ಬೆಂಗಳೂರು, ಜ 25 : ಬೆಂಗಳೂರಿನಲ್ಲಿ ಇತ್ತೀಚೆಗೆ ಪತ್ತೆಯಾಗ ಪಾಕಿಸ್ಥಾನಿ ಯುವತಿ ತನ್ನ ದೇಶಕ್ಕೆ ಹೋಗಲು ಇಚ್ಛಿಸುತ್ತಿಲ್ಲ. ನನ್ನನ್ನು ನೇಣಿಗಾದರೂ ಹಾಕಿ ಜೈಲಿಗಾದರೂ ಹಾಕಿ ಗಂಡನ ಜೊತೆಯಲ್ಲೇ ಇರುತ್ತೇನೆ ಎಂದು ಪೊಲೀಸರನ್ನು ಕೈಕಾಲು ಹಿಡಿದು ಬೇಡುತ್ತಿದ್ದಾಳೆ. ಈ ಘಟನೆಯು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿ ಪತ್ತೆಯಾದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿ, ತನ್ನ ಪ್ರಿಯಕರ, ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಜೊತೆ ವಾಸವಿದ್ದಳು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಆನ್‌ಲೈನ್ ಗೇಮ್ (ಲೂಡೋ) ಮೂಲಕ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಬಳಿಕ ಮದುವೆಗೆ ನಿರ್ಧರಿಸಿದ್ದರು. ಅದಕ್ಕಾಗಿ ಈ ಜೋಡಿಗಳು ಭಾರೀ ಪ್ಲಾನ್ ಮಾಡಿದ್ದವು.
ಆಕೆ ಟೂರಿಸ್ಟ್ ವೀಸಾ ಮುಖಾಂತರ ದುಬೈಗೆ ಹಾರಿ ಬಳಿಕ ವಿಮಾನದಲ್ಲಿ ನೇಪಾಳಕ್ಕೆ ಬಂದಿದ್ದಳು. ಈತನೂ ನೇಪಾಳಕ್ಕೆ ತೆರಳಿ ಅಲ್ಲಿ ಆಕೆಯನ್ನು ಭೇಟಿ ಮಾಡಿದ್ದ. ಇಬ್ಬರೂ ಅಲ್ಲೇ ವಿವಾಹವಾಗಿದ್ದರು. ಮದುವೆಯ ಬಳಿಕ ಬಿಹಾರದ ಬಿರ್‌ಗಂಜ್ ಗಡಿ ಮೂಲಕ ಸೈಲೆಂಟಾಗಿ ಭಾರತ ಪ್ರವೇಶಿಸಿದ ಜೋಡಿ, ಬೆಂಗಳೂರಿಗೆ ಬಂದು ನೆಲೆಸಿದ್ದರು. ಯಾರಿಗೂ ಒಂದಿನಿತೂ ಅನುಮಾನ ಬಂದಿರಲಿಲ್ಲ. ಬಾಡಿಗೆ ಮನೆ ಪಡೆದ ಜೋಡಿ ಕಳೆದ ಐದು ತಿಂಗಳಿಂದ ವಾಸ ಮಾಡುತ್ತಿದ್ದಾರೆ.
ತಾಯಿಯ ನೆನಪಾಗಿ ಪಾಕಿಸ್ತಾನದಲ್ಲಿರುವ ತಾಯಿಗೆ ಯುವತಿ ಕರೆ ಮಾಡಲು ಮುಂದಾದಾಗ ತನಿಖಾ ಸಂಸ್ಥೆಯು ಇದರ ಜಾಡು ಹಿಡಿದು ವಿಚಾರಿಸಿದಾಗ ಈ ಪ್ರಕರಣವು ಬೆಳಕಿಗೆ ಬಂದಿದೆ.
ಆದರೆ ಇದೀಗ ಯುವತಿಯು ಪಾಕಿಸ್ಥಾನಕ್ಕೆ ಮಾತ್ರ ಹೋಗಲು ಒಪ್ಪುತ್ತಿಲ್ಲ. ಇಲ್ಲೇ ಗಂಡನ ಜೊತೆಯಲ್ಲೇ ಇರುತ್ತೇನೆ. ಜೈಲಿಗಾದರೂ ಹಾಕಿ, ನೇಣಿಗಾದರೂ ಹಾಕಿ ಎನ್ನುತ್ತಿದ್ದಾಳಂತೆ. ಇದು ಪೊಲೀಸರ ಮನ ಕಲಕುವಂತೆ ಮಾಡಿದೆ.
ಈಗ ತನಿಖಾ ಸಂಸ್ಥೆಗಳಿಗೆ ತಲೆ ಕೆಡಿಸಿರುವ ಪ್ರಶ್ನೆಯೇನೆಂದರೆ, ಪಾಕ್- ಭಾರತ ಗಡಿಯನ್ನು ದಾಟಿ ಬರುವುದು ಅಷ್ಟು ಸುಲಭವೇ ಎಂಬುದು. ಹೀಗಾಗಿ ಗುಪ್ತಚರ ಇಲಾಖೆ, ಐಎಸ್‌ಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಈ ಜೋಡಿಯ ಹೆಚ್ಚಿನ ತನಿಖೆಗೆ ಮುಂದಾಗಿವೆ.
ಒಟ್ಟಿನಲ್ಲಿ ಮೊಬೈಲ್ ಗೇಮ್‌ನಲ್ಲಿ ಶುರುವಾದ ಈ ಜೋಡಿಯ ಪ್ರೀತಿ ಒಂದು ಸಿನಿಮಾ ಕಥೆಯಂತಿದ್ದರೂ ಈ ಪ್ರಕರಣವು ತನಿಖಾ ಸಂಸ್ಥೆಗಳಿಗೆ ತಲೆಕೆಡಿಸುವಂತೆ ಮಾಡಿದೆ.
ಪ್ರೀತಿಗೆ ಕಣ್ಣಿಲ್ಲ ,ಪ್ರೀತಿಗೆ ಜಾತಿ ಇಲ್ಲ ,ಸಿರಿತನ ಬಡತನ ಇಲ್ಲ ಅಂತ ಇಷ್ಟುದಿನ ಕೇಳಿದ್ದೇವು ಆದರೆ ಇಲ್ಲಿಬ್ಬರು ಪ್ರೇಮಿಗಳು ಪ್ರೀತಿಗೆ ರಾಷ್ಟದ ಬೇದವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.