ಪುತ್ತೂರು: ಫೆ 4: ಮನೆಯಿಂದ ಶಾಲೆಗೆ ಹೊರಟ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಗೊಂದಲ ಸೃಷ್ಟಿಯಾಗಿದ್ದು ಪ್ರಕರಣ ಠಾಣೆ ಮೆಟ್ಟಿಲೇರಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಲ್ಲಿರುವ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯ 30ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಾಲೆಗೆ ಬಾರದಿರುವುದು ಬೆಳಕಿಗೆ ಬರುತ್ತಿದ್ದಂತೆ ಆತಂಕ ಗೊಂಡ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪುತ್ತೂರು ನಗರ ಠಾಣೆಗೆ ದೂರು ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಚಿಕ್ಕಮುಡ್ನೂರು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 58 ವಿದ್ಯಾರ್ಥಿಗಳಿದ್ದು, ಶನಿವಾರ ಶಾಲೆಗೆ 38 ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದರು. ಸ್ಥಳೀಯವಾಗಿ ಜಾತ್ರೆ ನಡೆಯುತ್ತಿದ್ದು, ಕೆಲವು ವಿದ್ಯಾರ್ಥಿಗಳು ಜಾತ್ರೆಯ ಕಾರಣಕ್ಕೆ ರಜಾ ಹಾಕಿರುವ ಸಾಧ್ಯತೆ ಇದೆ. ಆದರೆ ಇಷ್ಟೊಂದು ಮಕ್ಕಳು ರಜಾ ಹೇಗೆ ಎಂಬ ಬಗ್ಗೆ ಮಾತುಗಳು ಪೋಷಕರವರೆಗೆ ತಲುಪಿದ್ದು, ವಿದ್ಯಾರ್ಥಿಗಳು ಇಲ್ಲದ ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಗೆ ಪೊಷಕರು ಹಾಗೂ ಸ್ಥಳೀಯ ಮುಖಂಡರು ಆಗಮಿಸಿ ಮಾಹಿತಿ ಪಡೆಯುವ ಕಾರ್ಯ ಮಾಡಿದ್ದಾರೆ.
ಮಕ್ಕಳು ಶಾಲೆಯಲ್ಲಿ ಇಲ್ಲದ ವಿಚಾರದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ಅವರಿಗೂ ಮಾಹಿತಿ ನೀಡಿದ್ದು, ಅವರು ಶಾಲೆಗೆ ಆಗಮಿಸಿ ತನಿಖೆಗೆ ಮುಂದಾಗಿದ್ದಾರೆ. ಶಾಲೆಯಲ್ಲಿ ಸರ್ಕಾರದಿಂದ ಇಬ್ಬರು ಶಿಕ್ಷಕರಿದ್ದು, ಮುಖ್ಯ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕಿ ಹಾರಾಡಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನೋರ್ವ ಶಿಕ್ಷಕಿ ನಾಪತ್ತೆಯಾಗಿದ್ದು, ದೂರವಾಣಿಯೂ ಸ್ವಿಚ್ ಆಪ್ ಮಾಡಿದ್ದಾರೆನ್ನಲಾಗಿದೆ. ಓರ್ವ ಅತಿಥಿ ಶಿಕ್ಷಕಿ ಹಾಗೂ ಮೂವರು ಅಕ್ಷರದಾಸೋಹ ಸಿಬ್ಬಂದಿ ಶಾಲೆಯಲ್ಲಿದ್ದು, ೫೮ ವಿದ್ಯಾರ್ಥಿಗಳಿಗೂ ಊಟ ಸಿದ್ದ ಪಡಿಸಲಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್., ಕಾರ್ಯದರ್ಶಿ ಚಿದಾನಂದ, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯ ಏಕ, ಸದಸ್ಯರಾದ ರಾಘವೇಂದ್ರ, ತಿಮ್ಮಪ್ಪ ಪೂಜಾರಿ, ಎಸ್. ಡಿ. ಎಂ. ಸಿ ಅಧ್ಯಕ್ಷೆ ನಳಿನಿ ಮತ್ತಿತರರು ಶಾಲೆಗೆ ಆಗಮಿಸಿದ್ದರು.

ಚೀಟಿ ಪತ್ತೆ!
ವಿದ್ಯಾರ್ಥಿಗಳಲ್ಲಿ ಚೀಟಿ ಒಂದು ಪತ್ತೆಯಾಗಿದ್ದು, ಇದರಲ್ಲಿ ಶಾಲೆಗೆ ಬರುವ ಸಂದರ್ಭ ಬಣ್ಣದ ಅಂಗಿಯನ್ನು ಹಾಕಿಕೊಂಡು ಜತೆಗೆ ೧೦೦ರೂ ಹಿಡಿದು ಬರುವಂತೆ ಸೂಚಿಸಲಾಗಿತ್ತೆನ್ನಲಾಗಿದೆ. ಶಾಲೆಯ ಮುಖ್ಯಶಿಕ್ಷಕಿಗಾಗಲೀ, ಎಸ್. ಡಿ.ಎಂ.ಸಿ. ಗಾಗಲೀ ಮಾಹಿತಿಯನ್ನು ನೀಡದೆ ಶಿಕ್ಷಕಿಯ ಜತೆಗೆ ವಿದ್ಯಾರ್ಥಿಗಳು ನಾಪತ್ತೆಯಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಶಾಲೆಯನ್ನು ಅಭಿವೃದ್ದಿಪಡಿಸಲು ನಾವು ಗ್ರಾಮಸ್ಥರು ವರ್ತಿಸುತ್ತಿದ್ದು ಈ ರೀತಿಯ ಘಟನೆಗಳು ಅದಕ್ಕೆ ಅಡ್ಡಿಯಾಗಿದೆ. ಶಿಕ್ಷಣ ಇಲಾಖೆ ಕೂಲಂಕುಷವಾಗಿ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್ಸು ಕರೆ ತರಬೇಕೆಂದು ನಾಗೇಶ್ ಟಿ ಎಸ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ