ಹೊಸದಿಲ್ಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಇಂಡಿಗೋ ಏರ್‌ಲೈನ್ಸ್‌ನ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ‘ಪ್ರಮಾದವಶಾತ್’ ತೆರೆದಿದ್ದರು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಘಟನೆ ಕುರಿತಂತೆ ವ್ಯಾಪಕ ಟೀಕೆಗೆ ಗುರಿಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದನ ಬೆಂಬಲಕ್ಕೆ ಕೇಂದ್ರ ಸಚಿವರು ನಿಂತಿದ್ದಾರೆ.
“ಡಿಸೆಂಬರ್ 10ರಂದು, ತನ್ನ 6ಇ 7339 (ಚೆನ್ನೈನಿಂದ ತಿರುಚಿರಾಪಳ್ಳಿ) ಸಂಖ್ಯೆಯ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪ್ರಕ್ರಿಯೆ ನಡೆಯುವಾಗ ಆಕಸ್ಮಿಕವಾಗಿ ಎಮರ್ಜೆನ್ಸಿ ಎಕ್ಸಿಟ್ ತೆರೆದಿದ್ದರು. ಆಗಿನ್ನೂ ವಿಮಾನ ನೆಲದ ಮೇಲಿತ್ತು. ಈ ಬಗ್ಗೆ ಪ್ರಯಾಣಿಕ ಕ್ಷಮಾಪಣೆ ಕೋರಿದ್ದರು” ಎಂದು ಇಂಡಿಗೋ ಏರ್‌ಲೈನ್ಸ್ ಮಂಗಳವಾರ ತಿಳಿಸಿತ್ತು
ಪ್ರಯಾಣಿಕ ಬಾಗಿಲಿನ ಮೇಲೆ ತಮ್ಮ ಕೈಯನ್ನು ಆನಿಸಿದ್ದರು, ಆಗ ಎಕ್ಸಿಟ್ ದ್ವಾರ ತೆರೆದುಕೊಂಡಿತ್ತು ಎಂದು ಅಧಿಕಾರಿಗಳು ವಿವರಣೆ ನೀಡಿದ್ದರು.
ವಿಮಾನ ಪ್ರಯಾಣ ವಿಳಂಬ
ಇದಾದ ಬಳಿಕ ತುರ್ತು ನಿರ್ಗಮನ ದ್ವಾರವನ್ನು ಮುಚ್ಚಿದ್ದ ವಿಮಾನದ ಸಿಬ್ಬಂದಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ವಿಮಾನದ ಒಳಗಿನ ಸನ್ನಿವೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ತಾಂತ್ರಿಕ ಪರಿಣತರ ತಂಡವು ವಿಮಾನ ಹಾರಾಟಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ ಎರಡು ಗಂಟೆ ವಿಳಂಬವಾಗಿ ವಿಮಾನವು ತಿರುಚಿರಾಪಳ್ಳಿಗೆ ತಲುಪಿತ್ತು. ಈ ವೇಳೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಕೂಡ ತೇಜಸ್ವಿ ಜತೆಗಿದ್ದರು.
ಘಟನೆ ನಡೆದು ಒಂದು ತಿಂಗಳು ಕಳೆದಿದ್ದರೂ ಅದು ಬಹಿರಂಗವಾಗಿರಲಿಲ್ಲ. ಇಂಡಿಗೋ ಅಥವಾ ಡಿಜಿಸಿಎ ಪ್ರಯಾಣಿಕನ ಹೆಸರನ್ನು ತಿಳಿಸಿರಲಿಲ್ಲ. ಆದರೆ ಆ ಪ್ರಯಾಣಿಕ ತೇಜಸ್ವಿ ಸೂರ್ಯ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಈಗ ನಾಗರಿಕ ವಿಮಾನಯಾನ ಸಚಿವಾಲಯ ಕೂಡ ಸ್ಪಷ್ಟಪಡಿಸಿದೆ.
“ಅಜಾಗರಾಕತೆಯಿಂದ ಇಲ್ಲದಿರುವುದು ಮುಖ್ಯ. ವಾಸ್ತವಾಂಶಗಳ ಕಡೆ ನೋಡಿ. ಬಾಗಿಲು ಪ್ರಮಾದವಶಾತ್ ತೆರೆದುಕೊಂಡಿದೆ. ಎಲ್ಲ ತಪಾಸಣೆಗಳನ್ನೂ ನಡೆಸಲಾಗಿದ್ದು, ಅದಾದ ನಂತರವಷ್ಟೇ ವಿಮಾನ ಟೇಕ್ ಆಫ್ ಆಗಲು ಅವಕಾಶ ನೀಡಲಾಗಿದೆ” ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿಯಮಾವಳಿ ಪ್ರಕಾರ, ಇಂತಹ ಅಪರಾಧ ಮಾಡಿದ ಪ್ರಯಾಣಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ತೇಜಸ್ವಿ ಸೂರ್ಯ ಅವರಿಂದ ಕೇವಲ ಕ್ಷಮಾಪಣೆ ಪತ್ರ ಪಡೆದುಕೊಂಡು ಬಿಟ್ಟುಬಿಡಲಾಗಿದೆ. ಅಲ್ಲದೆ, ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗಿದೆ ಎಂದು ವಿರೋಧ ಪಕ್ಷಗಳ ಅನೇಕ ನಾಯಕರು ಆರೋಪಿಸಿದ್ದಾರೆ.
ಕ್ಷಮೆ ಕೋರಿದ್ದಾರೆ ಎಂದ ಸಚಿವ
“ತಮ್ಮ ಕೃತ್ಯಕ್ಕೆ ಪ್ರಯಾಣಿಕ ಕೂಡಲೇ ಕ್ಷಮೆ ಯಾಚಿಸಿದ್ದಾರೆ. ಎಸ್‌ಒಪಿ (ನಿರ್ದಿಷ್ಟ ಕಾರ್ಯಾಚರಣೆ ಪ್ರಕ್ರಿಯೆ) ಪ್ರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು ಮತ್ತು ಕಡ್ಡಾಯ ಎಂಜಿನಿಯರಿಂಗ್ ತಪಾಸಣೆಗಳಿಗೆ ವಿಮಾನವನ್ನು ಒಳಪಡಿಸಲಾಗಿತ್ತು. ಇದರಿಂದಾಗಿ ವಿಮಾನದ ನಿರ್ಗಮನ ವಿಳಂಬವಾಗಿತ್ತು” ಎಂದು ಇಂಡಿಗೋ ತಿಳಿಸಿತ್ತು.
“ಅವರು ಈಗಾಗಲೇ ಕ್ಷಮೆ ಕೋರಿದ್ದಾರೆ. ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡಿತ್ತು. ವಿರೋಧಪಕ್ಷಗಳು ಏನಾದರೂ ಹೇಳಲಿ. ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ” ಎಂದು ಸಿಂಧಿಯಾ ಹೇಳಿದ್ದಾರೆ.
ಈ ಘಟನೆ ಬಗ್ಗೆ ಕೂಡಲೇ ಮಾಹಿತಿ ನೀಡಲಾಗಿತ್ತು. ಯಾವುದೇ ಸುರಕ್ಷತಾ ಕ್ರಮದಲ್ಲಿ ರಾಜಿಯಾಗಿರಲಿಲ್ಲ. ವಿಮಾನ ನೆಲದ ಮೇಲೆಯೇ ಇತ್ತು. ಆ ದಿನ ತಿರುಚಿರಾಪಳ್ಳಿಗೆ ಅದು ಹಾರಾಟ ನಡೆಸುವುದಕ್ಕೂ ಮುನ್ನ ಕಡ್ಡಾಯ ಎಂಜಿನಿಯರಿಂಗ್ ತಪಾಸಣೆಗಳಿಗೆ ಒಳಪಟ್ಟಿತ್ತು ಎಂದು ಡಿಜಿಸಿಎಯ ಹಿರಿಯ ಅಧಿಕಾರಿ ಕೂಡ ತಿಳಿಸಿದ್ದರು