ಪುತ್ತೂರು : 2023ರಲ್ಲಿ ಚುನಾವಣೆಯೂ ಇರುವುದರಿಂದ ಅಮಿತ್ ಶಾ ಭೇಟಿಯ ಲಾಭ ಪಡೆದುಕೊಳ್ಳಲು ಎಲ್ಲಾ ಪ್ರಯತ್ನ ಮಾಡಲಿದ್ದೇವೆ. ಶಾ ಭೇಟಿಯಿಂದ ಮುಂದಿನ ಚುನಾವಣೆಯಲ್ಲಿ ನಮಗೆ ಅತಿ ಹೆಚ್ಚು ಬಲ ಬರುತ್ತದೆ. ಅಮಿತ್ ಶಾ, ಮೋದಿ ಹೋದಲ್ಲೆಲ್ಲಾ ಪಾರ್ಟಿ ಗೆದ್ದಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಕ್ಷೇತ್ರಗಳನ್ನೂ ನಮಗೆ ಗೆಲ್ಲಲು ಇದರಿಂದ ಲಾಭವಾಗಲಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಫೆ.11ರಂದು ಪುತ್ತೂರಿಗೆ ಭೇಟಿ ನೀಡಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಹಾಗೂ ಈಗಾಗಲೇ ನಡೆಸಲಾಗುತ್ತಿರುವ ಸಿದ್ದತೆಯ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು
ಫೆ.11ರಂದು ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ಕ್ಯಾಂಪ್ಕೋ ಕಡೆಯಿಂದ ಸಂಪೂರ್ಣ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. 50 ವರ್ಷಗಳ ಹಿಂದೆ ನಿರ್ಮಾಣವಾಗಿರುವ, 30 ವರ್ಷಗಳ ಹಿಂದೆ ಚಾಕೊಲೇಟ್ ಫ್ಯಾಕ್ಟರಿಯನ್ನು ನಿರ್ಮಿಸಿರುವ ದೇಶದ ಸಹಕಾರ ಸಂಸ್ಥೆಗಳಲ್ಲಿ ಅತೀದೊಡ್ಡ ಸಂಸ್ಥೆ ಕ್ಯಾಂಪ್ಕೋ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರೇ ಸುವರ್ಣ ಮಹೋತ್ಸವಕ್ಕೆ ಬರ್ತಿದ್ದಾರೆ ಎಂದು ಕಟೀಲ್ ಹೇಳಿದರು.
ಅವರನ್ನು ಪಕ್ಷದ ವತಿಯಿಂದ ಆದರಪೂರ್ವಕವಾಗಿ ಸ್ವಾಗತಿಸಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಎಲ್ಲಾ ಮತಗಟ್ಟೆಗಳಿಂದ ಕಾರ್ಯಕರ್ತರು ಬರುತ್ತಾರೆ. ಕಾರ್ಯಕ್ರಮಕ್ಕೆ ಬೇಕಾದ ವೇದಿಕೆ, ಸಭಾಂಗಣ ಎಲ್ಲಾ ವ್ಯವಸ್ಥೆಗಳನ್ನು ಕ್ಯಾಂಪ್ಕೋ ನೋಡಿಕೊಳ್ಳುತ್ತದೆ. ಹೊರಗಿನ ಎಲ್ಲಾ ವ್ಯವಸ್ಥೆಗಳನ್ನು ಭಾರತೀಯ ಜನತಾ ಪಕ್ಷವು ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಫೆ 2 ರಂದು ಸಮಾವೇಶ ನಡೆಯಲಿರುವ ಪುತ್ತೂರು ತೆಂಕಿಲ ವಿವೇಕಾನಂದ ಶಾಲೆಯ ಮೈದಾನಕ್ಕೆ ಆಗಮಿಸಿದ ಅವರು ಸ್ಥಳೀಯ ಜನ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರ ಜತೆ ತಯಾರಿ ಕುರಿತು ಮಾತುಕತೆ ನಡೆಸಿದರು.

ಅಧಿಕಾರಿಗಳಿಗೆ ಕಿವಿಮಾತು
ಬಳಿಕ ನಿರೀಕ್ಷಣಾ ಮಂದಿರದಲ್ಲಿ ದಕ್ಷಿಣ ಕನ್ನಡ ಸಂಸದರ ನೇತ್ರತ್ವದಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಶೆ ಕುರಿತು ವಿಸ್ತೃತವಾಗಿ ಚರ್ಚಿಸಿದರು.ವೇದಿಕೆಯ ಸಿದ್ಧತೆ , ಭದ್ರತೆಯ ದೃಷ್ಟಿಯಿಂದ ವೇದಿಕೆ ಮುಂಭಾಗದಲ್ಲಿ ಒದಗಿಸಬೇಕಾದ ಸ್ಥಳಾವಕಾಶ ಹಾಗು ಸಭಿಕರ ಗ್ಯಾಲರಿಯ ಗೆ ಆಸನ ವ್ಯವಸ್ಥೆಯ ಬಗ್ಗೆ ಹಾಗೂ ಇದಕ್ಕಾಗಿ ಮೈದಾನವನ್ನು ಸಮತಟ್ಟು ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಿಯೂ ಸಣ್ಣ ಲೋಪ ಕೂಡಾ ಆಗಬಾರದು. ಒಟ್ಟು ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯಬೇಕು. ಸಣ್ಣ ತೊಂದರೆ ಆದರೂ ದೊಡ್ಡ ವಿವಾದವಾಗಬಹುದು. ಇದರಿಂದ ನಮಗೂ ನಿಮಗೂ ಕಪ್ಪು ಚುಕ್ಕೆ. ಅಗತ್ಯ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಬಳಿಕ ಈಶ್ವರಮಂಗಲದ ಹನುಮಗಿರಿಗೆ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಗಿರೀಶ್‌ನಂದನ್, ಡಿವೈಎಸ್ಪಿ ವೀರಯ್ಯ ಹಿರೇಮಠ್ ಜತೆ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆ ನೀಡಿದರು
ಸಂಸದರ ಭೇಟಿಯ ವೇಳೆ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸಹಾಯಕ ಕಮಿಷನರ್ ಗಿರೀಶ್‌ನಂದನ್, ತಹಸೀಲ್ದಾರ್ ನಿಸರ್ಗಪ್ರಿಯ, ಡಿವೈಎಸ್ಪಿ ವೀರಯ್ಯ ಹಿರೇಮಠ್, ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಜಗದೀಶ್ ಅಧಿಕಾರಿ, ಅರುಣ್ ವಿಟ್ಲ, ಗೌರಿ ಬನ್ನೂರು, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಹಜ್ ಜೆ.ರೈ ಬಳೆಜ್ಜ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಯಶವಂತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಮ್, ಮುಗೆರೋಡಿ ಕನ್‌ಸ್ಟ್ರಕ್ಷನ್‌ನ ಇಂಜಿನಿಯರ್ ದಾಮೋದರ್, ವಿವೇಕಾನಂದ ಶಾಲೆಯ ರವಿನಾರಾಯಣ್, ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಸತೀಶ್ ರೈ, ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಶ್ರೀನಾಥ್ ರೆಡ್ಡಿ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ್ ಕುಲಾಲ್, ನಿತೀಶ್ ಕಲ್ಲೇಗ, ಪ್ರಸಾದ್ ಮಯ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.