ಪುತ್ತೂರು: ಮಂಗಳೂರು -ಮಡಿಕೇರಿ ಹೆದ್ದಾರಿಯಿಂದ ಪುತ್ತೂರಿನ ನೆಹರೂನಗರದಿಂದ ವಿವೇಕಾನಂದ ಕಾಲೇಜು ಆವರಣದ ಮುಂಭಾಗದ ಮೂಲಕ ಉಪ್ಪಿನಂಗಡಿಯನ್ನು ಸಂಪರ್ಕಿಸುವ” ಸಂಪರ್ಕ ರಸ್ತೆಯಲ್ಲಿರುವ ವಿವೇಕಾನಂದ ಕಾಲೇಜು ಸಮೀಪದ ರೈಲ್ವೇ ಮೇಲ್ಸೇತುವೆ ಅಭಿವೃದ್ಧಿಗೆ ಕೊನೆಗೂ ಭಾರತೀಯ ರೈಲ್ವೇ ಇಲಾಖೆ 5.34 ಕೋಟಿ ರೂ. ಅನುದಾನ ಮಂಜೂರುಗೊಳಿಸಿದೆ.
ಜ.10 ರಂದು ಈ ಕುರಿತು ರೈಲ್ವೇ ಇಲಾಖೆ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದು, ಅನುದಾನ ಬಿಡುಗಡೆಯ ಕುರಿತು ಪುತ್ತೂರು ಶಾಸಕ ಸಂಜೀವ ಮಠಂದೂರು ಖಚಿತಪಡಿಸಿದ್ದಾರೆ ಹಾಗೂ ಪುತ್ತೂರಿಗೆ ಸಂಬಂಧಿಸಿ ರೈಲ್ವೇ ಇಲಾಖೆಯಿಂದ ಮಂಜೂರಾಗಿರುವ ಎರಡನೇ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.
“
ವಿವೇಕಾನಂದ ವಿದ್ಯಾಂಸ್ಥೆಗಳಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿನ ರೈಲ್ವೇ ಹಳಿಗಳ ಮೇಲ್ಭಾಗದಲ್ಲಿರುವ ಕಿರು ಸೇತುವೆಯನ್ನು ಅಭಿವೃದ್ಧಿಗೊಳಿಸಬೇಕೆಂಬ ಕೂಗು ಹಲವು ದಶಕಗಳದ್ದು. ದಿನಂಪ್ರತಿ ಸುಮಾರು 12 ಸಾವಿರ ವಿದ್ಯಾರ್ಥಿಗಳು ಸಂಚರಿಸುವ ಈ ರಸ್ತೆಯ ಕಿರು ಸೇತುವೆಯು ಅತ್ಯಂತ ಕಿರಿದಾದ ಕಾರಣಕ್ಕೆ ನಿರಂತರ ಸಮಸ್ಯೆ ಉಂಟಾಗಿತ್ತು. ಸ್ವತ: ವಿದ್ಯಾರ್ಥಿಗಳೇ ಸಮಸ್ಯೆ ಬಗೆಹರಿಸುವಂತೆ ಪತ್ರ ಅಭಿಯಾನ, ಪ್ರತಿಭಟನೆಗಳ ಮೂಲಕ ಸರಕಾರಕ್ಕೆ ಕಾಲ ಕಾಲಕ್ಕೆ ಮನವಿ ಮಾಡುತ್ತಾ ಬಂದಿದ್ದರು. ಸ್ಥಳೀಯಾಡಳಿತ, ಈ ಭಾಗದ ಜನಪ್ರತಿನಿಧಿಗಳೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.
ಪುತ್ತೂರು ನಗರಕ್ಕೆ ಸಂಪರ್ಕಿಸುವ ಬೈಪಾಸ್ ರಸ್ತೆಯಾಗಿಯೂ ಬಳಕೆಯಾಗುವ ಈ ರಸ್ತೆಯ ಸೇತುವೆಯನ್ನು ಅಭಿವೃದ್ಧಿಗೊಳಿಸುವಂತೆ ಡಿ.ವಿ. ಸದಾನಂದ ಗೌಡ ಅವರು ರೈಲ್ವೇ ಸಚಿವರಾಗಿರುವಾಗಲೂ ಒತ್ತಡ ತರಲಾಗಿ ಪ್ರಯತ್ನ ನಡೆಸಲಾಗಿತ್ತು. ಈಗ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಬೇಡಿಕೆ ಇರಿಸಿದಾಗ ಪ್ರಯತ್ನ ಸಫಲವಾಗಿದ್ದು, ಬಿಜೆಪಿ ರಾಷ್ಟಿçಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದಿಂದ ಮಂಜೂರಾತಿ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಸಂತಸ ವ್ಯಕ್ತಪಡಿಸಿದ್ದಾರೆ.
ಶೀಘ್ರ ಶಿಲಾನ್ಯಾಸ
ಮೇಲ್ಸೇತುವೆಯ ಅಭಿವೃದ್ಧಿಗೆ ರೈಲ್ವೇ ಇಲಾಖೆಯೇ ಸಂಪೂರ್ಣ ಅನುದಾನ ಒದಗಿಸುತ್ತಿದೆ. ಹಾಲಿ ಮಣ್ಣು ಪರೀಕ್ಷೆಯೂ ನಡೆದಿದ್ದು, ಯೋಜನಾ ವರದಿಯ ಬಳಿಕ ಈ ಅನುದಾನ ಮಂಜೂರಾತಿ ಆಗಿದೆ. ಶೀಘ್ರ ಅಭಿವೃದ್ಧಿಗೆ ಶಿಲಾನ್ಯಾಸ ನಡೆಯಲಿದೆ ಎಂದು ಮಠಂದೂರು ತಿಳಿಸಿದ್ದಾರೆ.
ರೈಲ್ವೇ ಇಲಾಖೆಯಿಂದ ಪುತ್ತೂರಿನ ಕೆಲಸಗಳಿಗೆ ಸಂಬಂಧಿಸಿ ಕಬಕ ಪುತ್ತೂರು ಆದರ್ಶ ರೈಲ್ವೇ ನಿಲ್ದಾಣ, ಎಪಿಎಂಸಿ ಅಂಡರ್ ಪಾಸ್, ರೈಲ್ವೇ ನಿಲ್ದಾಣದಿಂದ ಹಾರಾಡಿ ರಸ್ತೆ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆ ಮೂಲಕ ಶೇ. 90 ರಷ್ಟು ಪುತ್ತೂರಿನ ಬೇಡಿಕೆಗಳು ಈಡೇರುತ್ತಿವೆ. ನಾವು ಬಾಯಲ್ಲಿ ರೈಲು ಬಿಡುವವರಲ್ಲ. ಕೆಲಸ ಮಾಡಿ ತೋರಿಸುವವರು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಅಗಲ ಕಿರಿದಾದ ಮೇಲ್ಸೇತುವೆ
ಈ ರೈಲ್ವೇ ಮೇಲ್ಸೇತುವೆಯ ಅಗಲ ಮಾತ್ರ ಕೇವಲ 12 ಅಡಿ. 70 ಅಡಿ ಉದ್ದದ ಈ ಮೇಲ್ಸೇತುವೆಯ ಅಗಲ ರಸ್ತೆಯ ಅರ್ಧಕ್ಕಿಂತಲೂ ಕಡಿಮೆಯಿದೆ. ಮೇಲ್ಸೇತುವೆ ಕಿರಿದಾಗಿರುವುದರಿಂದ ಅನೇಕ ಸಂದರ್ಭಗಳಲ್ಲಿ ರಸ್ತೆ ಬ್ಲಾಕ್ ಆಗುತ್ತದೆ. ಮಳೆಗಾಲದಲ್ಲಂತೂ ಮಳೆ ನೀರು ತುಂಬಿ ಮೇಲ್ಸೇತುವೆಯ ರಸ್ತೆಯೇ ಮುಚ್ಚಿರುತ್ತದೆ. ಹಾಗಾಗಿ ಮೇಲ್ಸೇತುವೆ ಅಗಲಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು . ವಿದ್ಯಾರ್ಥಿಗಳಿಂದ ಹಾಗೂ ನಾಗರೀಕರಿಂದ ಟ್ವಿಟರ್ ಅಭಿಯಾನವು ನಡೆದಿತ್ತು.