Fazil Murder ತುಮಕೂರು, ಜನವರಿ 30: ಮಂಗಳೂರು: ‘ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ ನಡೆಸಲಾಗಿದೆ’ ಎಂದು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಫಾಝಿಲ್ ಅವರ ತಂದೆ ಸುರತ್ಕಲ್ ಮಂಗಳಪೇಟೆಯ ಉಮರ್ ಫಾರೂಕ್ ಅವರು ಒತ್ತಾಯಿಸಿದ್ದಾರೆ. ಅವರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಭೇಟಿಯಾಗಿ ಈ ಕುರಿತು ಸೋಮವಾರ ಮನವಿ ಸಲ್ಲಿಸಿದರು.
‘ಫಾಝಿಲ್ ಹತ್ಯೆಯನ್ನು ತುಮಕೂರಿನಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಶರಣ್ ಪಂಪ್ವೆಲ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಮಗನ ಹತ್ಯೆ ವಿಚಾರವಾಗಿ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಹಾಗಾಗಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು’ಎಂದು ಉಮರ್ ಫಾರೂಕ್ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಹಾಗೂ ಮಂಗಳೂರಿನಲ್ಲಿ ಭಾಷಣ ಮಾಡಿದ ಶರಣ್ ಪಂಪ್ವೆಲ್ ಗುಜರಾತ್ ಹಿಂಸೆಯನ್ನು ಸಮರ್ಥಿಸಿಕೊಂಡಿದ್ದರು. ಜತೆಗೆ 6 ತಿಂಗಳ ಹಿಂದೆ ಸುರತ್ಕಲ್ ನಲ್ಲಿ ಹತ್ಯೆಯಾದ ಫಾಝೀಲ್ ಕೊಲೆಯ ಕುರಿತಾಗಿಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು.
. ಉಳ್ಳಾಲದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಶೌರ್ಯ ಯಾತ್ರೆಯಲ್ಲಿ ಮಾತನಾಡಿದ ಅವರು “ ಗುಜರಾತ್ ನಲ್ಲಿ ನಡೆದಿದ್ದು ನರಮೇಧ ಅಲ್ಲ, ಅದು ಹಿಂದೂಗಳ ಪರಾಕ್ರಮ. ಅಲ್ಲಿ ನಡೆದಿದ್ದು ಹಿಂದುಗಳ ಶೌರ್ಯ, ಅದು ನಮ್ಮ ಪರಾಕ್ರಮ. ಅಗತ್ಯ ಬಿದ್ರೆ ಭಜರಂಗದಳ ಹೋರಾಟ ಮಾಡುತ್ತೆ, ಕೆಲವೊಮ್ಮೆ ನಾವು ನುಗ್ಗಿ ಹೊಡೀತಿವಿ ಎಂದರು.
ಮುಂದುವರಿದು “ ಪ್ರಶಾಂತ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಕಣ್ಣೀರು ಹಾಕಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ಸುರತ್ಕಲ್ ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದ್ರು, ಅದು ನಮ್ಮ ಶೌರ್ಯ. ಸುರತ್ಕಲ್ ನಲ್ಲಿ ಹೊಡೆದ ವಿಡಿಯೋವನ್ನ ಎಲ್ಲರೂ ವಿಡಿಯೋದಲ್ಲಿ ನೋಡಿದ್ದೀರಾ ಎಂದು ಪ್ರಚೋಧನಾತ್ಮಕವಾಗಿ ಮಾತನಾಡಿದರು.