ಪುತ್ತೂರು: ಮಂಗಳೂರಿನಲ್ಲಿ ಜ.22ರಂದು ಸಾಯಂಕಾಲ 4 ಗಂಟೆಗೆ ನಡೆಯುವ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಗೆ ಕಾರ್ಯಕ್ರಮದಲ್ಲಿ ಒಟ್ಟು 50ಸಾವಿರ ಮಂದಿ ಸೇರುವ ನಿರೀಕ್ಷೆಯನ್ನು ಇಟ್ಟಿಕೊಳ್ಳಲಾಗಿದೆ. ಪ್ರತಿ ಬೂತ್ ಮಟ್ಟದಿಂದ 20 ಜನರು ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ (Puttur Congress) 5ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಹೇಳಿದರು.
ಅಶೋಕ್ ಕುಮಾರ್ ರೈ ಸೇರ್ಪಡೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ ರೈ, ಪಕ್ಷಕ್ಕೆ ಬದ್ದವಾಗಿ ಬರುವವರನ್ನು ಸ್ವಾಗತ ಮಾಡುತ್ತೇವೆ ಮತ್ತು ಯಾರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೂ ನಾವು ಗೆಲ್ಲಿಸಿಲು ಪಕ್ಷದ ಚಿಹ್ನೆಯ ಕೆಳಗೆ ಕೆಲಸಮಾಡುತ್ತೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಹೇಳಿದರು.
ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ, ಈ ಬಾರಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪುತ್ತೂರು ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾದ ಎಂ.ಬಿ ವಿಶ್ವನಾಥ ರೈ ಹೇಳಿದ್ದಾರೆ.
ಸದಸ್ಯತ್ವ ಅಭಿಯಾನದ ಮೂಲಕ ಬ್ಲಾಕ್ ಮಟ್ಟದಲ್ಲಿ 12 ಸಾವಿರ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ. ಎರಡು ವರ್ಷಗಳಿಂದ ಕಾರ್ಯಕರ್ತರ ನಿರಂತರ ಸಂಪರ್ಕವನ್ನು ಮಾಡುವ ಮೂಲಕ ಸಂಘಟನೆಯನ್ನು ಗಟ್ಟಿ ಮಾಡಲಾಗಿದೆ ಎಂದರು.
ಮಂಗಳೂರು ಹೋಗುವ ನಿಟ್ಟಿನಲ್ಲಿ 40 ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಇದ್ದು, ಹಲವು ಭಾಗದಿಂದ ತಮ್ಮ ವಾಹನಗಳಲ್ಲಿಯೇ ಬರಲಿದ್ದಾರೆ.
ಮಧ್ಯಾಹ್ನ 2ಗಂಟೆಗೆ ಪುತ್ತೂರಿನಿಂದ ವಾಹನಗಳು ಹೊರಡಲಿದೆ ಎಂದು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕೆ.ಪಿ.ಸಿ.ಸಿ. ವಕ್ತಾರ ಅಮಲಾ ರಾಮಚಂದ್ರ ಮಾತನಾಡಿ 200 ಯುನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ತಿಂಗಳಿಗೆ 2ಸಾವಿರ, ಬಿ.ಪಿ.ಎಲ್. ಕಾರ್ಡ್ ದಾರರಿಗೆ 10ಕೆ.ಜಿ. ಉಚಿತ ಅಕ್ಕಿ ನೀಡುವ ಪ್ರಣಾಳಿಕೆಯನ್ನು ಪಕ್ಷ ಬಿಡುಗಡೆ ಮಾಡಿದೆ. ಇದು ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ತಂಪು ನೀಡುವ ಕೆಲಸವಾಗಿದೆ. ಶೇ.40 ಕಮಿಷನ್ ದಂಧೆಗೆ ಬ್ರೇಕ್ ಹಾಕಿದಾಗ ಜನ ಕಲ್ಯಾಣ ಕಾರ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಘಟಕದ ರವೀಂದ್ರ ರೈ, ಎಸ್.ಟಿ. ಘಟಕದ ಮಹಾಲಿಂಗ ನಾಯ್ಕ, ಅಲ್ಪ ಸಂಖ್ಯಾತ ಘಟಕದ ಶಖೂರ್ ಹಾಜಿ ಹಾಜರಿದ್ದರು.