ಪುತ್ತೂರು: ಫೆ.10 : ಅಡಿಕೆಯ ಕನಿಷ್ಡ ಆಮದು ದರವನ್ನು 251 ರಿಂದ 351ಕ್ಕೆ ಏರಿಸಬೇಕೇಂಬ ಕ್ಯಾಂಪ್ಕೋದ ಪ್ರಸ್ತಾವನೆಗೆ ಕೇಂದ್ರ ಕೃಷಿ ಇಲಾಖೆಯೂ ಒಪ್ಪಿಗೆ ಸೂಚಿಸಿದ್ದು ಕಡತವನ್ನು ಮುಂದಿನ ಹಂತಕ್ಕೆ ವರ್ಗಾಯಿಸಲಾಗಿದೆ. ಅಂತಿಮವಾಗಿ ಇದಕ್ಕೆ ವಾಣಿಜ್ಯ ಇಲಾಖೆಯಿಂದ ಹಸಿರು ನಿಶಾನೆ ದೊರೆತರೆ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗಲಿದೆ. ಮೋದಿ ನೇತ್ರತ್ವದ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಬೃಹತ್ ಕೃಷಿ ಯಂತ್ರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕನಿಷ್ಡ ಆಮದು ದರವನ್ನು ಏರಿಸುವ ಪ್ರಸ್ತಾಪದ ಕಡತವು ಕೃಷಿ ಇಲಾಖೆಯಿಂದ ಅನುಮತಿಯೊಂದಿಗೆ DGIF ( ಡೈರೆಕ್ಟ್ ಜನರಲ್ ಅಫ್ ಫಾರಿನ್ ಟ್ರೇಡ್ ಗೆ ಹೋಗಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಇಲಾಖೆಗೆ ಹೋಗಲಿದೆ. ಕೆನಡದ ಯುವ ಸಂಶೋದಕರು ಅಡಿಕೆ ಹಳದಿ ರೋಗ ಹಾಗೂ ಎಲೆಚುಕ್ಕಿಯ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದು, ಇದಕ್ಕಾಗಿ ಸ್ಯಾಂಪಲ್ ಗಳನ್ನು ಕಳುಹಿಸಲಾಗಿದೆ. ಹೀಗೆ ಅಡಿಕೆ ಬೆಳೆಗಾರರ ಪರ ಕೇಂದ್ರ ಸರಕಾರ ನಿಂತಿದೆ ಎಂದರು.

ರೈತರು ತಮ್ಮ ತೋಟಗಳಲ್ಲಿ ಪೂರಕ ಬೆಳೆ ಹಾಗೂ ಮಿಶ್ರ ಬೆಳೆ ಬೆಳೆಯುವತ್ತ ಗಮನ ಹರಿಸಬೇಕು. ಒಂದೇ ಬೆಳೆಯನ್ನು ನಂಬಿದ್ರೆ ಹವಮಾನ ವೈಪರಿತ್ಯ, ಧಾರಣೆ ಕುಸಿತ, ರೋಗ ಇತ್ಯಾದಿಗಳ ಕಾರಣ ದಿಂದ ನಷ್ಟ ಅನುಭವಿಸಿದರೆ ಆತನ ಇಡಿ ಕುಟುಂಬ ಸಂಕಷ್ಟಕ್ಕೆ ತುತ್ತಾಗುತ್ತಾದೆ. ಹಾಗಾಗಿ ತಮ್ಮ ತೋಟದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವತ್ತ ಮನ ಮಾಡಬೇಕು . ಅಡಿಕೆ ಬೆಳೆಗಾರರು ಒಳ ಮೀನುಗಾರಿಕೆ, ಹೈನುಗಾರಿಗೆಯಂತಹ ಪೂರಕ ಬೆಳೆ ಹಾಗೂ ತಾಳೆ ಗಿಡದಂತಹ ಮಿಶ್ರ ಅಥಾವ ಪರ್ಯಾಯ ಬೆಳೆಯತ್ತ ಚಿತ್ತ ಹರಿಸಬೇಕು ಎಂದರು.
ಇಂದಿನ ಕಾಲದಲ್ಲಿ ನಮ್ಮ ಕೃಷಿಕರಿಗೆ ಉತ್ತಮ ಸೌಲಭ್ಯಗಳು ಸಿಗುತ್ತಿಲ್ಲ ಹಾಗೂ ರೈತರಿಗೆ ಸಬ್ಸಿಡಿಗಳು ದೊರೆಯುತ್ತಿಲ್ಲ. ಹಾಗಾಗಿ ಕೃಷಿಕರು ಅನೇಕ ಸಮಸ್ಯೆಗಳಿಂದ ಬಳಲುವಂತಾಗಿದೆ. ಆದ್ದರಿಂದ ಕೃಷಿಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಬೇಕೆಂದು ಸರ್ಕಾರ ನಿರ್ಧರಿಸಿದೆ. ಕೃಷಿ ಸಂಬಂಧಿತ ಸಂಶೋಧನೆಗಳನ್ನು ನಡೆಸಲು ಸರ್ಕಾರ ಮುಂದಾಗುತ್ತಿದೆ. ಇದಕ್ಕಾಗಿ ದೇಶದ ಪ್ರತಿಯೊಂದು ಹೋಬಳಿಗಳಲ್ಲಿ ಅನೇಕ ಕೇಂದ್ರಗಳನ್ನು ಅನುಷ್ಟಾನಗೊಳಿಸಿದೆ ಇವರು ಕೃಷಿಯಲ್ಲಿ ಬಳಸಲಾಗುವ ಟ್ರಾಕ್ಟರ್‌ಗಳ ಬೆಲೆಯು ದುಬಾರಿಯಾಗಿದ್ದು ಒಬ್ಬ ಸಾಮಾನ್ಯ ಕೃಷಿಕನಿಗೆ ಕೈಗೆಟಕುವಂತಿಲ್ಲ ಎಂದರು.
ಹಾಗಾಗಿ ಇದಕ್ಕೆ ಪೂರಕವಾಗುವಂತ ನಮ್ಮ ರೈತರಿಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇದರಿಂದಾಗಿ ಅನೇಕ ರೈತರಿಗೆ ಸದುಪಯೋಗವಾಗುತ್ತಿದೆ. ನಮ್ಮ ದೇಶದಲ್ಲಿ ರೈತರಿಗೆ ಸಮಾನವಾದ ಸ್ಥಾನಮಾನ ಹಾಗೂ ಆದ್ಯತೆಗಳು ಈ ಮೊದಲು ಸಮರ್ಪಕವಾಗಿ ಸಿಗುತ್ತಿರಲಿಲ್ಲ. ಆದರೆ ಇಂದಿನ ಸರ್ಕಾರವು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಹಾಗೂ ಕೃಷಿಕರ ಪ್ರಗತಿಗಾಗಿ ರಾಜ್ಯ ಹಾಗೂ ಕೇಂದ್ರಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಹೊಸ ತಂತ್ರಜ್ಞಾನವು ಜನರಿಗೆ ತಲುಪುವುದು ಅತ್ಯಗತ್ಯ ಎಂಬ ಕಲ್ಪನೆಯಿಂದ ಕ್ಯಾಂಪ್ಕೋ ಸಂಸ್ಥೆಯು ಕೃಷಿ ಮೇಳಗಳಂತಹ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಆತ್ಮ ನಿರ್ಭರ ಭಾರತದ ಕಲ್ಪನೆಯು ಮಾತಿಗಷ್ಟೇ ಸೀಮಿತವಾಗದೇ ಅದು ಸಂಪೂರ್ಣವಾಗಿ ಜಾರಿಗೊಳ್ಳುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅತಿಥಿ ಸ್ಥಾನವನ್ನು ವಹಿಸಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರಿಗೆ ತಾಂತ್ರಿಕತೆಯ ಬಗೆಗೆ ಅರಿವನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ರೈತರಿಗೆ ಸುಲಭವಾಗುವಂತೆ ಹಾಗೂ ಕೃಷಿ ಉತ್ಪನ್ನಗಳು ಮೌಲ್ಯಯುತವಾಗಿರಬೇಕೆಂಬ ದೃಷ್ಟಿಯಿಂದ ಈ ಬೃಹತ್ ಕೃಷಿ ಯಂತ್ರ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಕೃಷಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಸಿಪಿಸಿಆರ್‌ಐ ಹಾಗೂ ಐಸಿಎಆರ್ ಕಾಸರಗೋಡಿನ ನಿರ್ದೆಶಕ ಡಾ. ಕೆ.ವಿ ಹೆಬ್ಬಾರ್, ಇಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಯಾಗುತ್ತಿದೆ. ಇಂದಿನ ಯುವ ಜನಾಂಗವು ಕೃಷಿಯ ಮೇಲಿನ ಒಲವಿನಿಂದ ಹೊಸ ಹೊಸ ಕೃಷಿ ಯಂತ್ರಗಳನ್ನು ಆವಿಷ್ಕಾರ ಮಾಡುತ್ತಿದ್ದಾರೆ. ಇದರ ಸದುಪಯೋಗ ಪ್ರತಿಯೊಬ್ಬ ರೈತನಿಗೆ ಲಭಿಸಲಿ ಎಂದರು.
ಈ ಸಂದರ್ಭದಲ್ಲಿ ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಕೃಷಿಕರೇ ದೇಶದ ಬೆನ್ನೆಲುಬು ಎಂಬುವುದರಲ್ಲಿ ಎರಸು ಮಾತಿಲ್ಲ. ಇಂದಿನ ಯುವಕರು ಐಟಿ ಕಂಪನಿಗಳತ್ತ ಒಲವು ಜಾಸ್ತಿ ತೋರಿಸುತ್ತಿದ್ದಾರೆ. ಆದರೆ ಹಣವನ್ನು ತಿಂದು ಬದುಕಲು ಸಾಧ್ಯವಿಲ್ಲ. ರೈತನು ಉತ್ಪಾದಿಸಿದಂತಹ ಆಹಾರ ಬೆಳೆಗಳನ್ನಷೇ ಸೇವಿಸಿ ಬದುಕಬೇಕಾಗುತ್ತದೆ. ಹಾಗಾಗಿ ಯುವಜನತೆ ಕೃಷಿಯತ್ತ ಒಲವು ತೋರಿಸಿದರೆ ಉತ್ತಮ ಎಂದು ನುಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಿದ ವಿವೇಕ ಅನ್ವೇಷಣೆ ಎನ್ನುವ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹಮಾನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಮಣ್ಯ ಯಡಪಡಿತ್ತಾಯ, ಪುತ್ತೂರು ನಗರ ಸಭೆ ಅಧ್ಯಕ್ಷರ ಜೀವಂಧರ್ ಜೈನ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕರ‍್ಯದರ್ಶಿ ಡಾ.ಕೆ.ಎನ್ ಕೃಷ್ಣ ಭಟ್, ಟಿ.ಎಸ್ ಸುಬ್ರಮಣ್ಯ ಭಟ್ ಹಾಗೂ ಕ್ಯಾಂಪ್ಕೋ ಸಂಸ್ಥೆಯ ನಿರ್ಧೆಶಕರ ಉಪಸ್ಥಿತರಿದ್ದರು.
ಕ್ಯಾಂಪ್ಕೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್. ಎಂ ಕೃಷ್ಣ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷಿ ಯಂತ್ರ ಮೇಳದ ಸಂಯೋಜಕ ರವಿಕೃಷ್ಣ ಡಿ. ಕಲ್ಲಾಜೆ ಸ್ವಾಗತಿಸಿ, ಉಪನ್ಯಾಸಕಿಯರಾದ ನೀಮಾ ಎಚ್.ಕುಂಬ್ರ ಹಾಗೂ ನಿಶಾ ಕರ‍್ಯಕ್ರಮ ನಿರೂಪಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.




