ವಿಟ್ಲ: ಉಡುಪಿ – ಕಾಸರಗೊಡು 4೦೦ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ರಚನೆಯ ವಿಚಾರವನ್ನು ಮುಚ್ಚಿಟ್ಟ ದ. ಕ. ಜಿಲ್ಲಾಧಿಕಾರಿಗಳು, ರೈತರ ಸಭೆಯನ್ನು ನಡೆಸದೆ, ಗ್ರಾಮ ಮಟ್ಟದಲ್ಲಿ ರೈತರಿಗೆ ಯಾವುದೇ ಮಾಹಿತಿಯನ್ನೂ ನೀಡದೆ, ಖಾಸಗೀ ಕಂಪನಿಯ ಕಾರ್ಮಿಕನಂತೆ ಕಛೇರಿಯಲ್ಲಿ ಕುಳಿತು ದಾಖಲೆಗಳನ್ನು ಸಿದ್ದಪಡಿಸಿ ರೈತರಿಗೆ ಅನ್ಯಾಯ ಎಸಗುವ ಕಾರ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.
ರೈತರ ಕೃಷಿ ಜಮೀನುಗಳ ಬಗ್ಗೆ ಸರಿಯಾಗಿ ಸ್ಥಳಕ್ಕೆ ಬಂದು ಮಾಹಿತಿಯನ್ನು ಪಡೆಯದ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ನ್ಯಾಯಾಲಯಕ್ಕೆ ನೀಡುವ ಕಾರ್ಯವನ್ನು ಮಾಡುವಂತಿದೆ. ಕಂಪನಿಗಳಿಗೆ ಲಾಭಮಾಡುವ ಉದ್ದೇಶದಿಂದ ರೈತರನ್ನು ಬೀದಿಗೆ ಹಾಕುವ ಕಾರ್ಯ ಮಾಡುವ ಕಾರ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಭೂಮಿ ನಮ್ಮ ಹಕ್ಕಾಗಿದ್ದು, ಅದನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ರೈತರ ಕೃಷಿ ಭೂಮಿಯನ್ನು ಬಿಟ್ಟು, ಕಂಪನಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಿ. ಇಲ್ಲದೇ ಹೋದಲ್ಲಿ ಕಂಪನಿ ಹಾಗೂ ಜಿಲ್ಲಾಡಳಿತ ನಮ್ಮ ಹೆಣದ ಮೇಲೆ ವಿದ್ಯುತ್ ಮಾರ್ಗ ನಿರ್ಮಿಸಲಿ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಅರಣ್ಯ ಭೂಮಿಯ ಮೂಲಕ ಹೋಗುವುದರಿಂದ ೧೦ ಸಾವಿರಕ್ಕೂ ಅಧಿಕ ಮರಗಳ ನಾಶವಾಗದೆ. ಇದರಿಂದ ಹವಾಮಾನದ ಮೇಲೆ ತೀವ್ರ ಪರಿಣಾಮವನ್ನು ಬೀರಲಿದೆ. 4೦೦ಕೆ.ವಿ. ವಿದ್ಯುತ್ ಮಾರ್ಗದಿಂದ ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪವರ್ ಮನುಷ್ಯ ಸೇರಿ ಜೀವ ಸಂಕುಲದ ಮೇಲೆ ತೀವ್ರ ಪರಿಣಾಮವನ್ನು ಬೀರುವ ಬಗ್ಗೆ ವೈಜ್ಞಾನಿಕ ವರದಿಗಳಿದ್ದರೂ, ಸರ್ಕಾರ ಹಾಗೂ ಜಿಲ್ಲಾಡಳಿತ ಮುಚ್ಚಿಡುವ ಪ್ರಯತ್ನವನ್ನು ಮಾಡುತ್ತಿದೆ. ಕೇರಳದಲ್ಲಿ ವಿದ್ಯುತ್ ಮಾರ್ಗ ರಚನೆಗೆ ಕೃಷಿ ಭೂಮಿಗಳು ಅಡ್ಡಿ ಮಾಡುತ್ತದೆ ಎಂಬ ಕಾರಣಕ್ಕೆ ಸಂಪೂರ್ಣ ಯೋಜನೆಯನ್ನೇ ಕೈಬಿಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಕೇರಳ ವಿದ್ಯುತ್ ಮಾರ್ಗ ಹೋಗಲು ಅಡಿಕೆ, ತೆಂಗು, ಗೇರು, ರಬ್ಬರ್ ತುಂಬಿರುವ ಕೃಷಿ ಭೂಮಿಯನ್ನೇ ಬಳಸಿಕೊಳ್ಳಲಾಗುತ್ತಿರುವುದು ವಿಪರ್ಯಾಸವಾಗಿದೆ ಎಂದರು.
ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ
́400 ಕೆ.ವಿ. ವಿದ್ಯುತ್ ಮಾರ್ಗ ರಚನೆಯ ಬಗ್ಗೆ ಇಲ್ಲಿನ ತನಕ ನೀಡದೆ ಸ್ಯಾಟಲೈಟ್ ಹಾಗೂ ಹೆಲಿಕಾಪ್ಟರ್ ಬಳಸಿ ಸರ್ವೇ ಕಾರ್ಯಗಳನ್ನು ಕಂಪನಿ ಮಾಡಿದ್ದು, ಅದನ್ನೇ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡುವ ಕಾರ್ಯಕ್ಕೆ ಮುಂದಾಗುವ ಮೂಲಕ ಅಮಾಯಕ ರೈತರನ್ನು ವಂಚಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಭೂಸುಧಾರಣೆ ಕಾಯ್ದೆ ಮೂಲಕ ರೈತರಿಗೆ ಸಿಕ್ಕ ಒಂದು ಎಕ್ರೆ ಅರ್ಧ ಎಕ್ರೆ ಕೃಷಿ ಭೂಮಿಯಲ್ಲಿ ಸಣ್ಣ ಹಾಗೂ ಅತೀ ಸಣ್ಣ ರೈತರು ಕೃಷಿ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಈ ವಿದ್ಯುತ್ ಮಾರ್ಗದಿಂದ ಸಂಪೂರ್ಣ ಕೃಷಿಯನ್ನು ಕಳೆದುಕೊಂದು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ಸಂತ್ರಸ್ತ ರೈತರಾದ ಚಿತ್ತರಂಜನ್, ವಾಸು ಗೌಡ, ರಾಬರ್ಟ್ ಮತ್ತಿತರರು ಉಪಸ್ಥಿತರಿದ್ದರು.