ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ ಆಗಿರುವ ಮುಂದಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಹಾಗೂ ಇನ್ನಿತರ ಅಗತ್ಯಗಳಿಗೆ ಸಂಬಂದಿಸಿದ ಪ್ರಶ್ನೆಗಳು ಬೇಡಿಕೆಗಳು ಸಾರ್ವಜನಿಕರ ಬಳಿ ಇದ್ದರೇ , ಇದನ್ನು ನೇರವಾಗಿ ಜನ ಪ್ರತಿನಿಧಿಗೆ ಕೇಳುವ ಹಾಗೂ ಅವರಿಂದ ಉತ್ತರ ಪಡೆಯುವ ಅವಕಾಶವನ್ನು ಪುತ್ತೂರಿನ ರೋಟರಿ ಕ್ಲಬ್ ಒದಗಿಸಿದೆ. ಫೆ. 4ರಂದು ಪುತ್ತೂರು ಜೈನ ಭವನದಲ್ಲಿ ನಡೆಯುವ ಈ ವಿನೂತನ ’ರೋಟರಿ ಜನತಾ ಅದಾಲತ್ʼ ಎಂಬ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಶಾಸಕ ಸಂಜೀವ ಮಠಂದೂರು ಇರಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರದೊಂದಿಗೆ ಪ್ರಶ್ನಾವಳಿಗಾಗಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಕೊಡುವಂತೆ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ ಮತ್ತು ವೃತ್ತಿ ಸೇವಾ ನಿರ್ದೇಶಕರಾಗಿರುವ ವಾಮನ್ ಪೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅವರು ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ,1965 ರಲ್ಲಿ ಪ್ರಾರಂಭಗೊಂಡ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆ ಮತ್ತೂರು ರೋಟರಿ ಕ್ಲಬ್ ಪುತ್ತೂರಿನ ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಹುಟ್ಟಿ ಬೆಳೆದು ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ. 1998ರಲ್ಲಿ ಆಗಿನ ರೋಟರಿ ಅಧ್ಯಕ್ಷ ಗಣಪತಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಆಗಿನ ಶಾಸಕ ವಿನಯ ಕುಮಾರ್ ಸೊರಕೆ, ಹಿಂದೆ ಸಂಸದರಾಗಿದ್ದ ಧನಂಜಯ ಕುಮಾರ್ ಅವರೊಂದಿಗೂ ಕೂಡಾ ಅದಾಲತ್ ಮಾಡುವ ಮೂಲಕ ಪುತ್ತೂರಿನ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಲಾಗಿತ್ತು. ಇದೀಗ ಈಗಿನ ಶಾಸಕರಾಗಿರುವ ಸಂಜೀವ ಮಠಂದೂರು ಅವರ ಜೊತೆ ಅದಾಲತ್ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ ಕೋರ್ಟ್ ಮಾದರಿಯಲ್ಲಿದ್ದು, ಸಂಜೆ ಗಂಟೆ 5 ರಿಂದ 7 ಗಂಟೆಯ ತನಕ ನಡೆಯಲಿದೆ. ಈಗಾಗಲೇ ಸುಮಾರು 35ಕ್ಕೂ ಅಧಿಕ ಲಿಖಿತ ಪ್ರಶ್ನೆಗಳು ಬಂದಿವೆ. ಅದನ್ನು ಕ್ರೋಢೀಕರಿಸಿ ಜೇಸಿಐಯ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಅವರು ಅದಾಲತ್ ನಿರ್ವಹಣೆ ಮಾಡಲಿದ್ದಾರೆ. ಹಿರಿಯ ನ್ಯಾಯವಾದಿ ರಾಮ ಮೋಹನ್ ರಾವ್ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ವಲಯ-5ರ ಸಹಾಯಕ ಗವರ್ನರ್ ಜಗಜೀವನ್ ದಾಸ್ ರೈ, ಕಾರ್ಯಕ್ರಮ ಸಂಯೋಜಕರಾದ ಶ್ರೀಕಾಂತ್ ಕೊಳತ್ತಾಯ, ಝೇವಿಯರ್ ಡಿಸೋಜ ಅವರು ಉಪಸ್ಥಿತರಿದ್ದರು.