ಪುತ್ತೂರು: ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ , ಉದ್ಯಮಿ , ಕೊಡುಗೈ ದಾನಿ , ಒಕ್ಕಲಿಗ ನಾಯಕ ಡಿವಿ ಸದಾನಂದ ಗೌಡರ ಆಪ್ತ , ಹಲವು ದೇವಸ್ಥಾನಗಳ ಬ್ರಹ್ಮಕಲಶದ ರೂವಾರಿ ಅಶೋಕ್ ಕುಮಾರ್ ರೈ (Ashok Kumar Rai) ಮಂಗಳೂರಿನಲ್ಲಿ ಜ.22ಕ್ಕೆ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ.
ಹಲವು ಸಮಯದಿಂದ ಅಶೋಕ್ ರೈ ಪಕ್ಷ ಬದಲಿಸುತ್ತಾರೆ ಎನ್ನುವ ಚರ್ಚೆ ನಾಳೆ ಅಂತ್ಯವಾಗಲಿದೆ. ಕಾಂಗ್ರೇಸ್ ನ ಪ್ರಜಾಧ್ವನಿ ಯಾತ್ರೆ ನಾಳೆ ಮಂಗಳೂರಿಗೆ ಆಗಮಿಸಲಿದ್ದು, ಆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ಸಿನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಶೋಕ್ ರೈ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಆ ಕಾರ್ಯಕ್ರಮಕ್ಕೆ ತೆರಳಲು ಅಶೋಕ್ ಕುಮಾರ್ ರೈ ಅಭಿಮಾನಿಗಳು ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹಲವು ಸಮಯದಿಂದ ‘ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ’ ಹೆಸರಿನಲ್ಲಿ ಹಲವು ಸಮಾಜಮುಖಿ ಕೆಲಸ ಮಾಡುತ್ತಿರುವ ಈ ಬಳಗದ ಪೋಸ್ಟರ್ ಅಂಟಿಸಿ ನೂರಕ್ಕೂ ಮಿಕ್ಕಿ ಕಾರುಗಳು ನಾಳೆ ಮಂಗಳೂರಿಗೆ ತೆರಳಲಿದ್ದಾರೆ.
ಜ.22ರ ಮಧ್ಯಾಹ್ನ 12.30 ಪುತ್ತೂರಿನ ದರ್ಬೆಯ ರೈ ಎಸ್ಟೇಟ್ ಕಟ್ಟಡದ ಮುಂಭಾಗದಲ್ಲಿ ಅನ್ನಸಂತರ್ಪಣೆ ನಡೆದು , ನಂತರ 100 ಕ್ಕೂ ಮಿಕ್ಕಿ ಕಾರು ಹಾಗೂ 10 ಬಸ್ ನಲ್ಲಿ ಅಭಿಮಾನಿಗಳು ಮಂಗಳೂರಿನ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.