ಮಂಗಳೂರಿನಲ್ಲಿ ಸಿನಿಮಾ ರೀತಿಯಲ್ಲಿ ನಡೆದ ಕಿಡ್ನಾಪ್ ಪ್ರಕರಣವೊಂದನ್ನು ಪೊಲೀಸರೂ ಅದೇ ಸ್ಟೈಲ್ ನಲ್ಲಿ ಭೇದಿಸಿದ್ದಾರೆ. ಹಣಕ್ಕಾಗಿ ಇಬ್ಬರನ್ನು ಕಿಡ್ನಾಪ್ ಮಾಡಿ ಡೀಲ್ ಕುದುರಿಸುತ್ತದ್ದ ಅಪಹರಣಕಾರರು ದಾರಿ ಮಧ್ಯೆಯೇ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಗೋಲ್ಡ್ ಬಿಸ್ಕೇಟ್ ಹಾಗೂ ಹಣ ದೋಚಲು ಯತ್ನಿಸಿದ ಖದೀಮರು ಇದೀಗ ಜೈಲು ಕಂಬಿ ಎಣಿಸಿತ್ತಿದ್ದಾರೆ.
ಉಪ್ಪಿನಂಗಡಿಯ ಅಬೂಬಕ್ಕರ್ ಸಿದ್ದಿಕ್(39), ಬಂಟ್ವಾಳದ ಕಲಂದರ್ ಶಾಫಿ(22), ದೇರಳಕಟ್ಟೆಯ ಇರ್ಫಾನ್(38), ಪಾಂಡೇಶ್ವರದ ರಿಯಾಜ್(33) ಮತ್ತು ಬೆಳ್ತಂಗಡಿಯ ಇರ್ಷಾದ್(28) ಬಂಧಿತರು. ಇವರು ಕೊಟೇಷನ್ ಗ್ಯಾಂಗಿನ ಸದಸ್ಯರಾಗಿದ್ದು , ಇವರಿಗೆ ಮಂಗಳೂರಿನ ರೌಡಿ ಶೀಟರ್ ತಲ್ಲತ್ ಫೈಝಲ್‌ನಗರ ಎಂಬಾತ ಕೃತ್ಯ ಎಸಗಲು ಸುಫಾರಿ ನೀಡಿದ್ದ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿನ ನಿವಾಸಿಗಳಾದ ಶಾರೂಕ್ ಹಾಗೂ ನಿಜಾಮುದ್ದೀನ್ ಎಂಬಿಬ್ಬರು ಸಹೋದರರನ್ನು ಬಂಧಿತ ಆರೋಪಿಗಳು ಅಪಹರಿಸಿ ಹಲ್ಲೆ ನಡೆಸಿ. ಹಣ ನೀಡುವಂತೆ ಪೀಡಿಸಿದ್ದರು. ಇವರ ಪೈಕಿ ಶಾರುಖ್ ಎರಡು ದಿನಗಳ ಹಿಂದೆಯಷ್ಟೆ ವಿದೇಶದಿಂದ ವಾಪಸ್ಸಾಗಿದ್ದ. ಗುರುವಾರ ಬೆಳಿಗ್ಗೆ ಸಹೋದರರನ್ನು ಬಂಧಿಸಿದ, ಖದೀಮರು ರಾತ್ರಿ ವೇಳೆ ತಮ್ಮ ನಿಜಾಮುದ್ದೀನ್ ನನ್ನು ಬಿಡುಗಡೆ ಮಾಡಿದ್ದಾರೆ. ಅಣ್ಣನನ್ನು ಬಂಧ ಮುಕ್ತಗೊಳಿಸಬೇಕಾದರೇ ಹಣ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದರು.
ಬಂಧನ ಮುಕ್ತನಾಗಿ ಮನೆಗೆ ಬಂದ ನಿಜಾಮುದ್ದೀನ್ ತಾಯಿಯ ಸಹಾಯದಿಂದ ಪುತ್ತೂರು ಆಸ್ಫತ್ರೆಗೆ ದಾಖಲಾಗಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದ.
ಇತ್ತ ಅಪಹರಣಕಾರರು ಶಾರೂಕ್ ನನ್ನು ಕಾರಿನಲ್ಲಿ ಶಂಕಾಸ್ಪದವಾಗಿ ತಿರುಗಾಡಿಸುತ್ತಿದ್ದನ್ನು ಮಂಗಳೂರು ಗ್ರಾಮಾಂತರ ಪೊಲೀಸರ ಗಸ್ತು ವಾಹನದವರು ಗಮನಿಸಿದ್ದಾರೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಕಾರನ್ನು ಹಿಂಬಾಲಿಸಿದ್ದರು. ಈ ವೇಳೆ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿ ತಪ್ಪಿಸಲು ಪ್ರಯತ್ನಿಸಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳ ಕಾರಿಗೆ ಅಡ್ಡ ಹಾಕಿ ನಿಲ್ಲಿಸಿ ವಾಹನ ತಪಾಸಣೆ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು.ಕೊನೆಗೂ ಟ್ರೇಸ್ ಮಾಡಿ ಆರೋಪಿಗಳನ್ನು ಬಂದಿಸಿದ್ದು ಈ ವೇಳೆ ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದಿದೆ.
ಅಪಹರಣಕ್ಕೆ ಕಾರಣವೇನು ಗೊತ್ತೇ?
ಸಹೋದರರಿಬ್ಬರನ್ನು ಅಪಹರಿಸಲು ಕಾರಣವೂ ಇದೆ .ಅಪಹರಣಕ್ಕೊಳಗಾದ ನಿಜಾಮುದ್ದೀನ್ ನ ಸಂಬಂಧಿ ಶಫೀಕ್ ಎಂಬಾತ ದುಬೈನಲ್ಲಿದ್ದು ಆತ ಗೋಲ್ಡ್ ಬಿಸ್ಕತ್ತು ವ್ಯವಹಾರ ನಡೆಸುತ್ತಿದ್ದ. ಇದರ ಮಾಹಿತಿ ಪಡೆಯಲೆಂದು ನಿಜಾಮುದ್ದೀನ್ ಹಾಗೂ ಶಾರೂಕ್ ನ ನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಆದರೆ ಈ ಇಬ್ಬರಿಗೂ ಗೋಲ್ಡ್ ಬಿಸ್ಕತ್ತು ವ್ಯವಹಾರದ ಬಗ್ಗೆ ಮಾಹಿತಿ ಇರಲಿಲ್ಲ.ಹೀಗಾಗಿ ನಿಜಾಮುದ್ದೀನ್ ನನ್ನು ಬಿಡುಗಡೆ ಮಾಡಿ ಶಾರೂಕ್ ನನ್ನು ಅಪಹರಿಸಿ ಕಾರಿನಲ್ಲಿ ಸುತ್ತಾಡಿಸಿಕೊಂಡಿದ್ದರು..ಈ ವೇಳೆಯೇ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.