ಉಪ್ಪಿನಂಗಡಿ: ಫೆ 5 : ತಡ ರಾತ್ರಿ ಯುವತಿಯರಿಬ್ಬರ ಜತೆ ಭಿನ್ನ ಕೋಮಿನ ಮೂವರು ಯುವಕರ ತಂಡ ನೇತ್ರಾವತಿ ನದಿ ತೀರದಲ್ಲಿ ವಿಹಾರಿಸುತ್ತಿದ್ದಾಗ ಹಿಂದೂ ಪರ ಸಂಘಟನೆ ಯುವಕರು ನೀಡಿದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಯುವತಿಯರನ್ನು ಅಲ್ಲಿಯೇ ಬಿಟ್ಟು ಯುವಕರು ಪರಾರಿಯಾದ ಘಟನೆ ಫೆ 3 ರಂದು ಬಂಟ್ವಾಳ ತಾಲೂಕಿನ ಪೆರ್ನೆಯ ಬಿಳಿಯೂರು ಗ್ರಾಮದಲ್ಲಿ ನಡೆದಿದೆ.
ಫೆ 3 ರಂದು ರಾತ್ರಿ 11 ಗಂಟೆ ಸುಮಾರಿಗೆ ಓರ್ವ ಮುಸ್ಲಿಂ ಹಾಗೂ ಓರ್ವ ಹಿಂದೂ ಯುವತಿ ಮಂಗಳೂರು ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿಗೆ ಬಂದಿದ್ದಾರೆ. ಅಲ್ಲಿ ಅಂಗಡಿಯೊಂದರ ಬಳಿ ಕೆಲ ಮುಸ್ಲಿಂ ಸಮುದಾಯದ ಹುಡುಗರೊಂದಿಗೆ ಈ ಯುವತಿಯರಿಬ್ಬರು ಮಾತನಾಡಿಕೊಂಡಿದ್ದರು . ಕೆಲ ಹೊತ್ತಿನ ಬಳಿಕ ಯುವಕ ಹಾಗೂ ಯುವತಿಯರು ಜತೆಯಾಗಿ ಬಿಳಿಯೂರು ಬಳಿ ನೇತ್ರಾವತಿ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿ ತೆರಳಿದ್ದಾರೆ. ಇವರನ್ನು ಸಂಘಟನೆಯ ಯುವಕರು ಹಿಂಬಾಲಿಸಿದ್ದರು. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದರು.
ಪೊಲೀಸರ ಹಾಗೂ ಯುವಕರ ಗುಂಪು ತಮ್ಮ ಬಳಿ ಬರುತ್ತಿದ್ದಂತೆ ಯುವಕರು ಸೇತುವೆಯ ಮೂಲಕ ನದಿಯ ಮತ್ತೊಂದು ದಡವಾದ ಸರಳೀಕಟ್ಟೆ ಕಡೆ ಓಡಿ ಪರಾರಿಯಾಗಿದ್ದಾರೆ. ಆದರೇ ಈ ವೇಳೇ ಅವರ ತಂದಿದ್ದ ಬೈಕನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ
ಬಳಿಕ ಅಲ್ಲಿದ್ದ ಯುವತಿಯರಿಬ್ಬರನ್ನು ಸ್ಥಳದಲ್ಲಿದ್ದ ಮೂರು ಆಕ್ಟಿವಾ ಹಾಗೂ ಒಂದು ಬೈಕ್ ಹಾಗೂ ಕೆಲವೊಂದು ಪ್ಯಾಕೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾದಕ ದ್ರವ್ಯ ಸೇವಿಸಿ ಮೋಜು ಮಸ್ತಿ ಮಾಡುವ ಉದ್ದೇಶದಿಂದ ಅಲ್ಲಿ ಯುವಕ ಯುವತಿಯರು ಗುಂಪು ಸೇರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುವತಿಯರನ್ನು ದೇರಳಕಟ್ಟೆಯ ಮೆಡಿಕಲ್ ಸೆಂಟರ್‌ಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದು, ಅಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಬಳಿಕ ಯುವತಿಯರನ್ನು ಬಿಟ್ಟು ಕಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.