ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ 5 ತಿಂಗಳ ಕಾಲ 12 ರಾಜ್ಯಗಳನ್ನು, 75 ಜಿಲ್ಲೆ ದಾಟಿ 4 ಸಾವಿರ ಕಿ.ಮೀ.ಗೂ ಹೆಚ್ಚು ಕ್ರಮಿಸಿದ ಭಾರತ್ ಜೋಡೋ (Bharat Jodo Yatra) ಯಾತ್ರೆಯು ಭಾನುವಾರ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣದೊಂದಿಗೆ ತೆರೆ ಕಾಣಲಿದೆ. 1948ರಲ್ಲಿ ಅಂದಿನ ಪ್ರಧಾನಿ ಜವಾಹ ಲಾಲ್ ನೆಹರೂ ಅವರು ಮೊಟ್ಟಮೊದಲ ಬಾರಿಗೆ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಜಮ್ಮು ಮತ್ತು ಕಾಶ್ಮೀರವು ದೇಶದ ಅವಿಭಾಜ್ಯ ಅಂಗವೆಂದು ಸಾರಿದ್ದರು. ಆ ವೇಳೆ ನ್ಯಾಷನಲ್ ಕಾನ್ದ್ರರೆನ್ಸ್ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ನೆಹರೂ ಅವರೊಂದಿಗೆ ಮೈತ್ರಿ ಘೋಷಿಸಿದ್ದರು. ಇದಾದ ಸುಮಾರು 75 ವರ್ಷಗಳ ಬಳಿಕ ನೆಹರೂ ಅವರ ಮರಿ ಮೊಮ್ಮಗ ರಾಹುಲ್ ಗಾಂಧಿ ಅವರು ಅದೇ ಸ್ಥಳದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಗೌರವ ಸಲ್ಲಿಸಿದ್ದು ವಿಶೇಷ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾರೋಪ ಸಮಾರಂಭಕ್ಕೆ ಭಾರೀ ಹಿಮಪಾತ ಅಡ್ಡಿಯಾಗುವ ಸಾಧ್ಯತೆ ಇದೆ. ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಹಿಮಪಾತ ಆಗುತ್ತಿದ್ದು, ಶ್ರೀನಗರ ಮತ್ತು ಜಮ್ಮುವಿನ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುವ ವಿಮಾನಗಳನ್ನು ರದ್ದುಪಡಿಸಲಾಗಿದ್ದು. 135 ದಿನಗಳ ಕಾಲ ಸುದೀರ್ಘವಾಗಿ ಕನ್ಯಾಕುಮಾರಿ ಟೂ ಕಾಶ್ಮೀರದವರೆಗೂ ನಡೆದಿರುವ ಭಾರತ ಐಕ್ಯತಾ ಯಾತ್ರೆ ಸೋಮವಾರ ಅಂತ್ಯಗೊಳ್ಳಲಿದ್ದು, ವಿರೋಧ ಪಕ್ಷಗಳ 12 ನಾಯಕರು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಶ್ರೀನಗರದ ಶೇರ್-ಐ-ಕಾಶ್ಮೀರ ಕ್ರಿಕೆಟ್ ಮೈದಾನದಲ್ಲಿ ಸಮಾರೋಪದ ಬೃಹತ್ ಸಮಾವೇಶ ನಡೆಯಲಿದೆ. ಕೇವಲ ಕಾಂಗ್ರೆಸ್ ನಾಯಕರಷ್ಟೇ ಅಲ್ಲದೇ, ವಿವಿಧ ವಿರೋಧ ಪಕ್ಷಗಳ 12 ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆದರೆ, ಶ್ರೀನಗರದಲ್ಲಿ ಭಾರೀ ಹಿಮಪಾತ ಆಗುತ್ತಿರುವುದರಿಂದ ಕಾರ್ಯಕ್ರಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಶ್ರೀನಗರ ಮತ್ತು ಜಮ್ಮುವಿನ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುವ ವಿಮಾನಗಳನ್ನು ರದ್ದುಪಡಿಸಲಾಗಿದ್ದು, ಹಲವು ನಾಯಕರು ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗದಿರಬಹುದು.
ನಿರಂತರ ಹಿಮಪಾತದ ಕಾರಣ ಶ್ರೀನಗರದ ವಿಮಾನ ಸೇವೆಯಲ್ಲಿ ವಿಳಂಬವಾಗಿದೆ ಎಂದು ಶ್ರೀನಗರ ವಿಮಾನ ನಿಲ್ದಾಣದ ನಿರ್ದೇಶಕ ಕುಲದೀಪ್ ಸಿಂಗ್ ರಿಷಿ ಟ್ವೀಟ್ ಮಾಡಿದ್ದಾರೆ. ಇನ್ನು, ವಿಸ್ತಾರ ಏರ್‌ಲೈನ್ಸ್ ಈಗಾಗಲೇ ದಿನದ ಮಟ್ಟಿಗೆ ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುವ ತನ್ನ ಎರಡೂ ವಿಮಾನಗಳನ್ನು ರದ್ದುಗೊಳಿಸಿದ್ದು, ದಿಲ್ಲಿಯಿಂದ ತೆರಳುವ ನಾಯಕರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ವಿಮಾನ ಇಲ್ಲದೇ ದಿಲ್ಲಿಯಲ್ಲಿಯೇ ಉಳಿದುಕೊಂಡಿದ್ದಾರೆ.ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆರಂಭವಾಗಲಿದ್ದು, ಬಳಿಕ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಕಾರ್ಯಕ್ರಮಕ್ಕೆ 21 ಪಕ್ಷಗಳಿಗೆ ಕಾಂಗ್ರೆಸ್ ನಾಯಕರು ಆಹ್ವಾನವನ್ನು ನೀಡಿದ್ದರು. ಆದರೆ, ಭದ್ರತಾ ಕಾರಣದಿಂದ ಹಲವು ಪಕ್ಷಗಳು ಕಾರ್ಯಕ್ರಮಕ್ಕೆ ಗೈರಾಗುತ್ತಿವೆ. ಪ್ರಮುಖವಾಗಿ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ತೆಲುಗು ದೇಶಂ ಪಾರ್ಟಿ ಕಾರ್ಯಕ್ರಮದಿಂದ ದೂರ ಉಳಿದಿವೆ. ಭಾನುವಾರವೇ ಲಾಲ್ ಚೌಕ್ ಪ್ರದೇಶದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಪಾದಯಾತ್ರೆ ಮುಕ್ತಾಯಗೊಂಡಿದ್ದು, ಸೋಮವಾರ ಅಧಿಕೃತ ಸಮಾರೋಪ ಸಮಾರಂಭ ನಡೆಯಲಿದೆ.
ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ, ಶರದ್ ಪವಾರ್ ಅವರ ಎನ್‌ಸಿಪಿ, ತೇಜಸ್ವಿ ಯಾದವ್ ಅವರ ಆರ್‌ಜೆಡಿ, ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಉದ್ಧವ್ ಠಾಕ್ರೆ ಅವರ ಪಕ್ಷ, ಸಿಪಿಐ, ಸಿಪಿಐ (ಎಂ), ವಿಸಿಕೆ, ಕೇರಳ ಕಾಂಗ್ರೆಸ್, ಫಾರುಕ್ ಅಬ್ದುಲ್ಲಾ ಅವರ ಎನ್‌ಸಿ, ಮೆಹಬುಬಾ ಮುಫ್ತಿ ಅವರ ಪಿಡಿಪಿ ಹಾಗೂ ಸಿಬು ಸೊರೆನ್ ಅವರ ಜೆಎಂಎಂ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,970 ಕಿಮೀ ಕ್ರಮಿಸಿದ್ದು, ಶ್ರೀನಗರದಲ್ಲಿ ಸಮಾರೋಪಗೊಳ್ಳುತ್ತಿದೆ.