ವಿಟ್ಲ: ಜಾತ್ರೋತ್ಸವದಲ್ಲಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಹರ್ಷಿತ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಸಂತೆ ವ್ಯಾಪಾರಿ ವಿಟ್ಲ ನಿವಾಸಿ ಸುರೇಶ್ ದಾಸ್ ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಪತ್ನಿಯ ಮಾನ ಹಾನಿ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಆರು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು.
ಈಗಾಗಲೇ ಪೊಲೀಸರು ಪ್ರಮುಖ ಆರೋಪಿ ಗಣೇಶ್ ಕಡಂಬುನನ್ನು ಬಂಧಿಸಿದ್ದಾರೆ. ಅದಾದ ಬಳಿಕ ಇದೀಗ ಮೂರನೇ ಆರೋಪಿ ಹರ್ಷಿತ್ ಎಂಬವನನ್ನು ಮಂಗಳೂರಿನಲ್ಲಿ ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯು ಈ ಹಿಂದೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಏನಿದು ಪ್ರಕರಣ ?
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದ ಸುರೇಶ್ ದಾಸ್ ಎಂಬವರಿಗೆ ಆರು ಮಂದಿ ಆರೋಪಿಗಳು ಹಲ್ಲೆ ನಡೆಸಿದ್ದರು. ರಾತ್ರಿ 12.30ಕ್ಕೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ಸಮಯದಲ್ಲಿ ಗಣೇಶ್ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಯುವಕರು ಬಂದು ಅಂಗಡಿ ಏಕೆ ಬಂದ್ ಮಾಡುತ್ತಿಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ದೂರು ನೀಡಲಾಗಿತ್ತು.
ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.