಧರು ಭದ್ರತೆ ಒದಗಿಸಿದರು.


