ನ್ಯೂಯಾರ್ಕ್, ಜ.20: ಸುಮಾರು 12,000 ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಗೂಗಲ್ ಮಾತೃಸಂಸ್ಥೆ (Google Layoffs) ಅಲ್ಫಾಬೆಟ್ ಐಎನ್ಸಿ ಹೇಳಿದೆ.
ಇದರೊಂದಿಗೆ ಕೆಲ ವರ್ಷಗಳ ಹೇರಳ ಅಭಿವೃದ್ಧಿ ಮತ್ತು ನೇಮಕಾತಿಯ ಬಳಿಕ, ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭಿಸಿದ ಟೆಕ್ ದೈತ್ಯ ಸಂಸ್ಥೆಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕಡಿತವು ಜಾಗತಿಕವಾಗಿ ಮತ್ತು ಸಂಸ್ಥೆಯಾದ್ಯಂತ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಶುಕ್ರವಾರ ಇಮೇಲ್ನಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದು, ಈ ನಿರ್ಧಾರಕ್ಕೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಕುಂಟುತ್ತಿರುವ ಜಾಗತಿಕ ಆರ್ಥಿಕತೆ ಮತ್ತು ಗಗನಕ್ಕೇರಿರುವ ಹಣದುಬ್ಬರದ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಡಿತಗೊಳಿಸುವ ನಿರ್ಧಾರವನ್ನು ಜಾಗತಿಕ ಟೆಕ್ ಸಂಸ್ಥೆಗಳಾದ ಫೇಸ್ಬುಕ್ ನ ಮಾತೃಸಂಸ್ಥೆ ಮೆಟಾ 11000 ಉದ್ಯೋಗಿಗಳನ್ನು, ಟ್ವಿಟರ್ 4000, ಅಮಝಾನ್ 18000, ಮೈಕ್ರೋಸಾಫ್ಟ್ 10000 , ಸೇಲ್ಸ್ ಫೋರ್ಸ್ 8000 ಉದ್ಯೋಗ ಕಡಿತಗೊಳಿಸುವ ಬಗ್ಗೆ ಈಗಾಗಲೇ ಪ್ರಕಟಿಸಿವೆ.
ಇಂಟರ್ನೆಟ್ನ ಪ್ರಮುಖ ಸರ್ಚ್ ವ್ಯವಹಾರ(ಮಾಹಿತಿ ಹುಡುಕಾಟ)ದ ಕೊಂಡಿಯಾಗಿ ಗುರುತಿಸಿಕೊಂಡಿರುವ ಗೂಗಲ್, ಸಿಬಂದಿಗಳ ಕಡಿತ ನಿರ್ಧಾರವನ್ನು ಸಾಧ್ಯವಾದಷ್ಟು ಸಮಯ ಮುಂದೂಡುತ್ತಾ ಬಂದಿದೆ.
ಆದರೆ ಡಿಜಿಟಲ್ ಜಾಹೀರಾತು ಆದಾಯದ ಇಳಿಕೆ ಮತ್ತು ಗೂಗಲ್ನ ಕ್ಲೌಡ್-ಕಂಪ್ಯೂಟಿಂಗ್ ವಿಭಾಗಕ್ಕೆ ಅಮಝಾನ್ ಮತ್ತು ಮೈಕ್ರೋಸಾಫ್ಟ್ ಕಾರ್ಪೊರೇಶನ್ನಿಂದ ತೀವ್ರ ಪೈಪೋಟಿ ಎದುರಾಗಿರುವುದರಿಂದ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಗೂಗಲ್ ಹೇಳಿದೆ.
ಇವುಗಳು ನಮ್ಮ ಗಮನವನ್ನು ತೀಕ್ಷ್ಣಗೊಳಿಸಲು, ನಮ್ಮ ವೆಚ್ಚದ ನೆಲೆಯನ್ನು ಮರುರೂಪಿಸಲು ಮತ್ತು ನಮ್ಮ ಪ್ರತಿಭೆ ಮತ್ತು ಬಂಡವಾಳವನ್ನು ನಮ್ಮ ಅತ್ಯುನ್ನತ ಆದ್ಯತೆಗಳಿಗೆ ನಿರ್ದೇಶಿಸಲು ಪ್ರಮುಖ ಕ್ಷಣಗಳಾಗಿವೆ. ಇತ್ತೀಚೆಗೆ ನಿಕಟ ಪೈಪೋಟಿ ಎದುರಿಸುತ್ತಿರುವ ಪ್ರಮುಖ ಹೂಡಿಕೆ ಕ್ಷೇತ್ರವಾದ ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ನಮ್ಮೆದುರು ಗಣನೀಯ ಅವಕಾಶವಿದೆ ಎಂದು ಸುಂದರ್ ಪಿಚೈ ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಗೂಗಲ್ ಆದಾಯದಲ್ಲಿ 27% ಇಳಿಕೆಯಾಗಿದ್ದು 13.9 ಶತಕೋಟಿ ಡಾಲರ್ ಆದಾಯ ದಾಖಲಾಗಿದೆ ಎಂದು ಅಕ್ಟೋಬರ್‌ನಲ್ಲಿ ಸಂಸ್ಥೆ ವರದಿ ಮಾಡಿತ್ತು. ವೆಚ್ಚ ನಿಯಂತ್ರಣಕ್ಕೆ ಗೂಗಲ್ ಆದ್ಯತೆ ನೀಡಲಿದೆ ಎಂದು ಆಗ ಪಿಚೈ ಹೇಳಿದ್ದರೆ, ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಹೊಸ ಉದ್ಯೋಗಗಳ ಸಂಖ್ಯೆಯಲ್ಲಿ 50%ಕ್ಕೂ ಹೆಚ್ಚು ಕಡಿತವಾಗಲಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಟ್ ಹೇಳಿದ್ದರು.