ಪುತ್ತೂರು : ಫೆ 7 : ಜಾಗದ ತಕರಾರಿಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಇತ್ತಂಡಗಳು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಫೆ 6 ರಂದು ನಡೆದಿದೆ. ಕೋಡಿಂಬಾಡಿ ಗ್ರಾಮದ ಕಜೆ ಕೃತ್ಯ ನಡೆದ ಸ್ಥಳ. ಪುತ್ತೂರು ಠಾಣೆಯಲ್ಲಿ ಈ ಕುರಿತಾಗಿ ಒಟ್ಟು ಎರಡು ಪ್ರಕರಣ ದಾಖಲಾಗಿದ್ದು, ಮೊದಲ ಪ್ರಕರಣದಲ್ಲಿ ಸುಂದರ ಪಾತಾಜೆ ಎಂಬವರು ಆರೋಪಿಯಾಗಿದ್ದು, ಎರಡನೇ ಪ್ರಕರಣದಲ್ಲಿ ಸ್ಥಳೀಯ ನಿವಾಸಿಗಳಾದ ಗಿರಿಯಪ್ಪ, ಗೀತಾ, ಶ್ವೇತಾ, ರಂಜಿತಾ, ರಂಜನ್ ಆರೋಪಿಗಳಾಗಿದ್ದಾರೆ.
ಕೋಡಿಂಬಾಡಿ ನಿವಾಸಿ ಗಿರಿಯಪ್ಪ (61) ಅವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ಸುಂದರ ಪಾತಾಜೆ ಎಂಬವರ ಮೇಲೆ ದೂರು ದಾಖಲಾಗಿದೆ. ಆರೋಪಿ ಸುಂದರ ಪಾತಾಜೆ ಹಾಗೂ ದೂರುದಾರರ ಅಣ್ಣನ ಮಕ್ಕಳು ಜೆಸಿಬಿ ಹಿಡಿದುಕೊಂಡು ಮಾರ್ಗ ಮಾಡಲು ಕಜೆಗೆ ಬಂದಿದ್ದು, ಇದನ್ನು ಆಕ್ಷೇಪಿಸಿದಾಗ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಪ್ರಕರಣ ದಾಖಲಾಗಿದೆ.
ಪ್ರತಿ ದೂರು
ಫೆ 6 ರಂದು ಮಧ್ಯಾಹ್ನ ಜೆಸಿಬಿಯಲ್ಲಿ ಮಾರ್ಗದ ಕೆಲಸ ಮಾಡುತ್ತಿದ್ದಾಗ ಆರೋಪಿಗಳಾದ ಗಿರಿಯಪ್ಪ, ಗೀತಾ, ಶ್ವೇತಾ, ರಂಜಿತಾ, ರಂಜನ್ ಎಂಬವರು ದೂರುದಾರೆಗೆ ಅವಾಚ್ಯ ಶಬ್ದಗಳಿಂದ ಬೈದು ಅನುಚಿತವಾಗಿ ವರ್ತಿಸಿ ಆಕೆಯ ಅಕ್ಕನ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಬಿಡಿಸಲು ಬಂದ ಸುಂದರ ಪಾತಾಜೆ ಮತ್ತು ಪರಮೇಶ್ವರವರಿಗೂ ಹಲ್ಲೆ ನಡೆಸಿದ ಆರೋಪಿಗಳು ಗಾಯಾಳುಗಳನ್ನು ಕರೆದುಕೊಂಡು ಹೋಗಲು ಬಂದ ಅಟೋ ಚಾಲಕ ಗಿರಿಯಪ್ಪನಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಪ್ರಕರಣ ದಾಖಲಾಗಿದೆ.