ಪುತ್ತೂರು:ಪ್ರಸ್ತುತ ಖಾಸಗಿ ಬ್ಯಾಂಕ್‍ಗಳ ಧಾವಂತದಿಂದ ರಾಷ್ಟ್ರೀಯ ಬ್ಯಾಂಕ್‍ಗಳ ಅಧಿಕಾರಿಗಳಿಂದ ತೊಡಗಿ ಸಿಬ್ಬಂದಿಗಳಿಗಿರುವ ಒತ್ತಡ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಬ್ಯಾಂಕ್‍ನವರ ಕಷ್ಟಗಳನ್ನು ಅರ್ಥ ಮಾಡಿಕೊಂಡಾಗ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಧರ್ಮಸ್ಥಳ ಎಸ್‍ಕೆಡಿಆರ್‍ಡಿಪಿ ಪ್ರಾದೇಶಿಕ ವ್ಯವಸ್ಥಾಪಕ ಡಾ.ಎಲ್.ಎಚ್.ಮಂಜುನಾಥ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ದರ್ಬೆಯಲ್ಲಿರುವ ರೈ ಎಸ್ಟೇಟ್ ಬಿಲ್ಡಿಂಗ್‍ನಲ್ಲಿ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ಬ್ಯಾಂಕಿಂಗ್ ಸೆಕ್ಟರ್‍ನಲ್ಲಿ ಬಲ್ಕ್ ಅಕೌಂಟ್ ವ್ಯವಸ್ಥೆಯನ್ನು ಪ್ರಪ್ರಥಮ ಬಾರಿಗೆ ಬ್ಯಾಂಕ್ ಆಫ್ ಬರೋಡಾ ಮಾಡಿರುವುದನ್ನು ಶ್ಲಾಘಿಸಿದ ಅವರು, ಪ್ರಸ್ತುತ ಎಸ್‍ಕೆಡಿಆರ್‍ಡಿಪಿ ಬಿಸಿಎ ಕೇಂದ್ರದ ಮೂಲಕ ಸುಮಾರು 51 ಲಕ್ಷ ಗ್ರಾಹಕರನ್ನು ಹೊಂದಿದ್ದು, 40 ಸಾವಿರ ಸಿಬ್ಬಂದಿಗಳು ವಿವಿಧ ವಿಭಾಗಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಬ್ಯಾಂಕ್‍ನಲ್ಲಿ ಬೆರಳೆಣಿಕೆ ಸಿಬ್ಬಂದಿಗಳು ಸಾವಿರಾರು ಗ್ರಾಹಕರನ್ನು ಮ್ಯಾನೇಜ್ ಮಾಡುವ ಪರಿಸ್ಥಿತಿಯಿದೆ. ಈ ನಿಟ್ಟಿನಲ್ಲಿ ಉತ್ತಮ ಸೇವೆ ನೀಡಲು ಗ್ರಾಹಕರ ಸಹಕಾರ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಬ್ಯಾಂಕ್ ಆಫ್ ಬರೋಡಾದ ವಲಯ ವ್ಯವಸ್ಥಾಪಕಿ ಗಾಯತ್ರಿ ಆರ್. ಮಾತನಾಡಿ, ಪ್ರಸ್ತುತ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದ್ದು, ಧರ್ಮಸ್ಥಳ ಎಸ್‍ಕೆಡಿಆರ್‍ಡಿಪಿ ಬ್ಯಾಂಕ್‍ನ ಬೆನ್ನೆಲುಬಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಮುಖ್ಯವಾಗಿ ಹಳ್ಳಿಗಳಲ್ಲಿರುವ ಗ್ರಾಹಕರಲ್ಲಿ ಬ್ಯಾಂಕ್‍ನ ಕುರಿತು ಒಲವು ಜಾಸ್ತಿಯಿದ್ದು, ಬ್ಯಾಂಕ್ ವತಿಯಿಂದ ಇರುವ ವಿವಿಧ ರೀತಿಯ ವಿಮೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಬ್ಯಾಂಕ್ ಪ್ರಬಂಧಕರಲ್ಲಿ ತಿಳಿದುಕೊಳ್ಳಿ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಸಾಲದ ಮಂಜೂರಾತಿ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾಎಲ್.ಎಚ್.ಮಂಜುನಾಥ ಅವರನ್ನು ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ, ಉಪಪ್ರಾದೇಶಿಕ ವ್ಯವಸ್ಥಾಪಕ ವಿದ್ಯಾಧರ, ಮುಖ್ಯ ಅತಿಥಿಗಳಾಗಿ ಡಿಜಿಎಂ ಜಯಚಂದ್ರನ್ ಕೆ.ವಿ., ಸಿರಿ ಗ್ರಾಮೋದ್ಯೋಗದ ಕೆ.ಎನ್.ಜನಾರ್ಧನ್, ನಿವೃತ್ತ ಬ್ಯಾಂಕ್ ಅಧಿಕಾರಿ ಕೃಷ್ಣ ರೈ ಉಪಸ್ಥಿತರಿದ್ದರು.