ವಿಟ್ಲ: ಇತಿಹಾಸ ಪ್ರಸಿದ್ದ ವಿಟ್ಲ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆಯ ಪ್ರಯುಕ್ತ ಫ್ಯಾನ್ಸಿ ಮಳಿಗೆ ಇಟ್ಟಿದ್ದ ವ್ಯಾಪಾರಿಯೊಬ್ಬರಿಗೆ ಆರು ಮಂದಿಯ ತಂಡ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಜ 19 ರಂದು ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕು ನೆರ್ಲಾಜೆ ಮನೆ ನಿವಾಸಿ ಸುರೇಶ್ ದಾಸ್ ಹಲ್ಲೆಗೊಳಗಾದ ವ್ಯಾಪಾರಿ. ಗಣೇಶ್ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಮಂದಿ ಕೃತ್ಯ ಎಸಗಿದ ಆರೋಪಿಗಳು
ಸುರೇಶ್ ದಾಸ್ ಎಂಬವರು ದೇವಸ್ಥಾನದ ಅನುಮತಿ ಪಡೆದುಕೊಂಡು ಜಾತ್ರೆಯ ಸಂದರ್ಭ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ೧೨.೩೦ಕ್ಕೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ಸಮಯದಲ್ಲಿ ಆರೋಪಿಗಳಾದ ಗಣೇಶ್ ಕಡಂಬು ,ಮಂಜುನಾಥ ಮತ್ತು ಇತರ ನಾಲ್ಕು ಹುಡುಗರು ಬಂದು ಅಂಗಡಿ ಏಕೆ ಬಂದ್ ಮಾಡುತ್ತಿಯಾ ? ಎಂದು ಪ್ರಶ್ನಿಸಿದ್ದಾರೆ.
ಬಳಿಕ ಅಂಗಡಿ ಮಾಲಿಕರಿಗೆ ಅವಾಚ್ಯ ಶಬ್ದಗಳಿಂದ ಬೈದು, ಮೈ ಮೇಲೆ ಕೈಹಾಕಿ ನಾನು ಯಾರೂ ಗೊತ್ತಾ ಎಂದು ಪ್ರಶ್ನಿಸಿ ನೆಲಕ್ಕೆ ಉರುಳಿಸಿದ್ದಾರೆ. ಆರೋಪಿಗಳ ಪೈಕಿ ಮಂಜುನಾಥ ಸುರೇಶ್ ದಾಸ್ ಅವರಿಗೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದು, ಇತರ ಎರಡು ಜನರು ಹೊಟ್ಟೆಗೆ ಗುದ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಅಂಗಡಿಯಲ್ಲಿದ್ದ ಸುರೇಶ್ ದಾಸ್ ಅವರ ಪತ್ನಿ ರಾಜೀವಿ ಗಂಡನಿಗೆ ಹೊಡೆಯುವುದನ್ನು ತಡೆಯಲು ಬಂದಾಗ ಅವರಿಗೂ ಹಲ್ಲೆ ನಡೆಸಿದ್ದಾರೆ. ಸೀರೆ ಎಳೆದು ಮಾನಹಾನಿ ಮಾಡಿದ್ದಾರೆ. ಗಲಾಟೆಯನ್ನು ಗಮನಿಸಿ ಘಟನಾ ಸ್ಥಳದಲ್ಲಿ ಜನರು ಜಮಾಯಿಸಲು ಆರಂಭಿಸಿದಾಗ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಒಟ್ಟು ಆರು ಮಂದಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.