ಪುತ್ತೂರು: ಹಾಡುಹಗಲೇ ಮನೆಗೆ ನುಗ್ಗಿ ಮೂರು ಬಾರಿ ಚೂರಿಯಿಂದ ಇರಿದು ಯುವತಿಯೊರ್ವರನ್ನು ಹತ್ಯೆಗೈದ ಪ್ರಕರಣ ಆರೋಪಿಯನ್ನು ಬಂಧಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಆರೋಪಿ ಬಂಇಯಿಂದ ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ಸ್ಕೂಟರನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕಂಪ ಬದಿಯಡ್ಕ ಎಂಬಲ್ಲಿನ ದಿ.ಗುರುವ ಎಂಬವರ ಪುತ್ರಿ ಜಯಶ್ರೀ (23ವ) ಹತ್ಯೆಯಾದ ಯುವತಿ. ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಅಂಗಾರ ಎಂಬವರ ಪುತ್ರ ಉಮೇಶ್ (24ವ) ಬಂಧಿತ ಆರೋಪಿ. ಇವರಿಬ್ಬರು ಕೆಲ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ತಿಂಗಳ ಹಿಂದೆ ಅಂದರೇ ಕಳೆದ ನವೆಂಬರ್ ತಿಂಗಳಿನಲ್ಲಿ ಯುವಕನ ವರ್ತನೆಯಿಂದ ಬೇಸತ್ತ ಜಯಶ್ರೀ ಪ್ರೀತಿ ನಿರಾಕರಿಸಿದ್ದರು. ಇದರಿಂದ ಕ್ರೋಧಿತನಾಗಿದ್ದ ಉಮೇಶ್ ಸಂಚು ರೂಪಿಸಿ ಯುವತಿಯನ್ನು ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಜಯಶ್ರೀ ಅವರ ತಂದೆ ಕಳೆದ ವರ್ಷ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು. ಆ ಬಳಿಕ ತಾಯಿ ಹಾಗೂ ತಮ್ಮನ ಜತೆ ಮನೆಯಲ್ಲಿ ವಾಸಿಸುತ್ತಿದ್ದರು. ಬಿಎಸ್ ಸ್ಸಿ ಪದವಿಧರೆಯಾಗಿರುವ ಜಯಶ್ರೀಯವರು ವ್ಯಾಸಂಗ ಮುಗಿಸಿದ ಬಳಿಕ ಒಂದಷ್ಟು ಸಮಯ ಉದ್ಯೋಗ ಮಾಡಿದ್ದು ಸದ್ಯ ಕೆಲಸ ಬಿಟ್ಟು ಮನೆಯಲ್ಲಿದ್ದರು.
ಜ 17 ರಂದು ಬೆಳಿಗ್ಗೆ ಜಯಶ್ರೀ ತಮ್ಮ ಮಂಗಳೂರಿಗೆ ಹೋಗಿದ್ದರು . ತಾಯಿ 10.30 ರ ಸುಮಾರಿಗೆ ಮನೆ ಬಳಿಯ ತೋಟಕ್ಕೆ ಹೋಗಿದ್ದರು. ಜಯಶ್ರೀಯವರೊಬ್ಬರೇ ಮನೆಯಲ್ಲಿದ್ದ ವೇಳೆ ಆರೋಪಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾನೆ. ಈ ಸಂದರ್ಭ ಮನೆಯ ಕಿಚನ್ ನಲ್ಲಿ ಜಯಶ್ರೀ ಇದ್ದರು. ಆಕೆಯನ್ನು ರೂಂ ನೊಳಗೆ ಎಳೆದುಕೊಂಡು ಹೋಗಿ ಕಿಚನ್ ನಲ್ಲಿ ಬಳಸುವ ಚೂರಿಯಿಂದ ಮೂರು ಬಾರಿ ಇರಿದು ಅಲ್ಲಿಂದ ಪರಾರಿಯಾಗಿರುವುದಾಗಿ ಆರೋಪಿಯು ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಆರೋಪಿ ಹಾಗೂ ಜಯ ಶ್ರೀ ಮಧ್ಯೆ ಕಳೆದ ನವೆಂಬರ್ ಬಳಿಕ ಮನಸ್ತಾಪ ಉಂಟಾಗಿತ್ತು. ಈ ಬಳಿಕ ಆರೋಪಿಯು ಯುವತಿಯ ಕೊಲೆಗೆ ಸಂಚು ರೂಪಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ . ತಿಂಗಳ ಹಿಂದೆ ಉಮೇಶ್ ಪುತ್ತೂರು ತಾಲೂಕಿನ ಪುರುಷರಕಟ್ಟೆಯ ಅಂಗಡಿಯೊಂದರಿಂದ ಚಾಕು ಖರೀದಿಸಿದ್ದ. ಇದೇ ಚಾಕು ಬಳಸಿ ಆಕೆಯನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ.
ಮನೆಗೆ ನುಗ್ಗಿ ಯುವತಿಯನ್ನು ಇರಿದ ಬಳಿಕ ಅಲ್ಲಿಂದ ಎಸ್ಕೆಪ್ ಆದ ಉಮೇಶ್ ಪುತ್ತೂರು ಪೇಟೆಗೆ ಬಂದಿದ್ದ. ಯುವತಿಯ ತಾಯಿ ಗಿರಿಜಾರವರು ಮಗಳ ಹತ್ಯೆಯಲ್ಲಿ ಉಮೇಶನ ಪಾತ್ರವಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪೊಲೀಸರು ಆತನ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ಪತ್ತೆ ಹಚ್ಚಲು ಕಾರ್ಯಚರಣೆ ನಡೆಸಿದ್ದಾರೆ. ಈ ಬಗ್ಗೆ ಪುತ್ತೂರು ಸುತ್ತ ಮುತ್ತಲಿನ ವಿವಿಧ ಠಾಣೆಗಳಿಗೆ ಮಾಹಿತಿ ನೀಡಿ ಅವರೆಲ್ಲಾರ ಸಹಕಾರದಿಂದ ಆರೋಪಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ಅಧಿಕ್ಷಕ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಎಸ್ಪಿ ನೀಡಿದ ವಿವರಣೆ
ಆರೋಪಿ ಯುವತಿಯ ಮನೆಗೆ ಬಂದ ಹಾಗೂ ಕೊಲೆ ಕೃತ್ಯ ನಡೆಸಿದನ್ನು ನೋಡಿದ ಹಾಗೂ ಆತ ಅಲ್ಲಿಂದ ಪರಾರಿಯಾಗಿರುವದನ್ನು ನೋಡಿದವರಿಲ್ಲ. ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿತ್ತೆ ಎಂಬ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿದು ಬರಬೇಕಿದೆ ಎಂದು ಅವರು ತಿಳಿಸಿದರು
. ಘಟನೆಗೆ ಸಂಬಂಧಿಸಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎನ್.ಎಮ್, ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ.ವೀರಯ್ಯ ಹಿರೇಮಠ್ ರವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್ ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕ ಉದಯರವಿ ಎಮ್. ವೈ., ಎ.ಎಸ್.ಐ ಮುರುಗೇಶ್, ಪೊಲೀಸ್ ಸಿಬ್ಬಂದಿಯವರಾದ, ಪ್ರವೀಣ ರೈ, ಹರೀಶ್ ಜಿ.ಎನ್., ಅದ್ರಾಮ, ಧರ್ಣಪ್ಪ, ಸಲೀಂ, ಶಿವಾನಂದ, ದೇವರಾಜ್, ಸತೀಶ್, ವರ್ಗೀಸ್, ಹರ್ಷಿತ್, ಗಿರೀಶ್ ರೈ, ಸದ್ದಾಂ, ಹರೀಶ್ ನಾಯ್ಕ್, ಬಿ., ನಿತಿನ್‍ಕುಮಾರ್, ಅಡಿವೆಪ್ಪ ಸಂಗೊಳ್ಳಿ, ಲೋಕೇಶ್, ಗಾಯತ್ರಿ ಇವರನ್ನೊಳಗೊಂಡ ತಂಡ ಆರೋಪಿ ಉಮೇಶ್ ನನ್ನು ಬಂಧಿಸಿದ್ದರು.