ಕಳೆದ ವರ್ಷ ಬಿಡುಗಡೆಯಾದ, ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ ಭರ್ಜರಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ಧೂಳಿಪಟ ಮಾಡಿತ್ತು. ಆರಂಭದಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಈ ಚಿತ್ರ ಎರಡು ವಾರಗಳ ಬಳಿಕ ಪಾನ್ ಇಂಡಿಯಾ ಚಿತ್ರವಾಗಿ ಭಾರತದ ಬಹುತೇಕ ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಕಾಂತಾರ ಸಿನಿಮಾ ಚಿತ್ರ ರಸಿಕರ ಮನ ಗೆದ್ದಿತ್ತು.
ತುಳುನಾಡಿನ ದೈವಾರಾಧನೆಯ ಕತೆ ಹೇಳುವ ಈ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ. ಭಾರತೀಯ ಚಿತ್ರರಂಗದ ದಿಗ್ಗಜರಿಂದ ಅಪಾರ ಮೆಚ್ಚುಗೆ ಪಡೆಯಿತು. ಇದೀಗ ಕಾಂತಾರ 2 ಚಿತ್ರ ಬರಲಿದೆ ಎಂಬ ಸುದ್ದಿಗಳು ಹರಿದಾಡಿತ್ತಿವೆ. . ಅದಕ್ಕೆ ಇತ್ತೀಚೆಗಷ್ಟೆ ನಿರ್ವಪಕ ವಿಜಯ್ ಕಿರಗಂದೂರು ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ‘ಕಾಂತಾರ 2’ ಬಗ್ಗೆ ಮಾಹಿತಿ ನೀಡಿರುವ ಅವರು, ‘ರಿಷಬ್ ಶೆಟ್ಟಿ ಕಾಂತಾರ -2 ಸಿನಿಮಾದ ಕುರಿತಾಗಿ ಸಿದ್ದತೆ ನಡೆಸಲು ತಮ್ಮ ತಂಡದೊಂದಿಗೆ ಕರಾವಳಿಯಲ್ಲಿ ಸದ್ಯ ಬೀಡು ಬಿಟ್ಟಿದ್ದಾರೆ ಎಂದಿದ್ದಾರೆ.
ಕಾಂತಾರ 2 ಚಿತ್ರ ಕಾಂತಾರದ ಮುಂದುವರಿದ ಭಾಗ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಇದು ಚಿತ್ರದ ಮುಂದುವರಿದ ಭಾಗವಲ್ಲ ಎಂದು ತಿಳಿದುಬಂದಿದೆ. ಕಾಂತಾರದಲ್ಲಿ ತೋರಿಸಲಾಗಿದ್ದ ಕಥೆಗೂ ಮುನ್ನ ನಡೆದಿದ್ದೇನು ಎಂಬುದನ್ನು ಕಾಂತಾರ 2 ಹೇಳಲಿದೆಯಂತೆ. ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿದೆ ಎಂಬುದು ವಿಶೇಷ.
ಮೊದಲ ಚಿತ್ರಕ್ಕಿಂತ ದೊಡ್ಡ ಬಜೆಟ್ನಲ್ಲಿ ಎರಡನೇ ಚಿತ್ರವನ್ನು ಪ್ಲಾನ್ ಮಾಡಲಾಗುತ್ತಿದೆ. ಕಾಂತಾರ ಮೊದಲ ಭಾಗ ಕೇವಲ 16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು ಹಾಗೂ 400 ಕೋಟಿಗೂ ಮಿಕ್ಕಿ ಹಣವನ್ನು ಬಾಕ್ಸಾಫಿಸ್ ನಲ್ಲಿ ಬಾಚಿತ್ತು. ‘ಕಾಂತಾರ’ ಎಷ್ಟರ ಮಟ್ಟಿಗೆ ಸಕ್ಸಸ್ ಆಗಿತ್ತೆಂದರೆ, ಅದರ ಮುಂದಿನ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ. ಹೀಗಾಗಿಯೇ ಮೊದಲ ಭಾಗಕ್ಕಿಂದ ದೊಡ್ಡ ಬಜೆಟ್ನಲ್ಲಿ, ದೊಡ್ಡ ಮಟ್ಟದಲ್ಲಿ ‘ಕಾಂತಾರ 2’ ಮೂಡಿಬರಲಿದೆ. ಕೆಲವು ಹೊಸ ಪಾತ್ರಗಳು ಚಿತ್ರತಂಡ ಸೇರಿಕೊಳ್ಳಲಿವೆ. ಆದರೆ, ಕಥಾವಸ್ತು ಮತ್ತು ಶೈಲಿ ಮೊದಲ ಚಿತ್ರದಂತೆಯೇ ಇರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು.
ಕಾಂತಾರ 2 ಸಿನಿಮಾ ಮಾಡುವ ಬಗ್ಗೆ ಚಿತ್ರತಂಡ ದೈವದ ಅನುಮತಿಯನ್ನೂ ಕೇಳಿತ್ತು. ಅದಾದ ಬಳಿಕ ಕಾಂತಾರ 2 ಬರುವುದು ಪಕ್ಕಾ ಎಂದೇ ಎಲ್ಲರು ಭಾವಿಸಿದರು. ಇದರ ಬೆನ್ನಲ್ಲೇ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ 2 ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಚಿತ್ರದ ಚಿತ್ರೀಕರಣ ಯಾವಾಗ ಆರಂಭಗೊಳ್ಳಲಿದೆ ಹಾಗೂ ರಿಲೀಸ್ ಯಾವಾಗ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಇಂಗ್ಲೀಷ್ ಪತ್ರಿಕೆಯೊಂದಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ನೀಡಿರೋ ಸಂದರ್ಶನದಲ್ಲಿ ಕಾಂತಾರ ಪಾರ್ಟ್-2 ಬರೋದು ನಿಜ ಎಂದಿದ್ದಾರೆ. ಕಾಡುಬೆಟ್ಟದ ಶಿವ ರಿಷಬ್ ಶೆಟ್ಟಿ ಕಾಂತಾರ-2 ಕತೆ ಬರೆಯುತ್ತಿದ್ದಾರೆ. ತನ್ನ ಟೀಂ ಜೊತೆ ಕರ್ನಾಟಕ ಕರಾವಳಿ ಕಾಡಿನ ಒಳಗೆ ವಾಸ್ತವ್ಯ ಹೂಡಿರೋ ಶೆಟ್ರು, ಕಾಂತಾರ-2 ಸ್ಟೋರಿಗೆ ಬೇಕಾದ ಎಲ್ಲಾ ಮಾಹಿತಿ ಕಲೆ ಹಾಕುತ್ತಾ ಕಥೆ ಫಾರ್ಮ್ ಮಾಡುತ್ತಿದ್ದಾರೆ ಅಂತ ಅವರು ಹೇಳಿದ್ದಾರೆ.
ರಿಷಬ್ ಶೆಟ್ಟಿ ಸದ್ಯ ತನ್ನ ಸಹ ಬರಹಗಾರರ ಜತೆ ಕರ್ನಾಟಕ ಕರಾವಳಿ ಕಾಡಿನ ಒಳಗೆ ಹೋಗಿ ಸಂಶೋಧನೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೆಲ ಭಾಗವನ್ನು ಚಿತ್ರೀಕರಿಸಬೇಕಾಗಿದೆ. ಆದ ಕಾರಣ ಜೂನ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಇದೆ. ಕಾಂತಾರ 2 ಚಿತ್ರದ ಕೆಲವು ದೃಶ್ಯಗಳನ್ನ ಮಳೆಗಾಲದಲ್ಲಿ ಶೂಟಿಂಗ್ ಮಾಡೋದಕ್ಕೆ ಶೆಟ್ರು ಪ್ಲಾನ್ ಮಾಡಿದ್ದಾರೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ” ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.