ಪುತ್ತೂರು: ಒಕ್ಕಲಿಗ ಸಮುದಾಯಕ್ಕೆ 4 ಶೇ ಮೀಸಲಾತಿ ಹೆಚ್ಚಳಗೊಳಿಸ ಬೇಕೆಂಬ ಪ್ರಭಲ ಆಗ್ರಹ ಬಂದಿದೆ. ಇತರರ ಮೀಸಲಾತಿ ಹೆಚ್ಚಳವಾಗುವ ಸಂದರ್ಭ ಜನ ಸಂಖ್ಯೆಯ ಶೇ 16 ರಷ್ಟಿರುವ ಒಕ್ಕಲಿಗರ ಮೀಸಲಾತಿಯು ಹೆಚ್ಚಳವಾಗಬೇಕೆಂಬ ಭಾವನೆ ಸಮಾಜ ಬಾಂಧವರಲ್ಲಿದೆ. ಈ ಬಗ್ಗೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಎಂದು ಶ್ರೀ ಆದಿಚುಂಚನಗಿರಿ ಕ್ಷೇತ್ರ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೆದ್ದಯಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ಸರಕಾರ ಪೂರಕವಾಗಿ ಸ್ಪಂದಿಸೆಯಾದರೂ ಈವರೆಗೆ ಸ್ಪಷ್ಟ ನಿಲುವಿಗೆ ಬಂದಿಲ್ಲ ಎಂದು ಅವರು ಹೇಳಿದರು. ವ್ಯಕ್ತಿ ಒಳಗೆ ಇರುವ ಶಕ್ತಿಯನ್ನು ಮರೆಯುವ ಕಾರ್ಯವಾಗಬಾರದು. ಸರ್ವವನ್ನು ತ್ಯಾಗ ಮಾಡಿದ ಸಂತ ಸಮಾಜ ನೀಡಿದ ಕೊಡುಗೆ ಫಲವಾಗಿ 1.52ಲಕ್ಷ ವಿದ್ಯಾರ್ಥಿಗಳು ಸಂಸ್ಥಾನದಲ್ಲಿ ವಿದ್ಯೆಯನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಸಚಿವ ಡಾ. ಅಶ್ವತ್ಥ ನಾರಾಯಣ ಮಾತನಾಡಿ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸರ್ಕಾರ ಮಾಡುವ ಜತೆಗೆ ಜನ ಸಂಖ್ಯೆಯ ಆಧಾರದಲ್ಲಿ ನೀಡುವ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.
ಗುಣಮಟ್ಟದ ಜ್ಞಾನ, ಕೌಶಲ್ಯತೆಯನ್ನು ಪಡೆಯುವ ಕಾರ್ಯ ನಡೆಯಬೇಕು. ಸ್ವಾರ್ಥತತೆಯಿಂದ ಹೊರ ಬಂದು ಕೊಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಒಕ್ಕಲಿಗ ಜನಾಂಗಕ್ಕೆ ಆಧ್ಯತೆ ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜಕ್ಕೆ ಬಹುಮುಖವಾದ ಕೊಡುಗೆಯನ್ನು ಶ್ರೀಮಠ ನೀಡುತ್ತಾ ಬಂದಿರುವ ಜತೆಗೆ ಬದುಕಿಗೆ ಅರ್ಥಪೂರ್ಣವಾದ ಮೌಲ್ಯವನ್ನು ನೀಡುವ ಕಾರ್ಯ ಮಾಡಿದೆ. ಸಾಧನೆಯ ಹಾದಿ ಕಷ್ಟವಾದರೂ, ಗುರುಗಳ ಆಶೀರ್ವಾದದಿಂದ ಫಲಪ್ರದವಾಗುತ್ತದೆ. ಸಮಾಜದ ಪ್ರೀತಿ ವಿಶ್ವಾಸ ಪೀಠದ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಿ.ವಿ ಸದಾನಂದ ಗೌಡ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಣಕಹಳೆ ಮೊದಲು ಮೊಳಗಿಸಿದವರು ಒಕ್ಕಲಿಗರು. ದೇಶ ಕಟ್ಟುವುದರಲ್ಲಿ ಗೌಡ ಸಮಾಜದ ಕೊಡುಗೆ ಅಪಾರವಿದೆ. ಸಮುದಾಯದ ಕೆಲಸದ ಜತೆಗೆ ಸಮಾಜ ಕಟ್ಟು ಕಾರ್ಯವಾಗಬೇಕು. ಸಮುದಾಯದ ಸಂಘಟನೆ ಯಾವುದೇ ಪೈಪೋಟಿಗಾಗಿ ಇರುವದಲ್ಲ. 5 ತಾಲೂಕುಗಳನ್ನೊಳಗೊಂಡ ಪುತ್ತೂರು ಜಿಲ್ಲೆಯಾಗಿ ಮಾರ್ಪಾಡಾಗಬೇಕು. ಒಕ್ಕಲಿಗ ಸಮುದಾಯವರು ಕೀಳರಿಮೆ ಬೀಡಬೇಕು. ಎಂದು ತಿಳಿಸಿದರು.

ಕೆ. ಪಿ. ಸಿ. ಸಿ. ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ ಜತೆಗೂಡುವುದು ಆರಂಭ, ಒಟ್ಟಾಗಿ ಚರ್ಚಿಸುವುದು ಪ್ರಗತಿ, ಸಂಘಟನೆ ಮಾಡುವುದು ಯಶಸ್ಸಿನ ಸೂಚಕವಾಗಿದೆ. ಸಮಾಜಕ್ಕಾಗಿ ನಿರಂತರ ಹೋರಾಟವನ್ನು ಮಾಡುತ್ತಿದ್ದು, ಜನಸಂಖ್ಯೆಯ ಆಧಾರದಲ್ಲಿ ಶೇ.12 ಮೀಸಲಾತಿಯನ್ನು ನೀಡಬೇಕು. ಜನರ ಕಷ್ಟ ಸುಖಕ್ಕೆ ಭಾಗಿಯಾಗುವ ಈ ಬಡ ಒಕ್ಕಲಿಗನ ಮೇಲೆ ದಯೆ ಇರಲಿ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಒಕ್ಕಲಿಗ ಸಮಾಜ ಜಾಗೃತ ಸಮಾಜದ ಜತೆಗೆ ಧಾರ್ಮಿಕತೆಯ ಜತೆಗೆ ಸೇರಿಕೊಂಡ ಸಮಾಜವಾಗಿದೆ. ಬಿದ್ದವರನ್ನು ಮೇಲೆ ಎತ್ತು ಕಾರ್ಯವನ್ನು ಸಮಾಜ ಮಾಡಬೇಕು. ಸಂಸ್ಕಾರಯುತ ಶಿಕ್ಷಣ ನೀಡುವ ಕಾರ್ಯ ಮಠದಿಂದ ನಡೆಯುತ್ತಿದೆ. ಮಠ ಹಾಗೂ ಸಮಾಜದ ಬಾಂಧವ್ಯ ಎಲ್ಲಾ ಭಾಗದಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.
ವಿವಿಧ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಶ್ರೀ ಶಂಕರಾರೂಢ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ರಾಜ್ಯ ಸಭಾ ಸದಸ್ಯೆ ಜಗ್ಗೇಶ್, ವಿಧಾನ ಪರಿಷತ್ತ್ ಸದಸ್ಯ ಬೋಜೇಗೌಡ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಎ.ವಿ. ತೀರ್ಥರಾಮ, ಬೆಂಗಳೂರು ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ಸಿ. ಎನ್., ಬೆಳ್ತಂಗಡಿ ಮಾಜಿ ಸಚಿವ ಗಂಗಾಧರ ಗೌಡ, ಕೆ.ವಿ.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಗೌಡ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ. ವಿ. ರೇಣುಕಾ ಪ್ರಸಾದ್, ವಿವಿಧ ಭಾಗದ ಒಕ್ಕಲಿಗ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಎಚ್. ಎಸ್. ಸತ್ಯನಾರಾಯಣ ಗ್ರಂಥದ ಬಗ್ಗೆ ಮಾಹಿತಿ ನೀಡಿದರು. ಚಿದಾನಂದ ಬೈಲಾಡಿ ವಂದಿಸಿದರು. ಟಿವಿ ನಿರೂಪಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.