KL Rahul-Athiya Shetty: ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರು ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಬಾಲಿವುಡ್‌ನಟ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್‌ನಲ್ಲಿ ಎರಡೂ ಕುಟುಂಬಗಳು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆದಿತ್ತು.
ಸುನೀಲ್ ಶೆಟ್ಟಿ ಹಾಗೂ ಕೆ.ಎಲ್ ರಾಹುಲ್ ಇಬ್ಬರು ತುಳುನಾಡಿನವರೇ ಆಗಿರುವುದು ಮತ್ತೊಂದು ವಿಶೇಷತೆಯಾಗಿದೆ. ಸ್ಟಾರ್ ಗಳ ವಿವಾಹ ಹಿಂದೂ ಧಾರ್ಮಿಕ ಪದ್ದತಿಯಂತೆ ನಡೆಯಿತು.

ವಿವಾಹವಾದ ಬಳಿಕ ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಇಬ್ಬರೂ ತಮ್ಮ-ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆಂದು ತಿಳಿಸಿದ್ದಾರೆ. ವೈವಾಹಿಕ ಜೀವನಕ್ಕೆ ನೂತನ ಜೋಡಿಗೆ ಮಯಾಂಕ್ ಅಗರ್ವಾಲ್ ಸೇರಿದಂತೆ ಟೀಮ್ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

“ನಿನ್ನ ಬೆಳಕಿನಲ್ಲಿ ಹೇಗೆ ಪ್ರೀತಿ ಮಾಡಬೇಕೆಂಬುದನ್ನು ಕಲಿತಿದ್ದೇನೆ. ಅಪಾರವಾದ ಸಂತೋಷ ಮತ್ತು ಪ್ರಶಾಂತತೆ ಇರುವ ಸ್ಥಳದಲ್ಲಿ ನಾನು ತುಂಬಾ ಪ್ರೀತಿಸುವ ವ್ಯಕ್ತಿಯೊಂದಿಗೆ ಇಂದು ವಿವಾಹವಾಗಿದ್ದೇನೆ. ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಾವು ಒಟ್ಟಿಗೆ ಈ ಪಯಣದಲ್ಲಿ ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ,” ಎಂದು ತಾವು ಹಂಚಿಕೊಂಡಿರುವ ವಿವಾಹದ ಫೋಟೋಗಳಿಗೆ ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಈ ರೀತಿಯ ಶೀರ್ಷಿಕೆ ಬರೆದುಕೊಂಡಿದ್ದಾರೆ.

