ಮುಂಬರುವ ಎಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಬಾರಿ ಅಧಿಕಾರ ಪಡೆಯಲೆಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಪಕ್ಷ ಹಿಂದೆಂದಿಗಿಂತಲೂ ಅಚ್ಚುಕಟ್ಟಾಗಿ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ (Bantwala). ಈ ಹಿಂದೆ ಚುನಾವಣೆ ಘೋಷಣೆಯಾದ ಬಳಿಕ ಸಿದ್ದತೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಪಕ್ಷ ಈ ಬಾರಿ 6 ತಿಂಗಳ ಮೊದಲೇ ಚುನಾವಣಾ ತಯಾರಿಗೆ ಇಳಿದಿದೆ. ಈ ಸಂಬಂಧ ಹಲವು ರಾಲಿಗಳನ್ನು ಈಗಾಗಲೇ ಮುಖಂಡರ ನೇತ್ರತ್ವದಲ್ಲಿ ನಡೆಸುತ್ತಿದೆ.
ಮಾರ್ಚ್ 15 ರ ಬಳಿಕ ಯಾವುದೇ ದಿನಾಂಕದಂದು ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು ಇದಕ್ಕೆ ತಿಂಗಳು ಮೊದಲೇ ಬಹುತೇಕ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲು ಮುಂದಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ತಕ್ಷಣದಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು ಎನ್ನುವುದು ಪಕ್ಷದ ಥಿಂಕ್ ಟ್ಯಾಂಕ್ ನ ಉದ್ದೇಶ.
ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಸಂಘಟನಾತ್ಮಕವಾಗಿ ಪ್ರಭಲವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಆ ಪಕ್ಷ ಸಹಜವಾಗಿಯೇ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ. ಅಲ್ಲದೇ ಅವರ ಸೋಷಿಯಲ್ ಮೀಡಿಯಾ ಟೀಮ್ ಮೈಕ್ರೋ ಮ್ಯಾನೇಜ್ ಮೆಂಟ್ ಮಾಡುತ್ತಿದ್ದು, ಬೂತ್ ಲೆವೆಲ್ ನಲ್ಲಿ ವಾಟ್ಸಾಪ್ ಗ್ರೂಪು ಮಾಡಿಕೊಂಡು ಪಕ್ಷದ ಪರ ಪ್ರಚಾರ ಮಾಡುತ್ತಿದೆ.
ವಿಜಯ ಸಂಕಲ್ಪ ಅಭಿಯಾನದ ನೆಪದಲ್ಲಿ ಈಗಾಗಲೇ ಪಕ್ಷದ ಬೂತ್ ಲೆವೆಲ್ ಕಾರ್ಯಕರ್ತರು ಒಂದೊಂದು ಬಾರಿ ಮನೆ ಮನೆ ಭೇಟಿ ನಡೆಸಿದ್ದಾರೆ. ಬಿಜೆಪಿಯ ಈ ಅಗ್ರೆಸ್ಸಿವ್ ಪ್ರಚಾರ ತಂತ್ರಕ್ಕೆ ಠಕ್ಕರ್ ಕೊಡಬೇಕಾದರೇ ಅದಷ್ಟು ಬೇಗ ಟಿಕೆಟ್ ಘೋಷಿಸಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವುದು ಕಾಂಗ್ರೆಸ್ ಪಕ್ಷದ ಒಟ್ಟಾರೆ ಕಾರ್ಯತಂತ್ರ.
ಈ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಪಕ್ಷದ ಅಭ್ಯರ್ಥಿಗಳನ್ನುಅಂತಿಮಗೊಳಿಸುವ ಕಾರ್ಯದಲ್ಲಿ ಕೆಪಿಸಿಸಿ ತೊಡಗಿದೆ .ಇವರೆಗೆ ಒಟ್ಟು 135 ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್ ಪಕ್ಕಾ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಅಂತಿಮಗೊಂಡಿರುವ ಪಟ್ಟಿಯೂ ಸೆಂಟ್ರಲ್ ಎಲೆಕ್ಷನ್ ಕಮಿಟಿಯ ಮುಂದೆ ಹೋಗಲಿದೆ. ನಂತರ ಅಭ್ಯರ್ಥಿಗಳ ಪಟ್ಟಿಯನ್ನ ಎಐಸಿಸಿ ನಾಯಕರು ಘೋಷಣೆ ಮಾಡಲಿದ್ದಾರೆ. ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಸದ್ಯ ಕೆಪಿಸಿಸಿ ಸಿದ್ದಪಡಿಸರುವ 135 ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕ್ಷೇತ್ರಗಳ ಅಭ್ಯರ್ಥಿ ಗಳ ಹೆಸರು ಕೂಡ ಸೇರಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಅಧಿಕವಾಗಿರುವ ಉಳ್ಳಾಲ ಹಾಗೂ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಉಳ್ಳಾಲ ಕ್ಷೇತ್ರಕ್ಕೆ ಹಾಲಿ ಶಾಸಕ ಯು.ಟಿ ಖಾದರ್ ಹಾಗೂ ಬಂಟ್ವಾಳ ಕ್ಷೇತ್ರಕ್ಕೆ ಹಿರಿಯ ಕಾಂಗ್ರೆಸ್ ನೇತಾರ ಬಿ. ರಮಾನಾಥ ರೈ ಹೆಸರು ಅಖೈರುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯು ಟಿ ಖಾದರ್ ಹಾಲಿ ಶಾಸಕರಾಗಿರುವುದು ಹಾಗೂ ರಾಜ್ಯದ ಅತ್ಯಂತ ಪ್ರಭಾವಿ ಅಲ್ಪ ಸಂಖ್ಯಾತ ಮುಖಂಡನಾಗಿರುವುದರಿಂದ ಅವರ ಹೆಸರು ಹೆಚ್ಚಿನ ವಿರೋಧವಿಲ್ಲದೇ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಬಿ. ರಮಾನಾಥ ರೈಯವರು ಕಳೆದ ಬಾರಿ ಚುನಾವಣೆಯಲ್ಲಿ ಸೋತಿರುವುದು ಹಾಗೂ 8 ಬಾರಿ ಚುನಾವಣೆ ಎದುರಿಸುವುದರಿಂದ ಅವರ ಬದಲು ಬೇರೆ ಯುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಸ್ತಾವನೆಯ ಬಗ್ಗೆ ಕೆಪಿಸಿಸಿಯ ಸಮಿತಿ ಚರ್ಚೆ ನಡೆಸಿತ್ತು ಎನ್ನಲಾಗಿದೆ. ಅಲ್ಲದೇ ಬಂಟ್ವಾಳದಲ್ಲಿ ಬಿಲ್ಲವ ಸಮುದಾಯ ಪ್ರಭಲ ಸಮುದಾಯವಾಗಿದ್ದು ಹಾಗಾಗಿ ಆ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು.
ಆದರೇ ರಮಾನಾಥ ರೈಯವರು ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅತಿ ಹೆಚ್ಚು ಜನಾನುರಾಗಿಯಾಗಿರುವುದು , ನಿರಂತರ ಜನ ಸಂಪರ್ಕದಲ್ಲಿ ತೊಡಗಿಸಿಕೊಂಡಿರುವದು , ಅಧಿಕಾರದಲ್ಲಿ ಇಲ್ಲದಿದ್ದರೂ, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸುತ್ತಿರುವುದು ಅವರ ಅಭ್ಯರ್ಥಿತನಕ್ಕಿರುವ ಪ್ಲಸ್ ಪಾಯಿಂಟ್ . ಅಧಿಕಾರದಲ್ಲಿದ್ದಾಗ ಬಂಟ್ವಾಳದ ಸಮಗ್ರ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರೂ, ಕಳೆದ ಬಾರಿ ರೈ ಪರ ನಡೆದ ವ್ಯಾಪಕ ಅಪಪ್ರಚಾರ ಸೋಲಿಗೆ ಪ್ರಮುಖ ಕಾರಣ ಎನ್ನುವುದು ಅವರ ವಿರೋಧಿಗಳು ಒಪ್ಪಿಕೊಳ್ಳುತ್ತಿರುವುದು ಪಕ್ಷದ ಹೈಕಮಾಂಡ್ ಗಮನಕ್ಕೂ ಬಂದಿದೆ.
ಅಲ್ಲದೇ, ಅವರು ಇದು ತನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯೆಂದು ಹೇಳಿರುವುದು, ಭಾವನಾತ್ಮಕವಾಗಿ ಜನರನ್ನು ತಟ್ಟಿದೆ. ಹೀಗಾಗಿ ಮತದಾರರು ಅವರಿಗೊಂದು ಕೊನೆಯ ಅವಕಾಶ ನೀಡುವ ಸಾಧ್ಯತೆಯಿರುವುದಿಂದ ಅವರಿಗೆ ಟಿಕೆಟ್ ಫೈನಲ್ ಮಾಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಬಿಲ್ಲವ ಕ್ಯಾಂಡಿಡೇಟ್
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಒಟ್ಟು ಮತದಾರರಲ್ಲಿ 35 % ದಿಂದ 40% ದಷ್ಟು ಬಿಲ್ಲವ ಮತದಾರರಿದ್ದಾರೆ. ಕಳೆದ ಎಂಟು ಚುನಾವಣೆಯಿಂದ ಕಾಂಗ್ರಸ್ ನಿಂದ ಈ ಕ್ಷೇತ್ರದಲ್ಲಿ ಬಂಟ ಸಮುದಾಯದ ರಮಾನಾಥ ರೈಯವರೇ ಸ್ಪರ್ಧಿಸುತ್ತಿದ್ದಾರೆ. ಅವರ ಬದಲು ಬಿಲ್ಲವ ಕ್ಯಾಂಡಿಡೇಟ್ ಗೆ ಅವಕಾಶ ಕೊಡಬೇಕು ಎನ್ನುವ ಒತ್ತಾಯ ಕಾಂಗ್ರೆಸ್ ನ ಒಂದು ವರ್ಗದಿಂದ ಕೇಳಿ ಬಂದಿತ್ತು.
ಆದರೇ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಬೇಬಿ ಕುಂದರ್, ಮಹಿಳಾ ಕಾಂಗ್ರೆಸ್ ಅದ್ಯಕ್ಷೆಯಾಗಿರುವ ಜಯಂತಿ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಸುರೇಶ್ ಪೂಜಾರಿ, NSUI ಅಧ್ಯಕ್ಷ ಹರ್ಷನ್ ಪೂಜಾರಿ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಭರಪೂರ ಪ್ರಾತಿನಿಧ್ಯ ಸಿಕ್ಕಿರುವುದರಿಂದ ಶಾಸಕ ಸ್ಥಾನವು ಬಿಲ್ಲವ ಸಮುದಾಯಕ್ಕೆ ನೀಡಿದರೇ ಜಾತಿ ಸಮೀಕರಣಕ್ಕೆ ತೊಂದರೆಯಾಗಬಹುದು ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಚಾರ.
ಅಲ್ಲದೇ ಈ ಬಾರಿ ಕಾಂಗ್ರೆಸ್ ಪಕ್ಷವು ಪ್ರತಿ ಕ್ಷೇತ್ರದಿಂದ ಆಕಾಂಕ್ಷಿಗಳಿಂದ ರೂ 2 ಲಕ್ಷ ಪಾವತಿಸಿ ಟಿಕೆಟ್ ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು . ಬಂಟ್ವಾಳ ಕ್ಷೇತ್ರದಿಂದ ಒಟ್ಟು 3 ಅರ್ಜಿಗಳು ಕೆಪಿಸಿಸಿಗೆ ಬಂದಿದ್ದು , ಮೂವರು ಬಂಟ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಬಿ. ರಮಾನಾಥ ರೈ, ಅಶ್ವಿನ್ ಕುಮಾರ್ ರೈ ಮತ್ತು ರಾಕೇಶ್ ಮಲ್ಲಿ ಅರ್ಜಿ ಸಲ್ಲಿಸಿದವರು. ಬಿಲ್ಲವ ಸಮುದಾಯದ ಯಾರೋಬ್ಬರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸದಿರುವುದು ಕೂಡ ಬಿಲ್ಲವ ಲಾಬಿ ಗೆ ಹಿನ್ನಡೆ ಉಂಟಾಗಲು ಕಾರಣ ಎಂದು ಕಾಂಗ್ರೆಸ್ ಮುಖಂಡರೊಬ್ಬರು ನಿಖರ ನ್ಯೂಸಿಗೆ ತಿಳಿಸಿದ್ದಾರೆ. ಅಲ್ಲದೇ ಕ್ಷೇತ್ರದ ಬಹುತೇಕ ಎಲ್ಲ ಬಿಲ್ಲವ ಮುಖಂಡರು ರಮಾನಾಥ ರೈಯವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡುತ್ತಿರುವುದು ಕೂಡ ಅವರಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ.
ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಬೆಳ್ತಂಗಡಿ , ಮಂಗಳೂರು ಉತ್ತರ ಹಾಗೂ ಪುತ್ತೂರು ಕ್ಷೇತ್ರದಿಂದ ತಲಾ ಎರಡೆರಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೆಪಿಸಿಸಿ ಇಟ್ಟುಕೊಂಡಿದೆ ಎಂಬ ಮಾಹಿತಿಯೂ ಲಭಿಸಿದೆ. ಪ್ರತಿ ಕ್ಷೇತ್ರದಲ್ಲೂ ಒಂದು ಹಿರಿಯ ಹಾಗೂ ಒಂದು ಯುವ ಮುಖಂಡನ ಹೆಸರನ್ನು ಫೈನಲ್ ಮಾಡಿ ಇಟ್ಟುಕೊಳ್ಳಲಾಗಿದ್ದು , ಬಳಿಕ ಆಯಾಯಾ ಕ್ಷೇತ್ರದ ಈ ಎರಡು ಅಭ್ಯರ್ಥಿಗಳ ಮಧ್ಯೆ ಹಿರಿಯ ಮುಖಂಡರುಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿ ಒಮ್ಮತದಿಂದ ಅಭ್ಯರ್ಥಿಯನ್ನು ಇಳಿಸುವ ಕಡೆ ಪಕ್ಷದ ಹೈಕಮಾಂಡ್ ಚಿಂತನೆ ನಡೆಸಿದೆ.
ಈ ನಾಲ್ಕು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಒಮ್ಮತದಿಂದ ಚುನಾವಣೆ ಎದುರಿಸಿದರೇ 2 ರಿಂದ ಮೂರು ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎನ್ನುವುದು ಪಕ್ಷ ನಡೆಸಿದ ಸರ್ವೆಯಿಂದ ಕಂಡಕೊಳ್ಳಲಾಗಿದೆ. ಹೀಗಾಗಿ ಯಾವುದೇ ಗೊಂದಲಗಳಿಲ್ಲದೇ ಒಮ್ಮತದ ಅಭ್ಯರ್ಥಿ ಇಳಿಸುವ ಕಡೆ ಪಕ್ಷ ಮುಂದಾಗಿದೆ.