ಪುತ್ತೂರು, ಜ 17 : ಮನೆಯಂಗಳದಲ್ಲೇ 23 ವರ್ಷದ ಯುವತಿಗೆ ವ್ಯಕ್ತಿಯೊಬ್ಬ ಚೂರಿ ಇರಿದು ಪರಾರಿಯಾದ ಘಟನೆ ಜ.17ರಂದು ಪುತ್ತೂರು (Puttur) ತಾಲೂಕಿನ ಮುಂಡೂರು ಸಮೀಪದ ಕಂಪದಲ್ಲಿ ನಡೆದಿದೆ.
ಮೃತ ಯುವತಿಯನ್ನು ಮುಂಡೂರು ಕಂಪ ನಿವಾಸಿ ದಿ.ಗುರುವಪ್ಪ ಮತ್ತು ದೇವಕಿ ದಂಪತಿಗಳ ಪುತ್ರಿ ಜಯಶ್ರೀ (23) ಎಂದು ಗುರುತಿಸಲಾಗಿದೆ.
ವ್ಯಕ್ತಿಯೋರ್ವ ಯುವತಿಗೆ ಚೂರಿ ಇರಿದಿದ್ದು, ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಜಯಶ್ರೀ ಈ ಮೊದಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲ ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದಳು ಎಂದು ತಿಳಿದು ಬಂದಿದೆ.
ಯುವತಿಯ ತಂದೆ ದಿ.ಗುರುವಪ್ಪ ಅವರು ಕಳೆದ ವರ್ಷ ಕೋವಿಡ್ ನಿಂದ ಮೃತಪಟ್ಟಿದ್ದರು. ಇದೀಗ ಮಗಳನ್ನು ಕೂಡ ತಾಯಿ ಕಳೆದುಕೊಂಡಿದ್ದು ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ.
ಯುವತಿಯ ಮೃತದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದ್ದು, ಸಂಪ್ಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದು ಸಂಪ್ಯ ಪೊಲೀಸರ ವಿಚಾರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.