ರಾಮಕುಂಜ:: ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸರ್ಕಾರದ ಗೋಶಾಲೆಗಳಿಗೆ ಪಶು ಆಹಾರದ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು ಕಳೆದೊಂದು ತಿಂಗಳಿನಿಂದ ಆಹಾರ ಸರಬರಜು ಆಗಿಲ್ಲ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಅಡಳಿತಾವಧಿಯಲ್ಲಿಯೇ ಈ ರೀತಿ ಆಗಿರುವುದು ಗೋ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅನುದಾನದ ಕೊರತೆ
ಗೋಶಾಲೆಗಳಿಗೆ ಪಶು ಆಹಾರ ನೀಡುವ ಬಗ್ಗೆ ಸರಕಾರ ಗುತ್ತಿಗೆದಾರರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯ ಅವಧಿ ಮುಗಿದಿದೆ. ಗುತ್ತಿಗೆ ಮುಂದುವರಿಸುವ ಕಾರ್ಯ ಇನ್ನ ಆಗಿಲ್ಲ ಎನ್ನುವ ವಿಷಯವನ್ನು ಶುಸಂಗೋಪನಾ ಇಲಾಖೆಯ ನಿರ್ದೇಶಕ ಮಂಜುನಾಥ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸರಕಾರ ಫಶು ಸಂಗೋಪನಾ ಇಲಾಖೆಗೆ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದರಿಂದ ಗುತ್ತಿಗೆ ಅವಧಿ ವಿಸ್ತರಿಸಲು ಅಥಾವ ಹೊಸ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಆಹಾರ ಪೂರೈಕೆ ಸ್ಥಗಿತವಾಗಿದೆಯೆಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಆದರೇ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಇಲಾಖೆಯ ಅಧಿಕಾರಿಗಳು ತಯಾರಿಲ್ಲ.
ಗೋವುಗಳ ಸಾವು
ಕಡಬ ತಾಲೂಕಿನ ಕೊಯಿಲದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಕಳೆದ 1 ತಿಂಗಳಿನಿಂದ ಪಶು ಆಹಾರ ಸರಬರಾಜು ಆಗದಿರುವುದರಿಂದ ಮಲೆನಾಡು ಗಿಡ್ಡ ತಳಿಯ ಏಳೆಂಟು ಕರುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಆದರೆ ಕೇಂದ್ರದ ಉಪನಿರ್ದೇಶಕರು ಇದನ್ನು ನಿರಾಕರಿಸಿದ್ದು ಹವಾಗುಣದಲ್ಲಿನ ಬದಲಾವಣೆಯಿಂದಾಗಿ ಆರು ಕರುಗಳು ಸಾವನ್ನಪ್ಪಿವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಗಂಡು ಕರುಗಳಿಗೆ ಬೇಡಿಕೆಯಿಲ್ಲ
ಕೊಲ ಪಾರ್ಮ್ಸ್ ನಲ್ಲಿ 7 ಹಟ್ಟಿಗಳಿದ್ದು, ಸರಿ ಸುಮಾರು 350 ಜಾನುವಾರುಗಳನ್ನು ಸಾಕಲು ಬೇಕಾದಷ್ಟು ಸ್ಥಳಾವಕಾಶವಿದೆ. ಆದರೆ ಸದ್ಯ 700 ರಷ್ಟು ಗೋವುಗಳು ಗೋಶಾಲೆಯಲ್ಲಿದೆ. 30 ಎಕ್ರೆಯಷ್ಟು ಜಾಗದಲ್ಲಿ ಹಸಿ ಹುಲ್ಲು ಬೆಳೆಯಲಾಗಿದೆ. ಗುಡ್ಡ ಪ್ರದೇಶದಲ್ಲಿದ್ದ ಮುಳಿ ಹುಲ್ಲು ಬಿಸಿಲಿನ ತಾಪಕ್ಕೆ ಒಣಗಿ ಹೋಗಿದೆ. ಗೋವುಗಳನ್ನು ಗುಡ್ಡಕ್ಕೆ ಬಿಟ್ಟರೂ ಪ್ರಯೋಜನ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಮಲೆನಾಡು ಗಂಡುಕರುಗಳ ಬೇಡಿಕೆ ಕಡಿಮೆ ಇರುವ ಹಿನ್ನಲೆಯಲ್ಲಿ ಗೋಶಾಲೆಯಲ್ಲಿ ಗಂಡು ಕರುಗಳ ಸಂಖ್ಯೆ ಹೆಚ್ಚಾಗಿದೆ.

ಕಳೆದ ಮೂರು ವರ್ಷಗಳಿಂದ ಜಾನುವಾರುಗಳ ಮಾರಾಟ ಟೆಂಡರ್ ಪ್ರಕ್ರಿಯೆ ನಡೆಯದೇ ಇರುವುದೂ ಜಾನುವಾರುಗಳ ಸಾಮರ್ಥ್ಯಕ್ಕೆ ಹೆಚ್ಚಳ ಕಾರಣವಾಗಿದೆ. ಪ್ರತಿ ವರ್ಷವೂ ಟೆಂಡರ್ ಕರೆದು ಹೋರಿ, ಗಂಡು ಕರುಗಳ ಮಾರಾಟ ಮಾಡಲಾಗುತ್ತಿದೆ. ಆದರೆ ಮೂರು ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಯದೇ ಇರುವುದರಿಂದ ಜಾನುವಾರುಗಳ ಸಂಖ್ಯೆಯೂ ಏರಿಕೆಯಾಗಿದೆ.
ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಪಶು ಆಹಾರ ಸರಬರಾಜುಗೆ ಸಂಬಂಧಿಸಿದಂತೆ ಟೆಂಡರ್ ಅನ್ನು ಪಶು ಸಂಗೋಪನೆ ಇಲಾಖೆಯೆ ಕರೆದು ಗುತ್ತಿಗೆದಾರರನ್ನು ನೇಮಕ ಮಾಡುತ್ತದೆ. ನಿಗದಿತ ಗುತ್ತಿಗೆದಾರರಿಂದ ಕೊಯಿಲ ಫಾರ್ಮ್ಸ್ ನವರು ಪಶು ಅಹಾರವನ್ನು ಬೇಡಿಕೆಗೆ ಅನುಗುಣವಾಗಿ ಖರೀದಿ ಮಾಡುತ್ತಾರೆ. ತಿಂಗಳಿಗೆ ಸುಮಾರು 25 ಟನ್ ನಷ್ಟು ಪಶು ಆಹಾರ ಇಲ್ಲಿಗೆ ಬೇಕಾಗುತ್ತದೆ. .

ಸಧ್ಯ ಚಲ್ಲಕೆರೆಯ ಕಂಪನಿಯೊಂದು ಪಶು ಆಹಾರ ಪೂರೈಕೆ ಟೆಂಡರ್ ಪಡೆದುಕೊಂಡು 1 ವರ್ಷ ಪಶು ಆಹಾರ ಪೂರೈಸಿದೆ. 1 ವರ್ಷ ಅವಧಿ ಮುಗಿದರೂ ಟೆಂಡರ್ ಷರತ್ತಿನಂತೆ ಕಂಪನಿ ಮತ್ತೆ 6 ತಿಂಗಳ ಕಾಲ ಪಶು ಆಹಾರ ಪೂರೈಸಿದೆ. ಆ ಬಳಿಕ ಕಂಪನಿಯವರು ಪಶು ಆಹಾರ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಇತ್ತ ಹೊಸ ಟೆಂಡರ್ ಸಹ ಕರೆದಿಲ್ಲ. 1೦೦ಕ್ಕೂ ಅಧಿಕ ಹಾಲು ಕೊಡುವ ಹಸುಗಳಿವೆ. ನವಂಬರ್ ಅಂತ್ಯದಿಂದ ಇದರ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ಇದ್ದ ಹಸಿ ಹುಲ್ಲನ್ನೇ 700 ಜಾನುವಾರುಗಳಿಗೆ ಹಂಚಿ ಹಾಕಲಾಗಿದೆ. ಕಳೆದ ಕೆಲ ದಿನಗಳ ಅವಧಿಯಲ್ಲಿ ಜಾನುವಾರು ಕೇಂದ್ರದಲ್ಲಿ 7- 8 ಗೋವುಗಳು ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಸಾಕಷ್ಟು ಪಶು ಆಹಾರ ಲಭಿಸದೆ ಸಣ್ಣ ಕರುಗಳು ಒಣ ಹುಲ್ಲನ್ನು ಹೆಚ್ಚು ತಿನ್ನುವುದರಿಂದ ಸಾವು ಸಂಭವಿಸಿರಬಹುದೆಂಬ ಮಾತುಗಳು ಕೇಳಿ ಬರುತ್ತಿದೆ. ಕೇಂದ್ರದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜಾನುವಾರುಗಳು ಇರುವುದರಿಂದ ಜಾನುವಾರುಗಳಿಗೆ ಪಶು ಆಹಾರವೂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಅಶೋಕ್ ರೈ ಬಿಸಿ ಮುಟ್ಟಿಸುತ್ತಲೇ ಕೆ ಎಂ ಎಫ್ ನಿಂದ ಖರೀದಿ – ವಿಡಿಯೋ ನೋಡಿ
ಕೊಲದಲ್ಲಿ 6ಕ್ಕೂ ಅಧಿಕ ಕರು ಸಾವನ್ನಪ್ಪುತ್ತಿದ್ದಂತೆ ಆಹಾರವಿಲ್ಲದೆ ಗೋವುಗಳು ಸಾವನ್ನಪ್ಪುತ್ತಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರಿದ್ದ ಕಾರ್ಯಕ್ರಮದಲ್ಲಿ ಉದ್ಯಮಿ ಅಶೋಕ್ ಕುಮಾರ್ ರೈ ಸರ್ಕಾರದ ದುರಾಡಳಿತದಿಂದ ಆಹಾರ ಪೂರೈಕೆಯಾಗದೆ ಗೋವುಗಳು ಸಾವನ್ನಪ್ಪುತ್ತಿದೆ. ನಾವೆಲ್ಲರೂ ಗೋವುಗಳ ರಕ್ಷಣೆಯ ಕಾರ್ಯಕ್ಕೆ ಮುಂದಾಗಬೇಕೆಂಬ ಹೇಳಿಕೆಯನ್ನು ನೀಡಿದ್ದರು. ಇದಾಗುತ್ತಿದ್ದಂತೆ ಎಚ್ಚೆತುಕೊಂಡ ಕೆ. ಎಂ. ಎಫ್. ಮೂಲಕ ಸುಮಾರು 300 ಚೀಲ ಪಶುಆಹಾರವನ್ನು ಸ್ಥಳೀಯವಾಗಿ ಖರೀದಿಸಲು ಮುಂದಾಗಿದ್ದಾರೆ.

ಗುತ್ತಿಗೆ ಪಡೆಯುತ್ತಿಲ್ಲ!
ಸರ್ಕಾರ ಒಂದೇ ಗುತ್ತಿಗೆಯ ಮೂಲಕ ಎಲ್ಲಾ ಜಿಲ್ಲೆಗಳಿಗೆ ಪಶುಆಹಾರವನ್ನು ಖರೀದಿಸುತ್ತಿದ್ದು, ಆರು ತಿಂಗಳ ಹಿಂದೆಯೇ ಹಿಂದಿನ ಗುತ್ತಿಗೆ ಮುಗಿದಿದ್ದು, ಅದನ್ನೇ ಮುಂದುವರಿಸುವ ಕಾರ್ಯ ಮಾಡಿತ್ತ್ತು. ಆದರೆ ಈಗ ಅದನ್ನು ಮುಂದುವರಿಸುವ ಕಾರ್ಯವನ್ನೂ ಮಾಡದೆ, ಪಶುಆಹಾರ ಪೂರೈಕೆ ಸ್ಥಗಿತವಾಗಿದೆ. ಗುತ್ತಿಗೆ ದಾರರಿಗೆ ಸರ್ಕಾರ ವಿಧಿಸಿದ ಗುಣಪಟ್ಟದಲ್ಲಿ ಪಶುಆಹಾರವನ್ನು ಪೂರೈಸಲಾಗದಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಪಶುಆಹಾರಗಳ ಗುಣ ಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಸಯ ವ್ಯಕ್ತವಾಗುತ್ತಿದೆ.

ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರು!
ಗೋಶಾಲೆಯಲ್ಲಿ ಗೋವುಗಳ ಬೇಕು ಬೇಡಗಳನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ೨೫ ಸಿಬ್ಬಂದಿಗಳಿದ್ದು, ಎಲ್ಲರನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ 7 ಮಂದಿ ಗೋಶಾಲೆಯ ಒಳಗಿನ ಕೆಲಸಗಳನ್ನು ನೋಡಿಕೊಂಡರೆ, ಉಳಿದವರು ಮೇವು ಪೂರೈಕೆ, ಹುಲ್ಲು ಬೆಳೆಯುವ ಜವಾಬ್ದಾರಿಯನ್ನು ನೋಡಿಕೊಳ್ಳುವರು.
ಗೋಶಾಲೆಗಳಿಗೆ ಪಶು ಆಹಾರ ನೀಡುವ ಬಗ್ಗೆ ಇದ್ದ ಗುತ್ತಿಗೆ ಮುಗಿದಿದೆ. ಗುತ್ತಿಗೆ ಮುಂದುವರಿಸುವ ಕಾರ್ಯವೂ ಆಗಿಲ್ಲ. ಇದರಿಂದ ಸ್ಥಳೀಯವಾಗಿ ಪಶುಆಹಾರ ಖರೀದಿಸುವಂತೆ ಸೂಚನೆ ನೀಡಲಾಗಿದೆ.
ಮಂಜುನಾಥ್, ನಿರ್ದೇಶಕ, ಪಶುಸಂಗೋಪನಾ ಇಲಾಖೆ
ಗೋವುಗಳಿಗೆ ಅಗತ್ಯವಿರುವ ಪಶುಆಹಾರ ಪೂರೈಕೆಯಾಗಿದೆ. ಮಲೆನಾಡುಗಿಡ್ಡ ಗೋವುಗಳುಗೆ ಪಶುಆಹಾರ ನೀಡಿಯೇ ಆಗಬೇಕೆಂದಿಲ್ಲ. ಹವಾಮಾನ ಬದಲಾವಣೆ ಹಾಗೂ ಒಣ ಹುಲ್ಲು ಸೇವಿಸಿದರಿಂದ್ದಾಗಿ ಕೆಲವು ಶಕ್ತಿಹೀನ ಕರುಗಳು ಸಾವನ್ನಪ್ಪಿದೆ.
ಡಾ. ವೆಂಕಟೇಶ್ ಎಂ. ಎಸ್. ಉಪ ನಿರ್ದೇಶಕರು, ಜಿಲ್ಲಾ ಜಾನುವಾರು ಕ್ಷೇತ್ರ ಕೊಯಿಲ
ಹತ್ತು ವರ್ಷದ ಹಿಂದೆ ನಾವು ಇಲ್ಲಿಗೆ ತರಬೇತಿ ಪಡೆಯಲು ಬಂದಿರುತ್ತೇವೆ. ಆಗ ಇದ್ದ ಗೋಶಾಲೆಗೂ ಈಗ ಇರುವ ಗೋಶಾಲೆಗೂ ಬಹಳಷ್ಟು ವ್ಯತ್ಯಾಸವಿದೆ. ಈಗ ಗೋಶಾಲೆಯ ಪರಿಸರ ಸಂಪೂರ್ಣ ಬಂಜರು ಭೂಮಿಯಂತಾಗಿ ಹೋಗಿದೆ. ಇಲ್ಲಿಗಿಂತ ಉತ್ತಮ ಗೋಶಾಲೆಗಳು ನಮ್ಮ ಊರಿನಲ್ಲಿದೆ.
ತರಬೇತಿ ಪಡೆಯಲು ಬಂದ ಹೈನುಗಾರರು