ಚೆನ್ನೈ,ಫೆ 4 : ಖ್ಯಾತ ಗಾಯಕಿ ವಾಣಿ ಜಯರಾಂ ನಿಧನರಾಗಿದ್ದಾರೆ. ಚೆನ್ನೈ ನ ಮನೆಯ ಕೋಣೆಯೊಂದರಲ್ಲಿ ಅನುಮಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಚೈನ್ನೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಾಣಿ ಜಯರಾಂ ರಿಗೆ 77 ವರ್ಷ ವಯಸ್ಸಾಗಿತ್ತು.
ವಾಣಿ ಜಯರಾಂ ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ. ಇವರು ತಮಿಳು, ಕನ್ನಡ, ತೆಲುಗು, ತುಳು, ಹಿಂದಿ, ಮರಾಠಿ, ಮಲಯಾಳಂ, ಬಂಗಾಳಿ, ಒಡಿಯಾ ಸೇರಿದಂತೆ, ಒಟ್ಟು 14 ಭಾಷೆಗಳಲ್ಲಿ ಗೀತೆಗಳನ್ನು ಹಾಡಿದ್ದಾರೆ.
ವಾಣಿಯವರು ತಮಿಳುನಾಡಿನ ಒಂದು ಅಯ್ಯಂಗಾರ್ ಪರಿವಾರದಲ್ಲಿ ವೆಲ್ಲೂರಿನ ಇಡಂಗು ಗ್ರಾಮದಲ್ಲಿ 1945ರ ನವೆಂಬರ್ 30ರಂದು ಜನಿಸಿದರು. ವಾಣಿಯವರ ತಾಯಿ ಪ್ರಸಿದ್ಧ ಸಂಗೀತ ವಿದ್ವಾಂಸ, ರಂಗ ರಾಮಾನುಜ ಅಯ್ಯಂಗಾರ್ ರ ಶಿಷ್ಯೆ.ಹೀಗಾಗಿ ಇವರಿಗೆ ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಇತ್ತು. ತಮ್ಮ ಐದನೇ ವಯಸ್ಸಿಗೆ ಕಡಲೂರು ಶ್ರೀನಿವಾಸ ಅಯ್ಯಂಗಾರರ ಬಳಿ ಸಂಗೀತಾಭ್ಯಾಸ ಶುರು ಮಾಡಿದರು. ಏಳನೇ ವಯಸ್ಸಿಗೆ ದೇಶಿಕಾಚಾರ್ ಕೃತಿಗಳನ್ನು ಸ್ಫುಟವಾಗಿ ,ಸರಾಗವಾಗಿ ಹಾಡುತ್ತಿದ್ದರು. ಏಂಟನೆಯ ವಯಸ್ಸಿನಲ್ಲೇ ಆಕಾಶವಾಣಿಯಲ್ಲಿ ಇವರ ದನಿ ಪ್ರಸರವಾಗಿತ್ತು.ತಿರುವನಂತಪುರದಲ್ಲಿ 3 ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿದಾಗ ಇವರಿಗೆ ಕೇವಲ ಹತ್ತು ವರ್ಷ. ವಾಣಿಯವರದು ಬಹುಮುಖ ಪ್ರತಿಭೆ. ಚಿತ್ರರಚನೆ ಜೊತೆಗೆ ಓದಿನಲ್ಲೂ ಮುಂದು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕನ್ನಡ ಚಿತ್ರ ಸಂಗೀತಕ್ಕೆ 1973ರಲ್ಲಿ ಪದಾರ್ಪಣೆ ಮಾಡಿ 90ರ ದಶಕದ ಆದಿಯವರೆಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಮರೆಯಲಾಗದ ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅವರು ಹಾಡಿದ ಮೊದಲ ಚಿತ್ರ ’ಛಲಗಾರ’ ತೆರೆ ಕಾಣಲಿಲ್ಲ. ಕೌಬಾಯ್ ಕುಳ್ಳ,ಕೆಸರಿನ ಕಮಲ, ಉಪಾಸನೆ, ಶುಭಮಂಗಳ, ದೀಪ, ಅಪರಿಚಿತ, ಕಸ್ತೂರಿ ವಿಜಯ, ಚಿರಂಜೀವಿ, ಬೆಸುಗೆ, ಬಿಳೀ ಹೆಂಡ್ತಿ ಮೊದಲಾದ ಚಿತ್ರಗಳಲ್ಲಿ ಹಾಡಿದ್ದಾರೆ. ತಮ್ಮನ್ನು ಪರಿಚಯಿಸಿದ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಸಂಗೀತ ನಿರ್ದೇಶನದ ಕಡೆಯ ಚಿತ್ರ ನೀಲಾ. ಇವರು ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಡಿದ ಚಿತ್ರವಾಗಿರುತ್ತದೆ. , ಒಟ್ಟಾರೆ 14 ಭಾಷೆಗಳಲ್ಲಿ 8800 ಗೀತೆಗಳನ್ನು ಹಾಡಿದ್ದಾರೆ.
ಇತ್ತೀಚೆಗೆ ಇವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರಿಗೆ ಸಿಕ್ಕಿತ್ತು.