ಕೊಡಗು : ಆಕಾಶದಲ್ಲಿ ಹಾರಾಡುತ್ತಾ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಎಂದರೆ ಯಾರಿಗೆ ತಾನೆ ಖುಷಿಯಾಗಲ್ಲ ಹೇಳಿ. ಅದರಲ್ಲೂ ತೆರೆದ ಗ್ಲೈಡರ್‌ನಲ್ಲಿ ಸಾಹಸಮಯವಾಗಿ ಹಾರಾಡುತ್ತಾ, ಬೆಟ್ಟ ಗುಡ್ಡಗಳ ನಡುವೆ ತೇಲಾಡುವುದು ಎಂದರೆ ಎಷ್ಟು ಖುಷಿ ಇರಬೇಕು ಅಲ್ವಾ. ಅಂತಹದ್ದೇ ಖುಷಿ ಅನುಭವಿಸುತ್ತಾ ಆಕಾಶದಲ್ಲಿ ಗ್ಲೆಡರ್ (Para Glaider Accident) ಮೂಲಕ ಹಾಡುತ್ತಿದ್ದ ಫೈಲೆಟ್ ಸೇರಿದಂತೆ ಇಬ್ಬರು ಗ್ಲೈಡರ್ ಸಹಿತ ನೆಲಕ್ಕಪ್ಪಳಿಸಿದ ಭಯಾನಕ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರಿನ ಮುತ್ತಣ್ಣ ಎನ್ನುವವರು ಹೀಗೆ ಕಳೆದ ನಾಲ್ಕೈದು ತಿಂಗಳಿನಿಂದ ಪ್ಯಾರಾ ಗ್ಲೈಡರ್ ಮೂಲಕ ತಮ್ಮ ಏರಿಯಾದಲ್ಲಿ ಹಾರಾಟ ನಡೆಸುತ್ತಿದ್ದರು.
ಆದರೆ ಶನಿವಾರ ಸಂಜೆ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ 2 ಸೀಟರ್ ಪ್ಯಾರಾ ಗ್ಲೈಡರ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಪ್ಪಳಿಸಿರುವ ಘಟನೆ ನಡೆದಿದೆ. ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರಿನಲ್ಲಿ ಲಕ್ಷ್ಮಣ ತೀರ್ಥ ನದಿಯ ಪಕ್ಕದಲ್ಲಿರುವ ಹೆದ್ದಾರಿಗೆ ಪ್ಯಾರಾ ಗ್ಲೈಡರ್ ಅಪ್ಪಳಿಸಿದೆ. ಆಕಾಶದಿಂದ ರಭಸವಾಗಿ ಬಂದ ಗ್ಲೈಡರ್ ರಸ್ತೆಗೆ ಅಪ್ಪಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗ್ಲೈಡರ್‌ನಲ್ಲಿ ಇದ್ದ ಪೈಲೆಟ್ ಮುತ್ತಣ್ಣ ಮತ್ತು ಜೊತೆಯಲ್ಲಿದ್ದ ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
#Kodagu Two paragliders survived a crash after they were forced to land due to engine failure. The paragliders landed on the main road and had a collision. Both the pilot and passenger survived with minor injuries #Karnataka pic.twitter.com/yrmBZH0hUn
— Imran Khan (@KeypadGuerilla) January 14, 2023
ಪ್ಯಾರಾ ಗ್ಲೈಡರ್ ರಸ್ತೆಗೆ ಅಪ್ಪಳಿಸುವ ಸಂದರ್ಭ ರಸ್ತೆಯಲ್ಲಿ ಎದುರಿನಿಂದ ಕಾರೊಂದು ಬಂದಿದೆ. ಪ್ಯಾರಾ ಗ್ಲೈಡರ್ ರಸ್ತೆಗೆ ಅಪ್ಪಳಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ಕಾರಿನ ಚಾಲಕ ಕಾರನ್ನು ರಸ್ತೆ ಪಕ್ಕಕ್ಕೆ ವೇಗವಾಗಿ ತಿರುಗಿಸಿದ್ದಾರೆ. ಇದರಿಂದ ನಡೆಯಬಹುದಾಗಿ ದೊಡ್ಡ ಅಪಘಾತ ತಪ್ಪಿದಂತೆ ಆಗಿದೆ. ತಾಂತ್ರಿಕ ದೋಷದಿಂದ ಪ್ಯಾರಾ ಗ್ಲೈಡರ್ ತುರ್ತು ಭೂಸ್ಪರ್ಶ ಮಾಡಿದೆ. ಶನಿವಾರ ಸಂಜೆ 4.45 ರ ಸುಮಾರಿಗೆ ಹಾರಾಟ ನಡೆಸುತ್ತಿದ್ದ ಪ್ಯಾರಾ ಗ್ಲೈಡರ್ ರಸ್ತೆಯ ಮೇಲೆ ತಾಂತ್ರಿಕ ದೋಷದಿಂದ ಭೂಮಿಗೆ ಅಪ್ಪಳಿಸಿದೆ. ಕೊಟ್ಟಗೇರಿ ಕಡೆಗೆ ಕಾರ್ಮಿಕರನ್ನು ಕೆರೆತರಲು ತೆರಳುತ್ತಿದ್ದ ಕಾರಿಗೆ ಗ್ಲೈಡರ್ ಡಿಕ್ಕಿಯಾಗಬೇಕಾಗಿತ್ತು.
ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಕಾರು ಚಾಲಕ ತಿಳಿಸಿದ್ದಾರೆ. ಈ ಹಿಂದೆ ಪೊನ್ನಂಪೇಟೆ ತಾಲೂಕಿನ ಬೇಗೂರು ಕೊಲ್ಲಿಯಲ್ಲಿ ಈ ರೀತಿಯ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದರು. ಮತ್ತೊಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಈ ಘಟನೆ ಆದ ಬಳಿಕ ಪ್ಯಾರಾ ಗ್ಲೈಡರ್ ಹಾರಾಟಕ್ಕೆ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧದ ವ್ಯಕ್ತಪಡಿಸಿದ್ದರು. ಅಷ್ಟು ವಿರೋಧದ ನಡುವೆಯೂ ಮುತ್ತಣ್ಣ ಎಂಬುವವರು ಪ್ರವಾಸಿಗರನ್ನು ಅಕರ್ಷಣೆ ಮಾಡಲು ಪ್ಯಾರಾ ಗ್ಲೈಡರ್ ನಡೆಸುತ್ತಿದ್ದರು.
ಹೀಗಾಗಿ ಗ್ಲೈಡರ್ ಹಾರಾಟಕ್ಕೆ ಗ್ರಾಮದಲ್ಲಿ ಪರ ವಿರೋಧದ ಭಾರೀ ಚರ್ಚೆಗಳು ತಾರಕ್ಕಕೇರಿದ್ದವು. ಅಲ್ಲದೇ ಇತ್ತೀಚೆಗಷ್ಟೇ ಗ್ರಾಮ ಪಂಚಾಯತಿ ವತಿಯಿಂದಲೂ ಮುತ್ತಣ್ಣ ಅವರು ಗ್ಲೈಡರ್ ಹಾರಾಟಕ್ಕೆ ನಿರಾಕ್ಷೇಪಣಾ ಪತ್ರ ಪಡೆದಿದ್ದರು. ಸದ್ಯ ಘಟನೆ ಸಂಬಂಧಿಸಿದಂತೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಸ್ತೆಗೆ ಬಿದ್ದು ಗಾಯಗೊಂಡಿದ್ದ ಗ್ಲೈಡರ್ ಪ್ರಯಾಣಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಮುರಿದು ಬಿದ್ದ ಗ್ಲೈಡರ್ ಅನ್ನು ವಾಹನದ ಮೂಲಕ ಮಾಲೀಕ ಮುತ್ತಣ್ಣ ಅವರ ಮನೆಗೆ ಸಾಗಿಸಲಾಗಿದೆ.