ಮಂಗಳೂರು: ಕಾರ್ಯಕ್ರಮವೊಂದಕ್ಕೆ ನವ ವಿವಾಹಿತ ದಂಪತಿ ಜತೆಯಾಗಿ ತೆರಳಿದ್ದು, ಅಲ್ಲಿಂದ ವಾಪಸ್ಸು ಬರಲು ಪತಿ ತಡ ಮಾಡಿದರೆಂದು ಅಸಮಾಧಾನಗೊಂಡ ಪತ್ನಿ ಒಬ್ಬಳೇ ಮನೆಗೆ ವಾಪಸ್ಸು ಬಂದು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಭಾನುವಾರ ಸಂಜೆ ನಡೆದಿದೆ
ಬಾಳ ಗ್ರಾಮದ ಒಟ್ಟೆಕಾಯಾರ್ ಮನೆಯ ಹರೀಶ್ ಅವರ ಪತ್ನಿ ದಿವ್ಯಾ (26)ಆತ್ಮಹತ್ಯೆ ಮಾಡಿಕೊಂಡವರು.ಈ ಬಗ್ಗೆ ದಿವ್ಯಾ ಅವರ ತಾಯಿ, ಕೋಟೆಕಾರ್ ಮಾಡೂರಿನ ಗಿರಿಜಾ ಪೂಜಾರಿ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ದಿವ್ಯಾ ಹಾಗೂ ಹರೀಶ್ ಪ್ರೀತಿಸಿ ಮದುವೆಯಾಗಿದ್ದರು.
‘ಮಗಳು ದಿವ್ಯಾ ನಗರದ ಲೇಡಿಹಿಲ್ ನ ಔಷಧಾಲಯವೊಂದರಲ್ಲಿ ಕೆಲಸಮಾಡುತ್ತಿದ್ದಳು. ಮೊಗವೀರ ಯುವಕ ಹರೀಶ್ ಅವರನ್ನು ಪ್ರೀತಿಸಿದ್ದಳು. ನಗರದ ಆರ್ಯ ಸಮಾಜದಲ್ಲಿ 2022 ಮಾರ್ಚ್ 24ರಂದು ಅವರಿಬ್ಬರು ಸರಳವಾಗಿ ಮದುವೆಯಾಗಿದ್ದರು. ನಮಗೆ ವಿಷಯ ಗೊತ್ತಾದ ಬಳಿಕ ನಾವೂ ಅವರ ಮನೆಗೆ ಹೋಗಿ ಬರುತ್ತಿದ್ದೆವು. ದಂಪತಿ ಅನ್ಯೋನ್ಯವಾಗಿದ್ದರು.’ಎಂದು ತಾಯಿ ಹೇಳಿದ್ದಾರೆ.
‘ಮಗಳು ಮುಂಗೋಪಿ ಸ್ವಭಾವದವಳು. ನೆರೆಮನೆಯಲ್ಲಿ ಶನಿವಾರ ನಡೆದಿದ್ದ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಟ್ಟಿಗೆ ಭಾಗವಹಿಸಿದ್ದರು. ಅಲ್ಲಿಂದ ಮನೆಗೆ ಹೊರಡುವಾಗ ಹರೀಶ ತಡ ಮಾಡಿದ್ದರು. ಈ ಕಾರಣದಿಂದ ಅಸಮಾಧಾನಗೊಂಡಿದ್ದ ದಿವ್ಯಾ ಒಬ್ಬಳೇ ಮನೆಗೆ ಮರಳಿದ್ದಳು. ಭಾನುವಾರ ಸಂಜೆ 3 ರಿಂದ 4 ಗಂಟೆ ನಡುವೆ ಮನೆಯ ಬೆಡ್ ರೂಂನಲ್ಲಿ ಚೂಡಿದಾರದ ಶಾಲು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಈ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ’ ಎಂದು ಗಿರಿಜಾ ಪೂಜಾರಿ ಅವರು ದೂರಿನಲ್ಲಿ ತಿಳಿಸಿದ್ದಾರೆ.