ವಿಟ್ಲ: ಜ 19: ಮಹಿಳೆಯೊಬ್ಬರು ಮನೆಯೊಳಗಿದ್ದ ವೇಳೆ ಮನೆಗೆ ಬೆಂಕಿ ತಗುಲಿದ ಹಾಗೂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಇಂದು ಬೆಳಿಗ್ಗೆ ಮಾಣಿ ಸಮೀಪ ನಡೆದಿದೆ. ಮನೆಯೊಳಗಡೆ ಬೆಂಕಿ ಕಾಣಿಸಿಕೊಳ್ಳುತ್ತಲೇ ಸಮಯಪ್ರಜ್ಞೆ ಮೆರೆದ ಮಹಿಳೆ ಹೊರಗೊಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಾಪಿಕಾಡು ಬಳಿಯ ರಮಾ ಅಶೋಕ್ ಪೂಜಾರಿ ಎಂಬವರ ಮನೆ ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ. ದುರ್ಘಟನೆ ಸಂಭವಿಸಿದಾಗ ರಮಾರವರು ಒಬ್ಬರೇ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮನೆಯಳಗಡೆ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ದೀಪಾರವರು ಮನೆಯಿಂದ ಹೊರಗೆ ಬಂದಿದ್ದಾರೆ.
ಕೆಲ ಸಮಯದ ಬಳಿಕ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಶಬ್ಧ ಮಾಣಿ ಪೇಟೆಯವರೆಗೆ ಕೇಳಿಸಿದೆ. ಅಲ್ಲದೇ ಬೆಂಕಿಯ ಕೆನ್ನಾಲೆಗೆ ಮನೆಯ ಹೊರಗೂ ಚಾಚಿದೆ. ಮನೆಯಲ್ಲಿದ್ದ ವಿದ್ಯುತ್ ಉಪಕರಣ ಸೇರಿದಂತೆ ವಸ್ತುಗಳೆಲ್ಲ ಸಂಪೂರ್ಣವಾಗಿ ಬೆಂಕಿಗೆ ಭಸ್ಮವಾಗಿದೆ ಎಂದು ತಿಳಿದು ಬಂದಿದೆ.
ಪುತ್ತೂರು ಅಗ್ಮಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.


