Amaragiri ಹನುಮಗಿರಿ : ಫೆ 3 : ಇದು ರಾಷ್ಟ್ರೀಯತೆ, ಸಂಸ್ಕೃತಿ , ಸಂಸ್ಕಾರ, ಧಾರ್ಮಿಕತೆಯನ್ನು ಅನಾವರಣಗೊಳಿಸುವ ಅಮೋಘ ಲೋಕ, ಇದನ್ನು ಬಣ್ಣಿಸಲು ಪದಗಳು ಸಾಲದು, ನೋಡಲು ಕಣ್ಣುಗಳು ಸಾಲದು. ದೇಶ ಭಕ್ತಿಯನ್ನು ಜಾಗೃತಗೊಳಿಸುವ, ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಅತ್ಯಾಪೂರ್ವ ತಾಣವಾಗಿ ರೂಪುಗೊಂಡಿದೆ ಹನುಮಗಿರಿಯಲ್ಲಿರುವ ಅಮರಗಿರಿ. ದೇಶದ ಅಭ್ಯುದಯದಲ್ಲಿ ಮಹತ್ತರ ಪಾತ್ರವನ್ನು ನಿತ್ಯ ನಿರಂತರವಾಗಿ ನಿರ್ವಹಿಸುವ ರೈತ ಹಾಗೂ ಯೋಧ ದೇಶದೆರಡು ಕಣ್ಣುಗಳು. ಅವರಿಗೆ ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಗೌರವ ಆದರ ಸಿಗುವ ಸ್ಥಳ ಇದಾಗಿದೆ.
2 ಎಕ್ರೆಯ ವಿಶಾಲ ಜಾಗದಲ್ಲಿ ಭಾರತಮಾತೆ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ, ಭರತ ಭೂಮಿಗೆ ದಿಕ್ಕು ದೆಶೆ ತೋರಿಸಿದ ಸಂತರು, ರಾಷ್ಟ್ರ ನಾಯಕರು, ಮಹನೀಯರು ಯೋಧರು ಹಾಗೂ ಅನ್ನದಾತರನ್ನು ನೆನಪಿಸುವ ವಿಶಿಷ್ಟ ಕಾರ್ಯ ಇಲ್ಲಿ ಮಾಡಲಾಗಿದೆ. ಇಲ್ಲಿ ಒಂದು ಸುತ್ತು ತಿರುಗಾಡಿ ಹೊರ ಬಂದಾಗ ದೇಶ ಕಟ್ಟುವ ಕೆಲಸ ಮಾಡಿದ ಹಾಗೂ ಮಾಡುತ್ತಿರುವ ಮಹನೀಯರ ಬಗ್ಗೆ ಪ್ರೀತಿ ಅಭಿಮಾನ ಮೂಡದಿರದು.
ಪುತ್ತೂರಿನಿಂದ 25 ಕಿಮೀ ದೂರದಲ್ಲಿರುವ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯನ ಕ್ಷೇತ್ರ. ಸುಂದರ ಉದ್ಯಾವನದ ಮಧ್ಯೆ ಕಂಗೋಳಿಸುವ ಆಂಜನೇಯನ ಮಂದಿರದ ಮುಂಭಾಗ ರಾಮಯಣದ ಕಥನಕವನ್ನು ಚಿತ್ರಗಳಲ್ಲಿ ವಿವರಿಸುವ ಆಕರ್ಷಕ ರಾಮಾಯಾಣ ಥೀಮ್ ಪಾರ್ಕ್ ಇಲ್ಲಿದೆ. ಗಿರಿಯ ತುದಿಯಲ್ಲಿ ಕೋದಂಡರಾಮನ ಭವ್ಯ ವಿಗ್ರಹವಿದೆ. ರಾಮಗಿರಿಯ ದರ್ಶನದ ಬಳಿಕ ಸಿಗುವುದೇ ನೂತನವಾಗಿ ರೂಪುಗೊಂಡಿರುವ ’ಅಮರಗಿರಿ’.

ಅಮರಗಿರಿಯಲ್ಲಿ ಏನಿದೆ ?
ಅಮರ ಗಿರಿಯ ವೀಕ್ಷಣೆ ಸಮಗ್ರ ಭಾರತ ದರ್ಶನದ ಮುದ ನೀಡಲಿದೆ. ಆರಂಭದಲ್ಲಿ ವಿಶಾಲ ಪ್ರಾಂಗಣ . ಅದರ ಎಡಬದಿಯ ಮೂಲೆಯಲ್ಲಿ ಎತ್ತರದಲ್ಲಿ ಸ್ಥಾಪಿಸಲಾಗಿರುವ ಶಿಲಾಫಲಕದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿದ್ದು ಕಾವಲು ಕಾಯುತ್ತಿರುವ ಶಸ್ತ್ರಧಾರಿ ಸೈನಿಕ ನ ಪ್ರತಿಮೆ . ಅದರ ಕೆಳಗಡೆ ಗೋಡೆಯಲ್ಲಿ ಮೂಡಿರುವ ಕೇರಳ ಶೈಲಿಯ ವರ್ಲಿ ಚಿತ್ತಾರಗಳಲ್ಲಿ ದೇಶದ ಸಾರ್ವಭೌಮತೆಯನ್ನು ಕಾಯುತ್ತಿರುವ ದೇಶದ ಪ್ರತಿಷ್ಟೆಯ ಸಂಕೇತವಾಗಿರುವ ಮೂರು ಸೈನ್ಯಗಳ ಸಾಹಸ, ಸಾಮಾರ್ಥ್ಯ, ಶಸ್ತ್ರ ಸಂಪತ್ತನ್ನು ಸಾದರಪಡಿಸಲಾಗಿದೆ. ಇದು ನೋಡುಗನ ಕಣ್ಣಿನಲ್ಲಿ ಸೈನ್ಯದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುತ್ತದೆ. ಇದರ ಜತೆಗೆ ಬದುಕಿಗೆ ಜೀವನ ಧರ್ಮ ಬೋಧಿಸಿದ ’ಗೀತೋಪದೇಶ’ದ ಸಂದೇಶಗಳು ಮನ ಮುಟ್ಟುವಂತೆ ಚಿತ್ರಿತವಾಗಿದೆ.

ಆ ಬಳಿಕ ಸಿಗುವ ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ವೀಕ್ಷಿಸಿ ಕೆಳಗಿಳಿದರೆ ಬಂಕಿಮ ಚಂದ್ರರಿಂದ ರಚಿಸಲ್ಪಟ್ಟ ಸ್ವಾತಂತ್ರ ಹೋರಾಟಗಾರರಲ್ಲಿ ಹೋರಾಟದ ಕಿಚ್ಚು ಸದಾ ಉರಿಯುವಂತೆ ನೋಡಿಕೊಂಡ ’ವಂದೇ ಮಾತರಂ’ನ ಸಾಲುಗಳು ಕಣ್ತುಂಬಿಸಿಕೊಳ್ಳಬಹುದು . ಇಳಿಯುತ ಸಾಗುತ್ತಿದ್ದಂತೆ ಅಶೋಕ ಸ್ಥಂಭ, ಸ್ಥೂಪ, ರಾಷ್ಟ್ರ ಲಾಂಛನ, ಮುಷ್ಟಿ ಬಿಗಿ ಹಿಡಿದ ಹಸ್ತದ ದರ್ಶನವಾಗುತ್ತದೆ . ಗಿರಿಯನ್ನು ಇಳಿಯುತ್ತಾ ಬರುತ್ತಿದ್ದಂತೆ ಭವ್ಯ ಭಾರತದ ರಕ್ಷಣಾ ವ್ಯವಸ್ಥೆಯೂ ನಿಮ್ಮ ಮನ: ಪಟಲದಲ್ಲಿ ಮೂಡುತ್ತದೆ. ಆಗ ಎದುರುಗಡೆ ಕಾಣುವುಧೇ ಅಷ್ಟಭುಜಾಕೃತಿಯ ಸುಂದರ ಆಲಯ.

ಅಷ್ಟಭುಜಾಕೃತಿಯ ಆಲಯದಲ್ಲಿ ಏನಿದೆ ?
ಶ್ವೇತವರ್ಣದ ಅಮೃತಳೆಯ ’ಭಾರತ ಮಾತೆ’ಯ ಆರಡಿ ಎತ್ತರದ ಅಮೃತಶಿಲೆಯ ವಿಗಹ, ಹಿಂದೆ ಅಖಂಡ ಭಾರತದ ಚಿತ್ತಾರದಲ್ಲಿ ಆಂಜನೇಯ ಮತ್ತು ಪಾರ್ವತೀ ಪರಮೇಶ್ವರರ ನೆಲೆ, ಭಾರತಮಾತೆಯ ಎಡ, ಬಲಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ (ಜೈ ಜವಾನ್, ಜೈ ಕಿಸಾನ್) ಪ್ರತಿಮೆಗಳು, ’ದೇಶಕ್ಕೆ ಅನ್ನ ನೀಡುವ ರೈತ ಮತ್ತು ಗಡಿಗಳಲ್ಲಿ ಕಾವಲು ಕಾಯುವ ಯೋಧʼ ಇವರೀರ್ವರು ದೇಶದ ಉಸಿರೆಂಬ ಸಂಕೇತವಾಗಿ ಇದನ್ನು ಸ್ಥಾಪಿಸಲಾಗಿದೆ.

ಭಾರತಾಂಬೆಯ ಎದುರಿಗೆ ’ಅಮರ ಜವಾನ್’ ಸ್ಮಾರಕ ಶಿಲೆ, ನೇಪಥ್ಯದಲ್ಲಿ ಸೂರ್ಯೋದಯದ ಕಲ್ಪನೆಯ ರಚನೆಗಳು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ. ಮೇಲ್ಬಾಗದಲ್ಲಿ ಭಾರತವನ್ನು ಕಟ್ಟಿದ ವೀರ ಸೇನಾನಿಗಳ ಕೆತ್ತನೆ ಶಿಲ್ಪಗಳು, ಇತಿಹಾಸವನ್ನು ಕಣ್ಣೆದುರು ನಿಲ್ಲಿಸುತ್ತವೆ. ಭವ್ಯ ಭಾರತವನ್ನು ನಿರೂಪಿಸಿದ ಇವರೆಲ್ಲರ ಇತಿಹಾಸಗಳ ಮರು ಓದು ಈ ಕಲಾಕೃತಿಗಳಲ್ಲಿ ಸಾಕ್ಷಾತ್ಕರಗೊಂಡಿದೆ. ಏಕಕಾಲದಲ್ಲಿ ಸರಿ ಸುಮಾರು ನೂರು ಮಂದಿ ಆಸೀನರಾಗಿ ಈ ಕಲಾ ಮೆರಗನ್ನು ವೀಕ್ಷಿಸಬಹುದಾದಷ್ಟು ವಿಶಾಲ ಸ್ಥಳವನ್ನು ಅಷ್ಟಭುಜಾಕೃತಿಯ ಆಲಯ ಹೊಂದಿದೆ.

ದೇವತಾರಾಧನೆ. ರಾಷ್ಟ್ರಾರಾಧನೆ. ಕಲಾರಾಧನೆ, ನಿಸರ್ಗಾರಾಧನೆಗಳ ಮೂಲಕ ಭವ್ಯ ಭಾರತವನ್ನು ಪ್ರಸ್ತುತ ಪಡಿಸುವ ಪ್ರಯತ್ನ ಅಮರಗಿರಿಯ ಮೂಲಕ ಹನುಮಗಿರಿಯಲ್ಲಿ ಆಗಿದೆ. ʼಬದುಕು ಸಮಾಜಕ್ಕಾಗಿ, ಪ್ರಾಣ ದೇಶಕ್ಕಾಗಿʼ ಎನ್ನುವ ಸಂದೇಶಗಳು ಪ್ರವಾಸಿಗನ ಮನದೊಳಗೆ ಇಳಿಯುವಂತೆ ಮಾಡುವಲ್ಲಿ ಅಮರಗಿರಿ ಅಕ್ಷರಶ: ಸಫಲವಾಗಿದೆ. ಇದರ ಒಳಹೊಕ್ಕು ಹೊರ ಬರುವಾಗ ’ದೇಶಪೂಜನ’ದ ಅನುಭಾವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

ಫೆ 11 ರಂದು ಲೋಕಾರ್ಪಣೆ
ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಷಾ ಅವರು ಫೆಬ್ರವರಿ ೧೧ ರಂದು ಮಧ್ಯಾಹ್ನ ಅಮರಗಿರಿಗೆ ಆಗಮಿಸಲಿದ್ದು ಅಷ್ಟಭುಜಾಕೃತಿಯ ಆಲಯದೊಳಗೆ ಇರುವ ಭಾರತಾಂಬೆಗೆ ಪುಷ್ಪಾರ್ಚನೆ ನಡೆಸಿ ದೀಪ ಬೆಳಗುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕಾಗಿ ಇಲ್ಲಿ ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗುತ್ತಿದೆ. ಗೃಹ ಸಚಿವರ ಸುರಕ್ಷತಾ ತಂಡ ಮುಂದಿನ ವಾರದ ಆರಂಭದಿಂದಲೇ ಇಲ್ಲಿ ಮೊಕ್ಕಾಂ ಹೂಡಲಿದೆ.

ಹನುಮಗಿರಿಯ ಬಗ್ಗೆ
ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗಿರುವ ಅಪರೂಪದ ದೇಗುಲ ‘ಹನುಮಗಿರಿ’. ಇದು ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಸುಂದರ ಪ್ರವಾಸಿ ತಾಣ ಹಾಗೂ ಯಾತ್ರಾ ಸ್ಥಳ. ಆರಂಭದಲ್ಲಿ ಸಿಗುವ ರಾಮಾಯಾಣ ಥೀಮ್ ಪಾರ್ಕ್ ದಾಟಿ ಪಂಚಮುಖಿ ಅಂಜನೇಯನ ದರ್ಶನ ಪಡೆದು ಮುಂದೆ ಸಾಗುವ ಭಕ್ತರ ವಿಶ್ರಾಂತಿಗಾಗಿ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನರಸಿಂಹ ಮಂಟಪವಿದೆ. ಅದನ್ನು ದಾಟಿ ಮುಂದಕ್ಕೆ ಹೋದರೆ ಸಂಜೀವಿನಿ ದಿವ್ಯೌಷಧ ಸಸ್ಯಗಳ ವನ ಹಾಗೂ ಹನುಮಾನ್ ಮಾನಸೋದ್ಯಾನವಿದೆ. ಶಿಲೆಗಳಲ್ಲಿ ಕೆತ್ತಲಾಗಿರುವ ತೇತ್ರಾಯುಗದ ಕಥಾನಕಗಳು ಗಿರಿಯ ಉದ್ದಕ್ಕೂ ಕಾಣ ಸಿಗುತ್ತದೆ,
ರಾಮಯಣದ ಯುದ್ದದಲ್ಲಿ ಮೂರ್ಚೆ ತಪ್ಪಿದ ಲಕ್ಷ್ಮಣನನ್ನು ಬದುಕಿಸಿದ ಪ್ರತಿತಿಯುಳ್ಳ ಸಂಜೀವಿನಿಯಂತಹ ಜೀವ ರಕ್ಷಕ ಗಿಡಮೂಲಿಕೆಗಳನ್ನು, ಔಷಧೀಯ ಸಸ್ಯಗಳನ್ನು ಪೋಷಿಸಿ ಪರಿಚಯಿಸುವ ಮತ್ತು ರಕ್ಷಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದಲ್ಲಿ ಸಂಜೀವಿನಿ ಮಾನಸೋದ್ಯಾನ ನಿರ್ಮಿಸಲಾಗಿದೆ. ಇಲ್ಲಿ 300 ೦ಕ್ಕೂ ಹೆಚ್ಚು ಬಗೆಯ ಗಿಡಗಳು ಕಾಣ ಸಿಗುತ್ತದೆ. ಗೋವುಗಳ ಸಂರಕ್ಷಣೆಗಾಗಿ ಗೋಶಾಲೆ, ಅತಿಥಿ ಗೃಹ, ಮಕ್ಕಳ ಅನಾಥಶ್ರಮ, ಧ್ಯಾನಮಂದಿರ, ಸಭಾಭವನವಿದೆ. ಗಿರಿಯ ಶಿಖರಕ್ಕೆ ತಲುಪಿದರೆ 22 ಅಡಿ ಎತ್ತರದ ಶ್ರೀ ಕೊದಂಡರಾಮನ ಭವ್ಯ ಮೂರ್ತಿ ಕಾಣ ಸಿಗುತ್ತದೆ.
ಅಮರಗಿರಿಯ ದೃಶ್ಯ ವೈಭವ – ವಿಡಿಯೋ ನೋಡಿ




