ಬೆಳ್ತಂಗಡಿ: ಇತ್ತೀಚಿಗೆ ಬೆಳ್ತಂಗಡಿ (Belthangady) ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದಪ್ಪ ಪೂಜಾರಿಯವರ ಮಗ ಮಹೇಶ್ ಪೂಜಾರಿ ಅವರ 5 ವರ್ಷದ ಮಗನೊಂದಿಗೆ ತನ್ನ ಆತ್ಮೀಯ ಸ್ನೇಹಿತ ಜನಾರ್ಧನ ಗೌಡ ರ ಜೊತೆಗೆ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋದ ಸಂದರ್ಭ ಜನಾರ್ಧನ ಗೌಡ ರವರು ನೀರಿನ ಸೆಳೆತಕ್ಕೆ ಒಳಗಾಗಿ ಮುಳುಗಿ ಮರಣ ಹೊಂದಿದ್ದರು.
ಆದರೆ ಮರುದಿನ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮಹೇಶ್ ಪೂಜಾರಿಯವರು ಜನಾರ್ಧನ ಗೌಡರನ್ನು ಕೊಂದು ನೀರಿಗೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸುವಂತೆ ರಾಜಕೀಯ ಒತ್ತಡ ತಂದು ಮಹೇಶ್ ಪೂಜಾರಿ ಮೇಲೆ ಪ್ರಸ್ತುತ ಕೊಲೆ ಆರೋಪದಡಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಮಹೇಶ್ ಪೂಜಾರಿ ಕುಟುಂಬ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಅಸಹಜ ಸಾವನ್ನು ಕೊಲೆ ಎಂದು ಅಪಪ್ರಚಾರ ನಡೆಸಿ ಪ್ರಕರಣ ದಾಖಲಿಸಲು ಷಡ್ಯಂತ್ರ ನಡೆಸಿದ ವ್ಯಕ್ತಿಗಳನ್ನು ಮುಗೇರಡ್ಕ ಕಾರಣಿಕ ಕ್ಷೇತ್ರದ ಮೂವರು ದೈವಗಳು ನೋಡಿಕೊಳ್ಳಲಿ ಎಂದು ಚಂದಪ್ಪ ಪೂಜಾರಿಯವರು ಮತ್ತು ಕುಟುಂಬಸ್ಥರು ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಸಂಕ್ರಮಣ ಪರ್ವದ ಸಂಧರ್ಭದಲ್ಲಿ ಬೇಡಿಕೊಂಡರು.
ತನ್ನ ಮಗ ತಪ್ಪು ಮಾಡಿದ್ದರೆ ಆತನಿಗೆ ಶಿಕ್ಷೆಯಾಗಲಿ ,ಇಲ್ಲವೇ ಪ್ರಚಾರಕ್ಕಾಗಿ ರಾಜಕೀಯ ಪ್ರೇರಿತ ಶಿಕ್ಷೆಯಾದರೆ ಆ ವ್ಯಕ್ತಿಗೆ ಶಿಕ್ಷೆಯಾಗುವಂತಾಗಲಿ ಎಂದು ದೈವ ಬಲಿ ಮೊರೆ ಹೋಗಿದ್ದಾರೆ.