ಬಂಟ್ವಾಳ: ಬೈಕ್ ಮತ್ತು ಬಂಟ್ವಾಳ ಬಿಜೆಪಿ ರ್‍ಯಾಲಿಯ ಪ್ರಚಾರದ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ಕಲ್ಲಡ್ಕದ ನರಹರಿ ಸಮೀಪ ನಡೆದಿದೆ (BJP Rally Vehicle) . ಈ ವಾಹನ ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಪ್ರಚಾರ ಕಾರ್ಯ ಕೈಗೊಂಡ ವಾಹನವಾಗಿದೆ.
ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ ಗುರುವಾಯನಕೆರೆ ಮೂಲದ ವಿಜಿತ್ (35) ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಜಿತ್ ತರಕಾರಿ ನಾರಾಯಣ ಎಂಬವರ ಪುತ್ರ.
ಜ.14 ರಂದು ಆರಂಭವಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದ ಗ್ರಾಮ ವಿಕಾಸ ಯಾತ್ರೆಯ ಪ್ರಚಾರದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಕೆಲ ಕಾಲ ಸಂಚಾರಕ್ಕೆ ತೊಡಕು ಉಂಟಾಯಿತು.
ಜ.14 ರಿಂದ 26ರವರೆಗೆ 13 ದಿನ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಗ್ರಾಮ ವಿಕಾಸ ಯಾತ್ರೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮದಲ್ಲಿ ಸಂಚರಿಸಲಿದೆ. ಯಾತ್ರೆ ಪ್ರಾರಂಭವಾಗಿ 3ನೇ ದಿನದಂದೇ ಪ್ರಚಾರ ವಾಹನ ಅವಘಡ ಸಂಭವಿಸಿದೆ.
ಕಳೆದ ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರೋಡ್ ಶೋ ನಡೆಸಿದ್ಧ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನ ಇದೀಗ ಬಂಟ್ವಾಳಕ್ಕೆ ಆಗಮಿಸಿತ್ತು, ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಈ ವಾಹನ ಗಮನ ಸೆಳೆಯುತಿತ್ತು. ಇದೀಗ ಅವಘಡ ಸಂಭವಿಸಿದೆ.
ಇದು ತೆಲಂಗಾಣ ಮೂಲದ ಇಸುಝ್ ಕಂಪೆನಿಯ ಎಸ್ ಕ್ಯಾಬ್ ವಾಹನವಾಗಿದ್ದು, ರೋಡ್ ಶೋ ಯಾತ್ರೆಗಳನ್ನು ನಡೆಸುವ ಸಂದರ್ಭ ಹಿಂಬದಿಯಲ್ಲಿ ನಿಂತು ಸಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಜತೆಗೆ ವಾಹನದಲ್ಲಿ ಲೈಟಿಂಗ್ ವ್ಯವಸ್ಥೆ ಧ್ವನಿವರ್ಧಕ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.