ನವದೆಹಲಿ: ಇಂದೇ ಲೋಕಸಭೆ ಚುನಾವಣೆ (Loksabha Election) ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಭಾರತದ ಖ್ಯಾತ ಸುದ್ದಿ ವಾಹಿನಿ India Today ಕಾಲಾನುಕ್ರಮದಲ್ಲಿ ನಡೆಸುತ್ತಿರುವ ‘ಮೂಡ್ ಆಫ್ ದ ನೇಷನ್’ (Mood of the Nation) ಹೆಸರಿನ ಚುನಾವಣಾ ಸಮೀಕ್ಷೆಯೂ ಭಾರತದಲ್ಲಿ ಮತ್ತೆ ಬಿಜೆಪಿ ಪಾರುಪತ್ಯವೇ ಇರಲಿದೆ ಎಂದು ತಿಳಿಸಿದೆ.
ಇದೇ ತಿಂಗಳು (January 2023) ರಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು ಅದರ ವರದಿಯನ್ನು ಜ 26 ರಂದು ಅದು ತನ್ನ ಸುದ್ದಿ ವಾಹಿನಿಯಲ್ಲಿ ಬಿತ್ತರಿಸಿದೆ. ಸಮಿಕ್ಷೆಯ ಫಲಿತಾಂಶದ ಪ್ರಕಾರ, ಇಂದು ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿಎ (NDA) ಒಕ್ಕೂಟಕ್ಕೆ 298 ಸ್ಥಾನಗಳು ಸಿಗಲಿದೆ ಎಂದು ತಿಳಿಸಿದೆ. ಹಾಗಾಗಿಯೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಡೆದ ಸೀಟುಗಳ ಸಂಖ್ಯೆಗಿಂತ ಒಂದಷ್ಟು ಸೀಟು ಕಡಿಮೆ ಸೀಟು ಪಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಒಟ್ಟು 543 ಸೀಟುಗಳನ್ನು ಹೊಂದಿರುವ ಲೋಕಸಭೆಯಲ್ಲಿ ಸ್ಪಷ್ಟ ಬಹುಮತಕ್ಕೆ 272 ಸೀಟುಗಳ ಅಗತ್ಯವಿದೆ. ಮೂಡ್ ಆಪ್ ದಿ ನೇಶನ್ ಸಮೀಕ್ಷೆಯ ಪ್ರಕಾರ ಬಿಜೆಪಿ ಒಂದಕ್ಕೇ 284 ಸ್ಥಾನ ಸಿಗಲಿದ್ದು, ದೇಶದಲ್ಲೇ ಅತ್ಯಧಿಕ ಸ್ಥಾನಗಳನ್ನು ಪಡೆದ ಪಕ್ಷವೆಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಲಿದೆ ಎಂದು ಉಲ್ಲೇಖಿಸಲಾಗಿದೆ. 2019ರ ಚುನಾವಣೆಯಲ್ಲಿ ಎನ್ ಡಿಎ ಒಕ್ಕೂಟಕ್ಕೆ 352 ಸ್ಥಾನ ಸಿಕ್ಕಿದ್ದವು, ಬಿಜೆಪಿಯೇ ಸಿಂಹಪಾಲು (303 ಸ್ಥಾನ) ಗಳಿಸಿತ್ತು.

ಇದೇ ವೇಳೆ, ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಪಿಎಗೆ (UPA) ಈಗ ಚುನಾವಣೆ ನಡೆದರೆ 153 ಸ್ಥಾನಗಳು ಸಿಗುತ್ತವೆ ಎಂದು ಹೇಳಲಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದಿತ್ತು. ಈಗ ಚುನಾವಣೆ ನಡೆದರೆ, 101 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಲಾಗಿದೆ.

ಆದರೇ 2024ರ ಆರಂಭದಲ್ಲಿ ಆಯೋದ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿರುವುದು ಹಾಗೂ ಮುಂದಿನ ಎರಡು ವರ್ಷಗಳ ಕಾಲ ಜಿ -20 ನೇತ್ರತ್ವ ಭಾರತ ವಹಿಸಿರುವುದು ಮತ್ತು ಭಾರತದಲ್ಲಿ ಇದರ ಶೃಂಗ ಸಮ್ಮೇಳನ ನಡೆಯಲಿರುವುದು ಬಿಜೆಪಿಗೆ ಲಾಭದಾಯಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಎರಡು ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಮೋದಿ ಸೊಗಸಾದ ಈವೆಂಟ್ ಮ್ಯಾನೆಜ್ ಮೆಂಟ್ ಮೂಲಕ ಪ್ರಸ್ತುತ ಪಡಿಸಿದರೇ ಅದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವುದು ರಾಜಕೀಯ ವಿಷ್ಲೇಶಕರ ಅಭಿಮತ. 2014ರ ಬಳಿಕ ಬಿಜೆಪಿ ಈ ರೀತಿಯ ಕಾರ್ಯಕ್ರಮಗಳನ್ನು ತನ್ನ ಬೆಂಬಲಿಗರು ಕೊಂಡಾಡುವ ರೀತಿಯಲ್ಲಿ ನಿರ್ವಹಿಸುವುದಲ್ಲಿ ಸಿದ್ದ ಹಸ್ತ ಎನಿಸಿದೆ.