ಮಂಗಳೂರು: ಫೆ.11ರಂದು ಅಮಿತ್ ಶಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ (Amit Shah Puttur Visit) ಆಗಮಿಸುತ್ತಿದ್ದಾರೆ. ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಸಮಾವೇಶ ಇದಾಗಿದ್ದರೂ, ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಕುತೂಹಲ ಕೆರಳಿಸಿದೆ.
ಕರಾವಳಿಯ ಮಟ್ಟಿಗೆ ಕಮಲ ಪಕ್ಷದ ಸೈದ್ಧಾಂತಿಕ ರಾಜಧಾನಿ ಎಂದೇ ಕರೆಯಲ್ಪಡುವ ಪುತ್ತೂರಿನಲ್ಲಿ ಶಾ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಈಗಾಗಲೇ ಪಕ್ಷದ ಹೈಕಮಾಂಡ್ ಪ್ರತೀ ಜಿಲ್ಲೆಯಿಂದಲೂ ಖಾಸಗಿ ಅಧ್ಯಯನ ಸಂಸ್ಥೆಗಳ ಮೂಲಕ ಗ್ರೌಂಡ್ ರಿಪೋರ್ಟ್ ಪಡೆದುಕೊಂಡಿದೆ.ಪ್ರಸ್ತುತ ಜಿಲ್ಲೆಯ 8 ಕ್ಷೇತ್ರಗಳಲ್ಲಿ7ರಲ್ಲಿ ಬಿಜೆಪಿ ಶಾಸಕರಿದ್ದಾರೆ.
ಎಲ್ಲಾ ಹಾಲಿಗಳಿಗೆ ಈ ಬಾರಿಯೂ ಟಿಕೆಟ್ ಸಿಗಲಿದೆ ಎಂಬ ಮೇಲ್ನೋಟದ ಲೆಕ್ಕಾಚಾರವಿದೆಯಾದರೂ, ಹೈಕಮಾಂಡ್ ತರಿಸಿಕೊಂಡ ವರದಿ ಯಾವುದೇ ಕ್ಷೇತ್ರದಲ್ಲೂ ಲೆಕ್ಕಾಚಾರ ಬುಡಮೇಲು ಮಾಡಬಹುದು.
ಅಮಿತ್ ಶಾ ಕೇರಳದ ಕಣ್ಣೂರು ಮೂಲಕ ಈಶ್ವರಮಂಗಲಕ್ಕೆ ಬಂದು ನಂತರ ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ರಸ್ತೆ ಮಾರ್ಗದ ಮೂಲಕ ತೆಂಕಿಲ ವಿವೇಕಾನಂದ ಶಾಲೆಯ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ತೆರಳಲಿದ್ದಾರೆ.
ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲೂ ಬಿಜೆಪಿ ಟಿಕೆಟ್‌ಗಾಗಿ ಯಾರೂ ಬಹಿರಂಗ ಹೇಳಿಕೆ, ಅಭಿಯಾನ ನಡೆಸಿಲ್ಲ.
ಪುತ್ತೂರಿನಲ್ಲಿ ಮಾತ್ರ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರ ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ. ಈ ಬಾರಿ ಪುತ್ತಿಲರಿಗೆ ಪುತ್ತೂರಿನ ಟಿಕೇಟ್ ನೀಡಬೇಕೆಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಪುತ್ತಿಲ ಅಭಿಮಾನಿಗಳು ಒತ್ತಾಯಿಸುತಿದ್ದಾರೆ.
2018ರಲ್ಲಿ ಕೊನೆ ಗಳಿಗೆವರೆಗೆ ಅರುಣ್ ಕುಮಾರ್ ಪುತ್ತಿಲರಿಗೆ ಟಿಕೇಟ್ ಫಿಕ್ಸ್ ಎಂದು ಸಂದೇಶ ಹರಿದಾಡಿದರು ಕೊನೆ ಗಳಿಗೆಯಲ್ಲಿ ಕೈತಪ್ಪಿತು. ನಂತರ ಬಿಜೆಪಿಯಲ್ಲಿ ಮಹತ್ವದ ಹುದ್ದೆಯ ಭರವಸೆ ಪುತ್ತಿಲರಿಗೆ ನೀಡಿದ್ದರು ಇಷ್ಟರತನಕ ಹುದ್ದೆ ಘೋಷಣೆ ಆಗಲೇ ಇಲ್ಲ.
ಮೊದಲು ವಾಟ್ಸಾಪ್ ಗ್ರೂಪ್ ಪ್ರಾರಂಭಿಸಿ 5000 ಕ್ಕೂ ಅಭಿಮಾನಿಗಳನ್ನು ಸೇರಿಸಿಕೊಂಡಿದ್ದಾರೆ. ಈ ಗ್ರೂಪ್ 2-3 ದಿನದಲ್ಲೇ ಪೂರ್ತಿಯಾಗಿರುವುದು ವಿಶೇಷವಾಗಿದೆ.
ನಂತರ ಟ್ವಿಟರ್ ನಲ್ಲಿ ಪುತ್ತೂರಿಗೆ ‘ಪುತ್ತಿಲ ಫಾರ್ ಪುತ್ತೂರು’ #PuttilaForPuttur ಅಭಿಯಾನ ನಡೆಯುತ್ತಿದ್ದು, ಟ್ವಿಟರ್ ಮೂಲಕ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರಿಗೆ ತಲುಪಿಸಲಾಗಿದೆ.
ಇದೀಗ ಪುತ್ತೂರಿನ ಪ್ರಮುಖ ಕಡೆ ಬೃಹತ್ ಫ್ಲೆಕ್ಸ್ ತಲೆಎತ್ತಿದೆ. ಅಮಿತ್ ಷಾ ಆಗಮನಕ್ಕೆ ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳು ಅಮಿತ್ ಷಾ ರಿಗೆ ಸ್ವಾಗತ ಕೋರಿ 15 ಅಡಿ ಎತ್ತರ 30 ಅಡಿ ಅಗಲದ ಬೃಹತ್ ಕಟೌಟ್ ಹಲವು ಕಡೆ ಹಾಕಿದ್ದಾರೆ.
ಈ ಬೃಹತ್ ಕಟೌಟ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು, ರೈತರು ಸಹಕಾರಿಗಳು ಫೆ.11ರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಪುತ್ತೂರು ಸಮಾವೇಶವನ್ನು ಚಾರಿತ್ರಿಕಗೊಳಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.