ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78 ನೇ ಜಯಂತ್ಯೋತ್ಸವದ ಅಂಗವಾಗಿ ಐದು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇದನ್ನು ನಡೆಸಲು ಸಕಲ ಸಿದ್ದತೆ ನಡೆಯುತ್ತಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು 1979ರಲ್ಲಿ ದಕ್ಷಿಣ ಕನ್ನಡಕ್ಕೆ ಬಂದು ಮನೆ ಮನೆ ಭೇಟಿ ಮಾಡುವ ಮೂಲಕ ಧರ್ಮಜಾಗೃತಿಯನ್ನು ಮಾಡುವ ಕಾರ್ಯ ಮಾಡಿದ್ದಾರೆ. ಮಂಗಳೂರಿನಲ್ಲಿ ಅವರ 58ನೇ ಜಯಂತಿ ಉತ್ಸವ ಸಂದರ್ಭ ಬೆಳ್ಳಿಯ ತುಲಾಭಾರ ಸೇವೆ, 68ನೇ ಜಯಂತಿ ಉತ್ಸವವೂ ವಿಜ್ರಂಭಣೆಯಿಂದ ನಡೆಸಲಾಗಿತ್ತು. ಈಗ 78ನೇ ಜಯಂತಿ ಉತ್ಸವವನ್ನು ಪುತ್ತೂರಿನಲ್ಲಿ ನಡೆಸಲಾಗುತ್ತಿದೆ. ಎಂದರು.
ಶ್ರೀಗಳು ಭೈರವೈಕ್ಯರಾದ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಜಯಂತ್ಯೋತ್ಸವವನ್ನು ಶಾಶ್ವತವಾಗಿ ನೆನಪಿನಲ್ಲಿ ಇರಿಸುವ ಪ್ರಯುಕ್ತ ಉಪ್ಪಿನಂಗಡಿ ಪೆರಿಯಡ್ಕದಲ್ಲಿ ಸುಮಾರು 1ಕೋಟಿ ವೆಚ್ಚದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಿಲಾನ್ಯಾಸ, ಮಹಾಲಿಂಗೇಶ್ವರ ಐಟಿಐ ಅಲ್ಲಿ ಸುಮಾರು 1 ಕೋಟಿ ವೆಚ್ಚ ಕೌಶಲ್ಯ ಸಭಾಭವನದ ಉದ್ಘಾಟನೆ ನಡೆಯಲಿದೆ.
ಜಯಂತ್ಯೋತ್ಸವದ ಕಾರ್ಯಕ್ರಮದ ವಿವರ
ಆ.22ರಂದು ಮೊದಲಿಗೆ ಪೆರಿಯಡ್ಕದ ಆಂಗ್ಲ ಮಾಧ್ಯಮ ಶಾಲೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಮಠದ ಈಗಿನ ಸ್ವಾಮೀಜಿ ಡಾ| ನಿರ್ಮಾಲನಂದ ಸ್ವಾಮೀಜಿ ನೆರವೇರಿಸಲಿದ್ದಾರೆ. ಬಳಿಕ ಪುತ್ತೂರಿನ ಧರ್ಬೆ ಗೆ ಸ್ವಾಮೀಜಿ ಆಗಮಿಸಲಿದ್ದಾರೆ. ಅಲ್ಲಿ ಸ್ವಾಮೀಜಿಗಳವರ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪುತ್ತಳಿ ಜತೆಗೆ ವಾಹನ ಜಾಥಾ ನಡೆಯಲಿದೆ. ಬಳಿಕ ಮಹಾಲಿಂಗೇಶ್ವರ ಐಟಿಐಗೆ ತೆರಳಿ ಕೌಶಲ್ಯ ಸಭಾಭವನದ ಉದ್ಘಾಟನೆ ನಡೆಯಲಿದೆ.
ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇಗುಲದ ಗದ್ದೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ 120 ಅಡಿ ಉದ್ದ 40ಅಡಿ ಅಗಲದ ವಿಶಾಲ ವೇದಿಕೆ ನಿರ್ಮಿಸಲಾಗುತ್ತಿದೆ. ಭವ್ಯ ವೇದಿಕೆಯಲ್ಲಿ ಡಾ| ನಿರ್ಮಾಲನಂದ ಸ್ವಾಮೀಜಿ 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರ ಬೆಳ್ಳಿ ತುಲಾಭಾರ ನಡೆಯಲಿದೆ. ಸುಮಾರು 70 ಕೆ.ಜಿ. ಬೆಳ್ಳಿಯನ್ನು ಭಕ್ತ ತುಲಾಭಾರಕ್ಕಾಗಿ ಸಮರ್ಪಿಸಿದ್ದಾರೆ. ಕಾರ್ಯಕ್ರಮದ ಸಮಸ್ಟಿ ಖರ್ಚನ್ನು ಭಕ್ತರ ದೇಣಿಗೆಯ ಮೂಲಕ ಭರಿಸಲಾಗುತ್ತದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ವಿವಿಧ ಸಂತರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಎಚ್. ಡಿ. ಕುಮಾರ ಸ್ವಾಮಿ, ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಚಿವರಾದ ಆರ್. ಅಶೋಕ್, ಅರಗ ಜ್ಞಾನೇಂದ್ರ, ಅಶ್ವಥ ನಾರಾಯಣ, ಎಸ್. ಟಿ. ಸೋಮಶೇಖರ, ಸುಧಾಕರ, ಗೋಪಾಲಯ್ಯ, ನಾರಾಯಣ ಗೌಡ ಮತ್ತಿತರರು ಭಾಗವಹಿಸಲಿದ್ದಾರೆ.
ಸ್ವಾಗತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಸಂಚಾಲಕರಾದ ದಿನೇಶ್ ಮೆದು, ಚಿದಾನಂದ ಬೈಲಾಡಿ, ಪುರುಷೋತ್ತಮ ಮುಂಗ್ಲಿಮನೆ, ಗೌರಿ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.
ಸೀರೆ ವಿತರಣೆ :
ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸದಸ್ಯರಿಗೆ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಸೀರೆ ವಿರಣೆಯನ್ನು ನಡೆಸಿದರು. 5ಸಾವಿರಕ್ಕೂ ಅಧಿಕ ಸದಸ್ಯರಿಗೆ ಸೀರೆ ವಿತರಣೆ ಕಾರ್ಯ ನಡೆಯಲಿದೆ.

ಹೊರೆಕಾಣಿಕೆ ಮೆರವಣಿಗೆ!
ಕಾರ್ಯಕ್ರಮದ ಅಂಗವಾಗಿ ಜ.೨೧ರಂದು ವಿವಿಧ ಭಾಗದಿಂದ ತೆಂಗಿನಕಾಯಿ, ಸೀಯಾಳ, ಅಡಿಕೆ ಸೇರಿ ರೈತರು ಬೆಳೆದ ಬೆಳೆಗಳ ಹೊರೆಕಾಣಿ ಮೆರವಣಿಗೆ ಧರ್ಬೆ ವೃತ್ತದಿಂದ ನಡೆಯಲಿದೆ. ಸುಮಾರು 150ಕ್ಕೂ ಅಧಿಕ ಪಿಕಪ್ ಹಾಗೂ ಲಾರಿಗಳಲ್ಲಿ ಹೊರೆಕಾಣಿಕೆ ಬರಲಿದೆ. ಇದನ್ನು ಬಳಿಕ ಅದಿಚುಂಚನಗಿರಿ ಮಠಕ್ಕೆ ತಲುಪಿಸಲಾಗುವುದು. ಒಕ್ಕಲಿಗರು ಮೂಲತ : ಒಕ್ಕಲುತನ ಮಾಡಿಕೊಂಡು ಕೃಷಿ ಬದುಕು ಸಾಗಿಸುವವರು. ಅವರು ಬೆಳೆದ ಉತ್ಪನ್ನದಿಂದ ಸಾಮಾಜಿಕ ಕಾರ್ಯವಾಗಲಿ ಎಂಬ ಸದುದ್ಧೇಶದಿಂದ ಹಸಿರುವಾಣಿ ಸಮರ್ಪಣೆಯಾಗಲಿದೆ ಎಂದು ಸಂಜೀವ ಮಠಂದೂರು ತಿಳಿಸಿದರು.
ನಾಡಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಜಿಕ ರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಭೈರವೈಕ್ಯರಾದ ಬಳಿಕ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಮೊದಲ ಜಯಂತ್ಯೋತ್ಸವ ಪುತ್ತೂರಿನದಾಗಿದೆ.