ವಿಜಯನಗರ (ಜ.13): ಕನಿಷ್ಠ 2 ಅಥವಾ 3 ದೊಡ್ಡ ತಲೆಗಳ ಸಾವು, ಸಾಧು ಸಂತರಿಗೆ ಸಮಸ್ಯೆ, ಒಂದು ಪಕ್ಷಕ್ಕೆ ಮಾತ್ರವೇ ರಾಜ್ಯದಲ್ಲಿ ಅಧಿಕಾರ ಇದು 2023ರ ವರ್ಷದ ಕುರಿತಾಗಿ ಕೋಡಿಮಠದ (Kodimata Sri) ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ನೀಡಿರುವ ಭವಿಷ್ಯವಾಗಿದೆ.
ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದು, ‘ಒಲೆ ಹೊತ್ತಿ ಉರಿದರೆ, ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು’ ಎಂದು ಮಾರ್ಮಿಕವಾಗಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. 2023 ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿ ಸಮಸ್ಯೆ ಎದುರಾಗಲಿದೆ.
ಸಾಧು ಸಂತರಿಗೆ ಸಮಸ್ಯೆ ಆಗುವ ಸೂಚನೆ ಕಂಡಿದೆ. ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ. ಎರಡ್ಮೂರು ದೊಡ್ಡ- ದೊಡ್ಡ ತಲೆಗಳು ಉರುಳುತ್ತವೆ. ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿದೆ. ಸಮ್ಮಿಶ್ರ ಸರ್ಕಾರ ಅಧಿಕಾರ ಮಾಡಲ್ಲ .
ಕೊರೊನಾ ಬಂದರೂ ಕೂಡ ಅಂತಹ ತೊಂದರೆಯಾಗಲ್ಲ. ಸಂಕ್ರಾಂತಿ- ಯುಗಾದಿಯ ಬಳಿಕ ಮತ್ತೆ ಮಳೆಯಾಗುತ್ತದೆ. ಕಳೆದ ಬಾರಿ ಹೇಗಾಯಿತೋ ಅದೇ ರೀತಿಯಲ್ಲಿ ಈ ಬಾರಿಯೂ ಆಗಲಿದೆ. ಸಂಕ್ರಾಂತಿಗೆ ಇನ್ನೂ ಎರಡು ದಿನಗಳಿವೆ, ಸಂಕ್ರಾಂತಿ ಭವಿಷ್ಯ, ಯುಗಾದಿ ಭವಿಷ್ಯ ಆ ಕಾಲಕ್ಕೆ ಹೇಳಬೇಕಿದೆ ಎಂದು ಹೇಳಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ನಿವಾಸದಲ್ಲಿ ಕೋಡಿಮಠದ ಶ್ರೀಗಳು ಪಾದಪೂಜೆ ಸ್ವೀಕರಿಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.