ವಿಟ್ಲ : ಫೆ 2 : ಕಾರಿನಲ್ಲಿ ವಿವಾಹಿತ ಮಹಿಳೆಯನ್ನು ಅನ್ಯ ಪುರುಷನೊಬ್ಬ ಕರಕೊಂಡು ಹೋಗಿದ್ದಾರೆ ಎನ್ನಲಾದ ಹಾಗೂ ಆ ಕಾರನ್ನು ಮಹಿಳೆಯ ಪತಿ ತಡೆದು ಪುತ್ತೂರು ಡಿವೈಎಸ್ಪಿಗೆ ದೂರು ನೀಡಿದ ಪ್ರಕರಣದ ಬಗ್ಗೆ ಆರೋಪ ಎದುರಿಸುತ್ತಿರುವ ವಿಟ್ಲದ ಬಿಜೆಪಿ ಮುಖಂಡ ಹರಿ ಪ್ರಸಾದ್ ಪತ್ರಿಕಾ ಪ್ರಕಟನೆಯ ಮೂಲಕ ಸ್ಪಷ್ಟಿಕರಣ ನೀಡಿದ್ದಾರೆ.
ನನ್ನ ಮೇಲೆ ಹೊರಿಸಲಾದ ಆರೋಪ ಸತ್ಯಕ್ಕೆ ದೂರವಾದದ್ದು . ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಈ ಮೂಲಕ ಮಾಡಲಾಗಿದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರನ್ನು ಪಣೋಲಿಬೈಲು ಸತ್ಯದೇವತೆ ನೋಡಿಕೊಳ್ಳಲಿ ಎಂದು ಕೇಪು ಮುಳಿಯಾಳದ ಹರಿಪ್ರಸಾದ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಸ್ವಜಾತಿಯವಳು ಹಾಗೂ ಪರಿಚಯದವಳಾದ ಮಹಿಳೆಯೊರ್ವರು ಜ.31ರಂದು ಕನ್ಯಾನ ಗ್ರಾಮದ ಧಾರ್ಮಿಕ ಕ್ಷೇತ್ರವೊಂದರಿಂದ ಸಂಜೆ ಗಂಟೆ 3.30ಕ್ಕೆ ಸುಮಾರಿ ಕರೆ ಮಾಡಿ ಮನೆಗೆ ಕಾರಿನಲ್ಲಿ ಬಿಡುವಂತೆ ವಿನಂತಿಸಿದ್ದಾರೆ.
‘ ಬೆಳಿಗ್ಗೆ ನಮ್ಮ ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಕಾರಿನಲ್ಲಿ ಕ್ಷೇತ್ರಕ್ಕೆ ಬಂದಿರುವುದಾಗಿಯೂ, ಈವಾಗ ಅವರು ಹೊರಡುವಾಗ ತಡವಾಗುವುದರಿಂದ ನನ್ನ ಮಗಳ ಶಾಲೆ ಬಿಡುವ ಸಮಯಕ್ಕೆ ನನಗೆ ಸುಳ್ಯಕ್ಕೆ ತಲುಪಬೇಕಾಗಿರುವುದರಿಂದ ನಿಮ್ಮ ಕಾರಿನಲ್ಲಿ ನನ್ನನ್ನು ಮತ್ತು ನನ್ನ ಇಬ್ಬರು ಮಹಿಳಾ ಸಹೋದ್ಯೋಗಿಗಳನ್ನು ಬಿಡಬಹುದೇ’ ಎಂದು ಮಹಿಳೆ ವಿನಂತಿಸಿಕೊಂಡಿದ್ದಾರೆ. ಆ ವೇಳೆ ನಾನು ಪಕ್ಷದ ಸಭೆಯಲ್ಲಿದ್ದೆ. ಹೀಗಾಗಿ ನನಗೀಗ ಬರಲಿಕ್ಕೆ ಆಗುವುದಿಲ್ಲ, ಅನಿವಾರ್ಯವಾದರೆ ನನ್ನ ಕಾರಿನ ಚಾಲಕ ಜಯರಾಮನಲ್ಲಿ ಕಾರು ಕೊಟ್ಟು ಕಳುಹಿಸುತ್ತೇನೆ ಎಂದು ಹೇಳಿ ನನ್ನ ಚಾಲಕನಲ್ಲಿ ಕಾರು ಕೊಟ್ಟು ಕಳುಹಿಸಿ ಕೊಟ್ಟಿರುತ್ತೇನೆ.
ಸುಮಾರು 5 ಗಂಟೆ ಸುಮಾರಿಗೆ ಜಯರಾಮ ಕರೆ ಮಾಡಿ ಬೈಕಲ್ಲಿ ಬಂದ ಮಹಿಳೆಯ ಪತಿ ಸುಧೀರ್ ಕಾರಿಗೆ ಅಡ್ಡ ಕಟ್ಟಿ ಕಾರಿನ ಕೀಯನ್ನು ಕಸಿದುಕೊಂಡು ಮಹಿಳೆಯನ್ನು ಕಾರಿನಿಂದ ಎಳೆದು ಹಾಕಿ ಹೊಡೆಯುತ್ತಿದ್ದಾನೆ ಎಂದು ತಿಳಿಸಿರುತ್ತಾನೆ. ಬಳಿಕ ಸ್ಥಳಕ್ಕೆ ಪೊಲೀಸರು ಬಂದಾಗ ಮಹಿಳೆಯ ಪತಿ ಕಾರಿನ ಕೀ ಹಿಡ್ಕೊಂಡು ಅಲ್ಲಿಂದ ಕಾಲ್ಕಿತ್ತಿರುವ ಮಾಹಿತಿಯನ್ನು ಒದಗಿಸಿರುತ್ತಾನೆ.
ಕೂಡಲೇ ನಾನು ಪಕ್ಷದ ಸಭೆಯಿಂದ ಮನೆಗೆ ಬಂದು ಕಾರಿನ ಇನ್ನೊಂದು ಕೀಯನ್ನು ಹಿಡ್ಕೊಂಡು ಪುತ್ತೂರಿನಿಂದ ಘಟನೆ ನಡೆದ ಸ್ಥಳ ಜಾಲ್ಸೂರಿನಿಂದ ನೂರು ಮೀಟರ್ ದೂರ ನನ್ನ ಕಾರಿನ ಹತ್ತಿರ ತೆರಳಿ ಅಲ್ಲೇ ಇದ್ದ ನನ್ನ ಚಾಲಕನೊಂದಿಗೆ ಸುಳ್ಯ ಪೋಲೀಸ್ ಸ್ಟೇಶನ್‌ಗೆ ತೆರಳಿ ಹೇಳಿಕೆ ಕೊಟ್ಟು ಬಂದಿರುತ್ತೇನೆ.
ಆದರೆ ಘಟನೆಯನ್ನು ನಾನೇ ಮಹಿಳೆಯೊಬ್ಬರನ್ನು ಕರೆದೊಯ್ದಿರುವುದಾಗಿ ಅಪಪ್ರಚಾರ ಮಾಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ’ ಎಂದು ಹರಿಪ್ರಸಾದ್ ಯಾದವ್ ಅವರು ತಿಳಿಸಿದ್ದಾರೆ.
ಪಣೋಲಿಬೈಲು ಸತ್ಯದೇವತೆ ನೋಡಲಿ:
ನನ್ನ ಬಗ್ಗೆ ನಡೆದ ಅಪಪ್ರಚಾರ ಮತ್ತು ನನ್ನ ತೇಜೋವಧೆಯ ಷಡ್ಯಂತ್ರ ಮಾಡಿರುವ ಬಗ್ಗೆ ಫೆ.2ರಂದು ಪಣೋಲಿಬೈಲು ಸತ್ಯದೇವತೆಯ ನಡೆಗೆ ತೆರಳಿ, ನಾನು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲವೆಂದು ಸತ್ಯದ ವಿಚಾರ ಹೇಳಿ ಬಂದಿದ್ದೇನೆ. ನನ್ನ ಬಗ್ಗೆ ಈ ರೀತಿ ಸುಳ್ಳು ಆರೋಪ ಮಾಡಿದವರನ್ನು ಆ ತಾಯಿಯೇ ನೋಡಿಕೊಳ್ಳುತ್ತಾಳೆ ಎಂದು ತಿಳಿಸಿದ್ದಾರೆ.
ಪಕ್ಷಕ್ಕೆ ಅಗೌರವ ಉಂಟಾಗುವಂತೆ ನಡಕೊಂಡಿಲ್ಲ
ಕಳೆದ 20 ವರ್ಷದಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಬೂತ್ ಅಧ್ಯಕ್ಷನಿಂದ ಹಿಡಿದು ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದು ಪಕ್ಷದ ಬಲವರ್ಧನೆಗೆ ಸಹಕಾರವನ್ನು ನೀಡಿರುತ್ತೇನೆ. ಮುಂದೆಯೂ ಪಕ್ಷದಲ್ಲಿ ಸಕ್ರಿಯವಾಗಿ ಇರುತ್ತೇನೆ. ನಡೆದ ಘಟನೆಯನ್ನು ಜಿಲ್ಲಾ ಅಧ್ಯಕ್ಷರಿಗೆ, ಶಾಸಕರಿಗೆ ಮಂಡಲ ಅಧ್ಯಕ್ಷರಿಗೆ ವಿವರಿಸಿದ್ದೇನೆ. ಪಕ್ಷಕ್ಕೆ ಅಗೌರವ ತಪ್ಪು ನನ್ನಿಂದ ಆಗಿಲ್ಲ. ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಪತ್ರಿಕಾ ಪ್ರಕಟನೆಯಲ್ಲಿ ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ.