ಮಂಗಳೂರು : “ಕಾಂತಾರ’ (Kanthara) ಚಲನಚಿತ್ರ ವಿಶ್ವದೆಲ್ಲೆಡೆ ತುಳುನಾಡಿನ ದೈವಾರಾಧನೆಯ ಮಹತ್ವವನ್ನು ಪ್ರಚುರಪಡಿಸಿದ ಬೆನ್ನಲ್ಲೇ ರಾಜ್ಯ ಸರಕಾರ ದೈವ ನರ್ತಕರಿಗೆ 2 ಸಾವಿರ ರೂ. ಮಾಸಾಶನ ಘೋಷಿಸಿತ್ತು. ಸಚಿವ ಸುನೀಲ್ ಕುಮಾರ್ (Sunil Kumar) ಈ ಯೋಜನೆ ಘೋಷಿಸಿ 100 ದಿನ ಕಳೆದರೂ ಅದಿನ್ನೂ ಜಾರಿಯಾಗಲು ಮುಹೂರ್ತವೇ ಕೂಡಿ ಬಂದಿಲ್ಲ.
ಕರ್ನಾಟಕ ಜಾನಪದ ಅಕಾಡೆಮಿಯಿಂದ ಈ ಹಿಂದಿನಿಂದಲೂ ದೈವ ನರ್ತಕರನ್ನು ಒಳಗೊಂಡು ಕಲಾವಿದರಿಗೆ ನೀಡಲಾಗುವ ಮಾಸಾಶನದಡಿ ಈಗಲೂ ಅರ್ಜಿಗಳನ್ನು ಪಡೆಯಲಾಗುತ್ತಿದೆ. ಆದರೆ ದೈವ ನರ್ತಕರಿಗೆಂದು ಯಾವುದೇ ಹೊಸ ಅಥವಾ ಪ್ರತ್ಯೇಕ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿಲ್ಲ.

ಅಕಾಡೆಮಿಯು ಜಾನಪದ ಕಲಾವಿದರಿಗೆ 2000 ರೂ. ಮಾಸಾಶನ ನೀಡುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸುಮಾರು 25 ಮಂದಿ ದೈವ ನರ್ತಕರು ಮಾಸಾಶನ ಪಡೆಯುತ್ತಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಿದರೆ, ಹೊಸ ಮಾರ್ಗ ಸೂಚಿ ಪ್ರಕಟವಾಗಿಲ್ಲ. ಈ ಹಿಂದಿನಂತೆಯೇ ದೈವ ನರ್ತಕರ ಅರ್ಜಿಯನ್ನು ಅಕಾಡೆಮಿಗೆ ಕಳುಹಿಸಲಾಗು ತ್ತಿದೆ ಎನ್ನುತ್ತಾರೆ.
ಕಳೆದ ಅಕ್ಟೋಬರ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ದೈವ ನರ್ತಕರಿಗೆ ತಲಾ 2 ಸಾವಿರ ರೂ. ಮಾಸಾಶನ ಘೋಷಿಸಿದ್ದರು. ದೈವ ನರ್ತಕರು ಸಂತಸವನ್ನೂ ವ್ಯಕ್ತಪಡಿಸಿದ್ದರು. ಸುನೀಲ್ ಕುಮಾರ್ ಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿತು.

ದೈವ ನರ್ತಕರ ಕುರಿತು ಪ್ರತ್ಯೇಕ ಸಮೀಕ್ಷೆ ನಡೆದಿಲ್ಲ. ಇಲಾಖೆಯಲ್ಲೂ ನಿಖರ ಅಂಕಿ ಆಂಶಗಳಿಲ್ಲ. ದೈವಾರಾಧಕರಾಗಿ ದೈವ ನರ್ತಕರು, ಜೀಟಿಗೆ ಹಿಡಿಯುವವರು, ಪಾತ್ರಿಗಳು ಸೇರಿದಂತೆ ಹಲವರು ಈ ಕ್ಷೇತ್ರದಲ್ಲಿ ಇರುವ ಕಾರಣ ಯಾರನ್ನು ದೈವ ನರ್ತಕರಾಗಿ ಪರಿಗಣಿಸಬಹುದು ಎಂಬ ಬಗ್ಗೆ ಸ್ಪಷ್ಟತೆಯೂ ಇಲ್ಲ.
ಅಂದಾಜಿನ ಪ್ರಕಾರ ಕರಾವಳಿಯಲ್ಲಿ ಐದು ಸಾವಿರದಷ್ಟು ಮಂದಿ ದೈವನರ್ತಕರಿದ್ದಾರೆ ಎನ್ನಲಾಗಿದೆ.ದ.ಕ. ಜಿಲ್ಲೆಯಲ್ಲಿ ಸುಮಾರು 10 ಹಾಗೂ ಉಡುಪಿ ಜಿಲ್ಲೆಯಲ್ಲಿ 15 ಮಂದಿ ದೈವ ನರ್ತಕರು ಮಾಸಾಶನ ಪಡೆಯುತ್ತಿದ್ದಾರೆ.3 ತಿಂಗಳಿನಿಂದೀಚೆಗೆ ಮಾಸಾಶನಕ್ಕಾಗಿ 10ರಷ್ಟು ಅರ್ಜಿಗಳು ಬಂದಿವೆ.ಅದನ್ನು ಜನಪದ ಅಕಾಡೆಮಿಗೆ ರವಾನಿಸಲಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. ಉಡುಪಿ ಜಿಲ್ಲೆಯಲ್ಲೂ ಕೆಲವರು ಅರ್ಜಿ ಪಡೆದಿದ್ದಾರೆ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ.
ವಿವಿಧ ಜಾನಪದ ಕಲೆಗಳ ಕಲಾವಿದರ ಪಟ್ಟಿ ಇದ್ದು, ಇವರಿಗೂ ಕಲಾವಿದರ ಪಟ್ಟಿಯಿದ್ದು, ಮಾಸಾಶನ ಲಭ್ಯವಾಗುತ್ತಿದೆ. ಮಾನದಂಡದ ಪ್ರಕಾರ ಇದನ್ನು ಪಡೆಯಲು ಈಗಾಗಲೇ ವೃದ್ಧಾಪ್ಯ ಸೇರಿದಂತೆ ಇತರ ಪಿಂಚಣಿ ಪಡೆಯುವವರು ಅರ್ಹರಲ್ಲ.
ಈ ಯಾವುದೇ ಸೌಲಭ್ಯ ಹೊಂದಿರದ ದೈವ ನರ್ತಕರ ಅರ್ಜಿಗಳನ್ನು ಮಾತ್ರ ಮಾಸಾಶನಕ್ಕೆ ಪರಿಗಣಿಸಲಾಗುತ್ತಿದೆ. ಇದನ್ನು ಪಡೆಯಲು 60 ವರ್ಷವಾಗಿರಬೇಕು. ತಹಶೀಲ್ದಾರರಿಂದ ದೃಢೀಕರಣವನ್ನು ಹೊಂದಿರಬೇಕಾಗುತ್ತದೆ.ಈ ಮಧ್ಯೆ, ದೈವ ನರ್ತಕರು 50 ವರ್ಷ ಬಳಿಕ ನರ್ತನ ಮಾಡಲಾರರು. ಹಾಗಾಗಿ ಮಾಸಾಶನಕ್ಕಿರುವ ವಯೋಮಿತಿಯನ್ನು 50 ವರ್ಷಕ್ಕೆ ಇಳಿಸಬೇಕು ಎನ್ನುವುದು ಹಲವರ ಆಗ್ರಹ. ಈ ಕುರಿತಂತೆ ಸಚಿವರು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಬೇಡಿಕೆಯೂ ದೈವನರ್ತಕರಿಂದ ಸಲ್ಲಿಕೆಯಾಗಿದೆ.