ಪುತ್ತೂರು: ನಗರಕ್ಕೆ ಸಮಗ್ರ ಕುಡಿಯುವ ನೀರು ಪೂರೈಕೆ ಮಾಡಲು ಸುಮಾರು 117 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿಯಿಂದ ನಾಗರೀಕರಿಗೆ ನಿತ್ಯ ಸಮಸ್ಯೆಯಾಗುತ್ತಿರುವ ಬಗ್ಗೆ ಪುತ್ತೂರು ನಗರ ಸಭೆಯಲ್ಲಿ ನಡೆದ ಜಲಸಿರಿ ಯೋಜನೆಯ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆಯಾಯಿತು.
ಶುಕ್ರವಾರ ಪುತ್ತೂರು ನಗರ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಜಲಸಿರಿ ಯೋಜನೆಯ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭ ಶಾಸಕರು ಸೇರಿ ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ ಸೇರಿದಂತೆ ಪ್ರಮುಖರು ಕೆಯುಐಡಿಎಫ್‌ಸಿ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಶಾಸಕ ಸಂಜೀವ ಮಠಂದೂರು ಮಾತನಾಡಿ “2019 ರ ಜ. 11ರಂದು ಕಾಮಗಾರಿ ಆರಂಭಿಸಿದ್ದು, ವಿಸ್ತರಿತ ಅವಧಿಯನ್ನೂ ಸೇರಿಸಿದರೆ 2023ರ ಮಾರ್ಚ್ 10ರಂದು ಮುಗಿಸಬೇಕಿದೆ. ಕೆಲಸದ ಸ್ಥಿತಿ ನೋಡಿದರೆ ಇನ್ನು 6 ತಿಂಗಳಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂದರು.
ಫೆ.17 ರ ಬಜೆಟ್ ಬೆನ್ನಲ್ಲೇ ನೆಕ್ಕಿಲಾಡಿಯಿಂದ ಸೀಟೀ ಗುಡ್ಡೆಗೆ ನೀರು ಹರಿಸುವ ಮೊದಲ ಹಂತ ಉದ್ಘಾಟಿಸುವ ಉದ್ದೇಶವಿದೆ ಎಂದು ಶಾಸಕರು ಹೇಳುತ್ತಿದ್ದಂತೆ, ಆ ಹೊತ್ತಿಗೆ ಕಾಮಗಾರಿ ಮುಗಿಸಲು ಅಸಾಧ್ಯ ಎಂದು ಅಧಿಕಾರಿಗಳು, ಗುತ್ತಿಗೆದಾರ ಸಂಸ್ಥೆ ಪ್ರತಿನಿಧಿ ಹೇಳಿದರು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ಸಾರಥ್ಯದಲ್ಲಿ ಜಲಸಿರಿ ಯೋಜನೆ ಬಗ್ಗೆ ನಾಗರಿಕರಿಂದ 67 ದೂರುಗಳು ಬಂದಿದೆ. ಪ್ರತೀ ವಾರ ಆರೇಳು ದೂರು ಬರುತ್ತಲೇ ಇದೆ ಎಂಬ ಆರೋಪ ಕೇಳಿ ಬಂತು. ಹೊಸ ಪೈಪ್‌ಲೈನ್ ಮೂಲಕ ಹೊಸದಾಗಿ 1500 ಸಂಪರ್ಕ ನೀಡಲಾಗಿದೆ. ಹಳತೂ ಸೇರಿದಂತೆ 6500 ಸಂಪರ್ಕ ಜೋಡಿಸಲಾಗಿದೆ. ವರ್ಷಗಳ ಹಿಂದಿನ ಹಳೆಯ ಪೈಪ್‌ಗಳಲ್ಲಿ ಕೆಸರು ತುಂಬಿದೆ ಎಂದು ಅಧಿಕಾರಿಗಳು, ಗುತ್ತಿಗೆದಾರರು ನುಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಮಾನಾಡಿ ಪೈಪ್‌ಲೈನ್‌ಗಾಗಿ ಸುಂದರ ರಸ್ತೆಗಳನ್ನು ಅಗೆಯುತ್ತಿದ್ದು, ಅದಕ್ಕೆ ಸರಿಯಾಗಿ ತೇಪೆ ನಡೆದಿಲ್ಲ. ಕೆಲವು ಕಡೆ ವರ್ಷದಿಂದಲೂ ಹಾಗೇ ಬಿಟ್ಟಿದ್ದಾರೆ. ಕೆಲಸ ಪೂರ್ತಿಯಾಗದೆ ನೀರಿನ ಲಿಂಕ್ ಕೊಟ್ಟ ಕಾರಣ ಅನೇಕ ಕಡೆ ಸಮಸ್ಯೆಯಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕಾನಿಷ್ಕ್ ಅವರು ಇಲಾಖೆ ರಸ್ತೆ ಅಗೆಯುವಾಗ ಅನುಮತಿ ಪಡೆದಿಲ್ಲ. ಅಗೆದ ಬಳಿಕ ಮೊದಲಿನಂತೆ ಮಾಡಿಕೊಟ್ಟಿಲ್ಲ ಎಂದರು.
ನಗರಸಭೆ ಅಧ್ಯಕ್ಷರಾದ ಜೀವಂಧರ ಜೈನ್ ಮಾತನಾಡಿ3 ವರ್ಷದಿಂದ ನಮಗೆ ನೋಡಿ ನೋಡಿ, ಮೀಟಿಂಗ್ ಮಾಡಿ ಸಾಕಾಗಿದೆ. ರಸ್ತೆ, ಕಾಂಕ್ರೀಟ್ ಅಗೆದ ಸ್ಥಳದಲ್ಲಿ ಯಾವಾಗ ಪೂರ್ತಿ ಮಾಡುತ್ತಾರೆ ಎಂದು ಇಲ್ಲೇ ಬರೆದುಕೊಟ್ಟು ಹೋಗಲಿ. ಕೇವಲ ಪುಸ್ತಕದಲ್ಲಿ ಪರ್ಸಂಟೇಜ್ ಕಾಮಗಾರಿ ತೋರಿಸಿದರೆ ಸಾಲದು. 6 ತಿಂಗಳೂ ಕಳೆದರೂ ಮುಗಿಯುವ ಸೂಚನೆ ಕಾಣುತ್ತಿಲ್ಲ. ಇನ್ನು ಮುಂದೆ ಇವರ ಮೀಟಿಂಗ್ ಗೆ ನಾನು ಬರುವುದಿಲ್ಲ ಎಂದು ಅವರು ಎಂದರು.
ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್, ಜಲಸಿರಿ ಯೋಜನೆಯ ಹಿರಿಯ ಎಂಜಿನಿಯರ್ ಜಯರಾಮ್ ವೇದಿಕೆಯಲ್ಲಿದ್ದರು. ಕೆಯುಐಡಿಎಫ್‌ಸಿ ಅಧಿಕಾರಿಗಳು, ಗುತ್ತಿಗೆದಾರ ಪ್ರತಿನಿಧಿಗಳು, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.