ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ 64 ವರ್ಷಗಳ ಸುದೀರ್ಘ ಸೇವೆಯನ್ನು ನೀಡುತ್ತಿದೆ. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಣಿ ಶಾಖೆ ಆರಂಭಗೊಳ್ಳಲಿದ್ದು, ಜ.14ರಂದು ಲೋಕಾರ್ಪಣೆ ಕಾರ್ಯಕ್ರಮ ಬೆಳಗ್ಗೆ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ಹೇಳಿದರು.
ಕುಂಭಶ್ರೀ ಸಹಕಾರ ಭವನವನ್ನು ಸುಮಾರು 1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಘದ ಶಾಖಾ ಕಚೇರಿ ಹಾಗೂ ವಾಣಿಜ್ಯ ಕೊಠಡಿಗಳು ಇದರಲ್ಲಿವೆ. 1958 ನೇ ವರ್ಷದಲ್ಲಿ ಗ್ರಾಮೀಣ ಕುಂಬಾರಿಕೆ ಮತ್ತು ಗುಡಿ ಕೈಗಾರಿಕೆಯ ಅಭಿವೃದ್ಧಿಗಾಗಿ ಗ್ರಾಮೀಣ ಕುಂಬಾರ ಕುಶಲಕರ್ಮಿಗಳನ್ನು ಸದಸ್ಯರನ್ನಾಗಿಸಿ, ಪುತ್ತೂರು ತಾಲೂಕಿನ ಅಲಯಡ್ಕ ಮತ್ತು ಮಾಡೂರು ಗ್ರಾಮಗಳಿಗೆ ಕಾರ್ಯ ವ್ಯಾಪ್ತಿಯನ್ನು ಹೊಂದಿ, ಅಂದಿನ ಮದ್ರಾಸ್ ಸರಕಾರದಡಿಯಲ್ಲಿ ರಚಿತವಾದ ಸಹಕಾರ ಸಂಘವು ಇಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲಾ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ ಸದಸ್ಯರ ಅನುಕೂಲಕ್ಕಾಗಿ 13 ಕಡೆಗಳಲ್ಲಿ ಶಾಖೆಗಳಿಂದ ಬ್ಯಾಂಕಿAಗ್ ಸೇವೆ ಮತ್ತು ಮಾರಾಟ ಮಳಿಗೆಗಳನ್ನು ಹೊಂದಿದೆ. ಅರಿಯಡ್ಕ ಗ್ರಾಮದಲ್ಲಿ ಕುಂಬಾರಿಕೆ ಉತ್ಪಾದನಾ ತರಬೇತಿ ಕೇಂದ್ರದ ಮುಖಾಂತರ ತನ್ನ ಸದಸ್ಯರಿಗೆ ಸಹಾಯವನ್ನು ನೀಡುತ್ತಿರುವ ರಾಜ್ಯದ ಏಕೈಕ ಸಹಕಾರ ಸಂಘವಾಗಿರುತ್ತದೆ ಎಂದು ಗುರುವಾರ ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನಿಟ್ಟುಕೊಂಡು, ದ.ಕ ಜಿಲ್ಲೆಯಲ್ಲಿಯೇ ಗ್ರಾಮೀಣ ಗುಡಿ ಕೈಗಾರಿಕಾ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ಏಕೈಕ ಸಹಕಾರ ಸಂಘವಾಗಿರುತ್ತದೆ. ಸಹಕಾರ ಸಂಘದ ಕೇಂದ್ರ ಕಚೇರಿಯು ಪುತ್ತೂರಿನ ಹೃದಯ ಭಾಗದಲ್ಲಿ ಇದ್ದು, ಕೌಡಿಚ್ಚಾರು, ಬೆಳ್ಳಾರೆ, ಗುರುವಾಯನಕೆರೆ, ಮಾಣಿ, ವಿಟ್ಲ, ಕುಡ್ತಮುಗೇರು, ಉಪ್ಪಿನಂಗಡಿ, ಬಿ. ಸಿ. ರೋಡ್, ಮೆಲ್ಕಾರು, ಬೆಳ್ತಂಗಡಿ, ಸಿದ್ದಕಟ್ಟೆ, ಮುಡಿಪು, ಫರಂಗಿಪೇಟೆ ಕಡೆಗಳಲ್ಲಿ ಒಟ್ಟು 14 ಶಾಖೆಗಳ ಮುಖಾಂತರ ಸದಸ್ಯರಿಗೆ ಸೇವೆ ನೀಡುತ್ತಾ ಬಂದಿದೆ. ಪ್ರಸಕ್ತ 28,266 ಸದಸ್ಯ ಬಲವನ್ನು ಹೊಂದಿದೆ ಎಂದರು.
ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿರ್ದೇಶಕ ಮಂಜಪ್ಪ ಅವರು ಕುಂಭಶ್ರೀ ಸಹಕಾರ ಭವನ ಲೋಕಾರ್ಫಣೆ ಮಾಡಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಮಾರಾಟ ಮಳಿಗೆ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಗಣಕಯಂತ್ರವನ್ನು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ಯು.ಟಿ. ಖಾದರ್, ಭರತ್ ವೈ. ಶೆಟ್ಟಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ., ಎಸ್.ಸಿ.ಡಿ.ಸಿ.ಸಿ. ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ, ಉಪಾಧ್ಯಕ್ಷ ದಾಮೋದರ ವಿ., ನಿರ್ದೇಶಕ ಗಣೇಶ್ ಪಿ. ಉಪಸ್ಥಿತರಿದ್ದರು.