ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ದೈವಸ್ಥಾನವೊಂದರಲ್ಲಿ ನಡೆದ ಮಂತ್ರ ದೇವತೆಯ ಪ್ರತಿಷ್ಠೆಯ ಹಾಗೂ ಉಡುಪಿ ಸಮೀಪ ಜೂಮಾದಿ ಬಂಟ ದೈವದ ಪ್ರತಿಷ್ಠೆಯ ಸಂದರ್ಭ ಮಂಡಲದಲ್ಲಿ ಮಂತ್ರ ದೇವತೆಯ ಹಾಗೂ ಜೂಮಾಧಿಯ ಚಿತ್ರವನ್ನು ಪುರೋಹಿತರೊಬ್ಬರು ರಚಿಸಿದ್ದು ವಾರದ ಹಿಂದೆ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೈವಾರಾಧಕರ (Daivaradane) ಆಕ್ರೋಶಕ್ಕೆ ತುತ್ತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ – ವಿರೋಧದ ಚರ್ಚೆ ನಡೆಯುತ್ತಿದೆ.
ತುಳುನಾಡು ಎಂದೇ ಬಿಂಬಿತವಾಗಿರುವ ಕೇರಳದ ಚಂದ್ರಗಿರಿಯಿಂದ ಉಡುಪಿ ಜಿಲ್ಲೆಯ ಬಾರ್ಕೂರು ವರೆಗಿನ ವಿಶಾಲ ಭೂ ಪ್ರದೇಶದಲ್ಲಿ ದೈವಾರಾಧನೆಯೇ ಪ್ರಧಾನ ಎಂಬ ನಂಬಿಕೆ ಶತ ಶತಮಾನಗಳಿಂದಲೂ ಚಾಲ್ತಿಯಲ್ಲಿದೆ . ದೈವರಾಧನೆಗೂ ದೇವತಾ ಆರಾಧನೆಯ ಪದ್ದತಿಯ ಮಧ್ಯೆ ಅಜ ಗಜಾಂತರವಿದೆ. ದೈವರಾಧನೆಯಲ್ಲಿ ವೈದಿಕತೆಯನ್ನು ತುರುಕಲಾಗುತ್ತಿದೆ ಎಂಬ ವಿಚಾರದಲ್ಲಿ ಅಗಾಗ ಇತ್ತಂಡಗಳ ಮಧ್ಯೆ ಸಾರ್ವಜನಿಕ ವೇದಿಕೆಯಲ್ಲಿ, ಸಾಮಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಈ ಹಿಂದೆ ಸಂಪ್ರದಾಯಬದ್ದವಾಗಿ ಜಾನಪದೀಯವಾಗಿ ನಡೆಯುತ್ತಿದ್ದ ದೈವರಾಧನೆ ಈಗ ಅಧುನಿಕರಣಗೊಂಡಿದೆ ಮಾತ್ರವಲ್ಲದೇ ಅತಿಯಾದ ವೈದಿಕಕರಣದಿಂದ ಅದು ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಹಾಗೂ ಬೇಗುದಿ ದೈವಾರಾಧಕರದು. ಈ ಆಕ್ಷೇಪದ ಮುಂದುವರಿದ ಭಾಗ ಎಂಬಂತೇ ಮಂತ್ರ ದೇವತೆ ಹಾಗೂ ಜೂಮಾದಿ ಬಂಟ ಪ್ರತಿಷ್ಠೆಯ ಸಂದರ್ಭ ರಚಿಸಿದ ಮಂಡಲದಲ್ಲಿ ಮಂತ್ರ ದೇವತೆಯನ್ನು ಚಿತ್ರಿಸಿರುವುದಕ್ಕೆ ಅಪಸ್ವರ ಕೇಳಿ ಬಂದಿರುವುದು.



ವೈದಿಕರೊಬ್ಬರು ದೈವಸ್ತಾನವೊಂದರ ಪ್ರತಿಷ್ಟೆಯ ಸಂದರ್ಭ ಮಂಡಲದಲ್ಲಿ ಬಿಡಿಸಿದ ಮಂತ್ರ ದೇವತೆಯ ಚಿತ್ರವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ದೈವಾರಾಧಕ ಭಾಗ್ಯೇಶ್ ರೈಯವರು ಹಾಗೂ ಸ್ಟಾಪ್ ವೈದಿಕರಣ ಇನ್ ಭೂತರಾಧನೆ ಎಂಬ ಪೇಸ್ ಬುಕ್ ಪೇಜ್ ನಲ್ಲಿ ತೀವ್ರವಾಗಿ ವಿರೋಧಿಸಲಾಗಿದೆ.



“ದೈವಗಳ ಚಿತ್ರಗಳನ್ನು ಮಂಡಲದಲ್ಲಿ ಬರೆಯುವ ಪದ್ದತಿ ಯಾವ ವೇದ ಶಾಸ್ತ್ರಗಳಲ್ಲಿದೆ ಅಂತ ಗೊತ್ತಿಲ್ಲ. ಆರ್ಚಕರಾಗಿ ನಿಮ್ಮನ್ನು ಕರೆದಿರಬಹುದು ಅದು ಕರೆದವರ ಶ್ರದ್ದೆ ನಂಬಿಕೆಗೆ ಬಿಟ್ಟದ್ದು. ಆದರೇ ಅಲ್ಲಿ ಹೋದ ಮೇಲೆ ನಿಮ್ಮ ಮಾರ್ಕೇಟಿಂಗ್ ಗೆ ನಮ್ಮ ಮೂಲ ಪದ್ದತಿಯನ್ನು ದಾರಿ ತಪ್ಪಿಸಬೇಡಿ ( ನಿಜವಾಗಿ ವೈದಿಕ ಪದ್ದತಿಯಲ್ಲೂ ಕೂಡ ಮಂಡಲದಲ್ಲಿ ದೇವರ ಚಿತ್ರ ಬರೆಯುವ ಕ್ರಮವಿಲ್ಲ) “ ಎಂಬ ಪೋಸ್ಟ್ ಗಳನ್ನು ಮಂಡಲದ ಪೋಟೊವನ್ನು ಟ್ಯಾಗ್ ಮಾಡಿ ಹಾಕಿದ್ದಾರೆ.

ಈ ಪೋಸ್ಟ್ ಗಳಿಗೆ ನೂರಾರು ಮಂದಿ ಕಾಮೇಂಟ್ ಹಾಕಿ ಪರ ವಿರೊಧಧ ಚರ್ಚೆ ನಡೆಸಿದ್ದಾರೆ. ಇದಕ್ಕೆ ಸಂತೋಷ್ ಭಟ್ ಎಂಬವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಮಂಡಲ ರಚಿಸಿರುವುದನ್ನು ಸಮರ್ಥಿಸಿದ್ದಾರೆ. ಪ್ರಸ್ತುತ ಈ ವಿಷಯದ ಕುರಿತಾದ ಚರ್ಚೆ ಪೇಸ್ ಬುಕ್ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ಹಲವಾರು ಈ ಕುರಿತಾಗಿ ತಮ್ಮ ಅಭಿಪ್ರಾಯ, ಅನುಭವ , ಚಿಂತನೆಯನ್ನು ದಾಖಲಿಸಿದ್ದಾರೆ. ಈ ಮೂಲಕ ತುಳುನಾಡಿನ ಜಾನಪದ ಸಂಸ್ಕೃತಿಯೊಂದು ನವ ಮಾಧ್ಯಮದಲ್ಲಿ ಹೊಸ ಹೊಳಹು ಹೊಸ ವಿಚಾರಗಳ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಿದೆ . ಚರ್ಚೆಯ ಕೆಲ ಪ್ರಮುಖಾಂಶಗಳನ್ನು ಈ ಕೆಳಗೆ ನೀಡಲಾಗಿದ್ದು, ಹೆಚ್ಚಿನ ವಿವರಗಳು ಭಾಗ್ಯೇಶ್ ರೈಯವರ ಫೇಸ್ ಬುಕ್ ಟೈಮ್ ಲೈನ್ ನಲ್ಲಿ ನೋಡಬಹುದಾಗಿದೆ.

ದೈವ ಮತ್ತು ದೇವರನ್ನು ಸಂಪೂರ್ಣವಾಗಿ ಹಣ ಸಂಪಾದನೆ ಮತ್ತು ವೈಯಕ್ತಿಕ ಲಾಭಕ್ಕಾಗಿ ನಕಲಿ ಹಿಂದುತ್ವದ ಹಿಂದುವಾದಿಗಳು ಬಳಕೆ ಮಾಡಿಕೊಂಡು ಹಿಂದಿನ ನಮ್ಮ ಪೂರ್ವಜರ ಕಟ್ಟುಪಾಡುಗಳನ್ನು ಸರ್ವನಾಶ ಮಾಡುತ್ತಿದ್ದಾರೆ. ಈ ಬಗ್ಗೆ ನೈಜ ಹಿಂದೂ ಯುವಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಕಮೆಂಟ್ ಹಾಕಿದ್ದಾರೆ.
ಹಾಗೆ ನೋಡಿದರೆ ಸತ್ಯನಾರಾಯಣ ಪೂಜೆಯ ಮಂಟಪದಲ್ಲಿ ಫೋಟೋ ಇಡುವ ಪದ್ಧತಿಯೂ ಇಲ್ಲ ಶಾಸ್ತ್ರದಲ್ಲಿ. ಕಲಶವನ್ನು ಮಾತ್ರ ಇಡಬೇಕು.ಫೋಟೋ ಇಡೋದನ್ನೂ ಖಂಡಿಸಬೇಕಾಗುತ್ತದೆ.ಬರೀ ಕಲಶವನ್ನು ಮಾತ್ರ ಇಡಬೇಕು ಸತ್ಯನಾರಾಯಣ ಪೂಜೆಗೆ.ಮಾರ್ಕೆಟಿಂಗ್ ಅಂತ ಅಲ್ಲ ಸ್ವಲ್ಪ ಅಲಂಕಾರಪ್ರಿಯರಾದವರು ಭಕ್ತಿಯಿಟ್ಟುಕೊಂಡೇ ಕಲಾಪ್ರಕಾರಕ್ಕೆ ಪೂಜೆಯಲ್ಲಿ ಮನ್ನಣೆ ಕೊಡುವುದಕ್ಕೆ ಶುರು ಮಾಡಿರಬಹುದು ಅಷ್ಟೇ. ಇನ್ನು ತುಳುನಾಡಿನ ದೈವಗಳ ವಿಷಯದಲ್ಲಿ ಮಂಡಲ ಬಿಡಿ,ವೈದಿಕ ರೀತಿಯ ಆರಾಧನೆಯನ್ನೇ ಶಾಸ್ತ್ರಗಳು ಹೇಳಿಲ್ಲ.ಹಾಗಂತ ವೈದಿಕ ಪದ್ಧತಿಯಲ್ಲಿ ದೈವಗಳಿಗೆ ತಂಬಿಲಗಳು ರೂಢಿಯಲ್ಲಿ ಬಂದಿವೆ.ಭಕ್ತಿಪ್ರಧಾನವಾಗಿಯೇ ಅವು ಬಂದವಾಗಿದ್ದರೆ ಇಷ್ಟು ಕಠೋರ ಪದಗಳ ಖಂಡನೆ ಬೇಕೇ? ಗೊತ್ತಿಲ್ಲ, ಅವರವರ ಅಭಿಪ್ರಾಯ ಅವರವರಿಗೆ ಎಂದು ಶ್ರೀಕೃಷ್ಣ ಉಪಾಧ್ಯಯ ಕಾಮೇಂಟ್ ಹಾಕಿದ್ದಾರೆ.

ಮನೋವಿಕಾರ ತೋರಿಸಿದ್ದೀರಿ : ಸಂತೋಷ್ ಭಟ್
“ಈ ವಿಚಾರವಾಗಿ ವಿಮರ್ಶಾತ್ಮಕ ಚಿಂತನೆಯನ್ನು ನಿಮಗೆ ಮಂಡಿಸಬಹುದಿತ್ತು. ಉಚಿತ ಅನುಚಿತದ ಬಗ್ಗೆ ಸಾಮರಸ್ಯ ಪೂರ್ಣವಾದ ಚರ್ಚೆಯನ್ನು ಮಾಡಬಹುದಿತ್ತು. ಆದರೆ ಅದು ಬಿಟ್ಟು ಕೇವಲ ನಿಮ್ಮ ಮನೋವಿಕಾರವನ್ನು ತೋರಿಸಿದ್ದೀರಿ. ಈಗ ಇರುವ ಎಲ್ಲಾ ಕ್ಷೇತ್ರಗಳು ಕೂಡ ಮಾರ್ಕೆಟಿಂಗ್ ಮಟ್ಟಿಗೆ ಬಂದು ನಿಂತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಆದ್ದರಿಂದಲೇ ನಿಮಗೆ ವೈದಿಕ ಕ್ಷೇತ್ರವು ಮಾರ್ಕೆಟಿಂಗ್ ರೀತಿಯಲ್ಲಿ ಕಾಣುತ್ತಿರುವುದು. ಇದನ್ನು ಒಪ್ಪಿಕೊಳ್ಳದೆ ಇರಲು ಸಾಧ್ಯವಿಲ್ಲ ಬಿಡಿ. ಆದರೆ ದೇವತಾರಾಧನೆಯಲ್ಲಿ ವರ್ಣರಂಜಿತವಾದ ಮಂಡಲಗಳು ಬಂದು ಸುಮಾರು 50 ವರ್ಷಗಳೇ ಕಳೆದಿವೆ. ಇದಕ್ಕೆ ನಾಗರಾಧನೆಯೇ ಸಾಕ್ಷಿ. ದೇವರಾಗಲಿ ದೈವವಾಗಲಿ ಸಾನಿಧ್ಯ ಎಂಬುವುದು ಸತ್ಯವೇ ತಾನೆ. ಅದರ ಫೋಟೋ ತೆಗೆದು ಮನೆಯಲ್ಲಿ ಇಟ್ಟುಕೊಳ್ಳಬಹುದು ಎಂದಾಗಿದ್ದರೆ ಚಿತ್ರ ಬಿಡಿಸುವುದರಲ್ಲಿ ತಪ್ಪೇನು. ಈಗಿನ ಆಚಾರ ವಿಚಾರದಲ್ಲಿ, ಜೀವನ ನಡೆಸುವ ವ್ಯವಹಾರದಲ್ಲಿ, ಅಷ್ಟು ಮಾತ್ರವಲ್ಲದೆ ನಮ್ಮ ದಿನಚರಿಯಲ್ಲಿಯೂ ಕೂಡ ಇರುವ ತಪ್ಪನ್ನು ಸರಿಪಡಿಸುವ ದಾರಿಯಲ್ಲಿ ಮುಖ್ಯವಾಗಿ ಸಾಧಕ ಬಾಧಕಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಭಾಧಕವಿಲ್ಲದಿದ್ದರೆ ಕೆಲವೊಮ್ಮೆ ಅದನ್ನು ಒಪ್ಪಿಕೊಂಡು ಸಾಗಲೇ ಬೇಕಾಗುತ್ತದೆ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುವ ವಿಚಾರವಲ್ಲವೇ. ಇನ್ನು ಮುಖ್ಯ ವಿಷಯವಾಗಿ ನೋಡುವುದಾದರೆ ಆರಾಧನೆಯಲ್ಲಿ ಎಲ್ಲವನ್ನು ವೇದ ಶಾಸ್ತ್ರಗಳ ಮೂಲಕವಾಗಿ ಚಿಂತಿಸುವುದು ಸಾಧ್ಯವಿಲ್ಲ. ಪರಂಪರೆಯು ಕೂಡ ಕಾಣಸಿಗುತ್ತದೆ. ಮೂಲ ಪದ್ದತಿಯನ್ನು ದಾರಿತಪ್ಪಿಸುವುದು ಎಂದು ದೂರುತ್ತೀರಾದರೆ, ಮೂಲ ಪದ್ಧತಿಗಳಿಗೆ ಅದೆಷ್ಟು ಬೆಲೆ ಈಗ ಉಂಟು ಎನ್ನುವುದು ಕೂಡ ಚಿಂತಿಸಬೇಕಾಗುತ್ತದೆ… ಬಾಧಕವಿಲ್ಲದ ಬದಲಾವಣೆ ಎನ್ನುವುದೇ ಸನಾತನ ಧರ್ಮದ ಅತ್ಯಂತ ವಿಶೇಷ ಸಂಗತಿ ಎಂದು ಸಂತೋಷ್ ಭಟ್ ಸಮರ್ಥನೆ ಮಾಡಿದ್ದಾರೆ. ಇವರು ಈ ಹಿಂದೆ ನಟ , ನಿರ್ಮಾಪಕ ತಮ್ಮಣ್ಣ ಶೆಟ್ಟಿಯವರು ದೈವರಾಧನೆಯ ವೈದಿಕಕರಣ ಹಾಗೂ ಪ್ರಶ್ನೆ ಚಿಂತನೆಯ ಹೆಸರಿನಲ್ಲಿ ಹಣ ಸುಲಿಗೆ ಮಾಡುವುದನ್ನು ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಅದನ್ನು ಬಲವಾಗಿ ವಿರೋಧಿಸಿದವರು ಇದೇ ಸಂತೋಷ್ ಭಟ್ ಅವರು.
ಉಪಾಧ್ಯಾಯರ ಹೇಳಿಕೆಗೆ ಧ್ವನಿಗೂಡಿಸಿದ ಸಂತೋಷ್ ಭಟ್, ಭಾಗ್ಯೇಶ್ ರೈಯವರು ವಿಮರ್ಶಿಸದೆ, ವಿಚಾರಿಸದೆ,ಅವರಿಗೆ ಕಂಡದ್ದು ಹೇಳಿದ್ದಾರೆ. ಶಾಸ್ತ್ರದಲ್ಲಿ ಇಲ್ಲ ಎಂದಿದ್ದಾರೆ, ಮಾರ್ಕೆಟಿಂಗ್ ಎನ್ನುವ ಶಬ್ದ ಪ್ರಯೋಗಿಸಿದ್ದಾರೆ, ಗುರುತಿಸಲ್ಪಡುವ ಸ್ವಯಂ ವ್ಯಕ್ತಿತ್ವ ಉಳ್ಳವರಾಗಿಯೂ ಕೂಡ ಮತ್ತೊಬ್ಬರಿಗೆ tag ಕೂಡ ಮಾಡಿದ್ದಾರೆ. ಈ ಕಾರಣದಿಂದ, ವಿದ್ಯಾ ಕ್ಷೇತ್ರದಲ್ಲಿ ಹೊಸ ಚಾಪನ್ನು ಮೂಡಿಸಿರುರುವ ಸರಳ ಸಜ್ಜನಿಕೆಯ ವ್ಯಕ್ತಿಯಾದ ಇವರಲ್ಲಿ ನನಗೆ ಮನೋವಿಕಾರ ಕಂಡಿದ್ದು. ಮನೋವಿಕಾರ ಎನ್ನುವುದು ಯಾರಿಗೂ ಕೂಡ ಶಾಶ್ವತ ಭಾವವಲ್ಲ ಬಿಡಿ” ಎಂದು ಧೈವರಾಧನೆಯಲ್ಲಿ ಮಂಡಲವನ್ನು ಸಮರ್ಥಿಸಿದ್ದಾರೆ.

ಮೂಲ ಧಾರ್ಮಿಕ ನಂಬಿಕೆಯನ್ನು ಕೆಡಿಸಿ ಮೂಲ ಆಚರಣೆಗಳನ್ನು ವಿಕೃತ ಗೊಳಿಸಿ ಒಂದು ಸಂಸ್ಕೃತಿಯನ್ನೇ ನಾಶಗೊಳಿಸುವ ಪರಿ ಇದು: ಶಶಿಕಾಂತ್ ಶೆಟ್ಟಿ ಕಟಪಾಡಿ
ಯಾವುದೇ ಒಂದು ಸಮುದಾಯವನ್ನು ಅಥವಾ ಒಂದು ನಿರ್ದಿಷ್ಟ ಸಾಂಸ್ಕೃತಿಕ ಸಮಾಜವನ್ನು ನಾಶ ಪಡಿಸಲು ಯಾವುದೇ ಶಸ್ತ್ರ ಅಥವಾ ಅಸ್ತ್ರಗಳ ಅಗತ್ಯವೇ ಇಲ್ಲ . ಕೇವಲ ಆ ಸಾಂಸ್ಕೃತಿಕ ಸಮಾಜದ ಮೂಲ ಧಾರ್ಮಿಕ ನಂಬಿಕೆಯನ್ನು ಕಲುಷಿತ ಗೊಳಿಸಿದ್ದಾರೆ ಸಾಕು . ಧಾರ್ಮಿಕ ನಂಬಿಕೆಯೊಂದಿಗೆ ಧಾರ್ಮಿಕ ಆಚರಣೆಗಳು ಕೂಡಾ ವಿಕೃತಗೊಂಡು ವಿರೂಪಗೊಳ್ಳುತ್ತಾ ನಿಧಾನವಾಗಿ ಆ ಸಂಸ್ಕೃತಿ ಹೇಳಿ ಹೆಸರಿಲ್ಲದಂತೆ ನಾಶವಾಗುತ್ತದೆ ಎಂದು ಎಂದು ಖ್ಯಾತ ಬರಹಗಾರ, ದೈವರಾಧಕ ಶಶಿಕಾಂತ್ ಶೆಟ್ಟಿ ಕಟಪಾಡಿ ಮಂಡಲ ಸಂಸ್ಕೃತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಪ್ರಸಕ್ತ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂಲ ಧಾರ್ಮಿಕ ನಂಬಿಕೆಗಳು ಕೂಡಾ ವೈದಿಕರ ಕಪಿಮುಷ್ಠಿಯಲ್ಲಿ ಸಿಲುಕಿ ವಿಕೃತಗೊಳ್ಳುತ್ತಾ ನಿಧಾನವಾಗಿ ಅವಸಾನದ ಅಂಚಿಗೆ ಯಾವ ರೀತಿ ತಳ್ಳಲ್ಪಡುತ್ತಿದೆ ಎಂಬುದಕ್ಕೆ ಒಂದು ಜೀವಂತ ನಿದರ್ಶನ ಇದು.
“ತುಳುನಾಡು ಪರಶುರಾಮ ಸೃಷ್ಟಿ” ಎಂಬ ವೈದಿಕ ಕಟ್ಟು ಕಥೆಗೆ ತುಳುನಾಡಿನ ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ , ನಾಗಾರಾಧನೆ ಹಾಗೂ ದೈವಾರಾಧನೆಗಳು ಸಂಪೂರ್ಣವಾಗಿ ನಿರ್ಭರವಾಗಿರುವ ತುಳುವರ ” ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂಬ ಮೂಲ ಧಾರ್ಮಿಕ ನಂಬಿಕೆ ಯಾವ ರೀತಿ ಬಲಿಯಾಗುತ್ತಿದೆ ಎಂಬುದಕ್ಕೆ ಕಳೆದ ಸುಮಾರು ನಾಲ್ಕೈದು ದಶಕಗಳಿಂದ ತುಳುನಾಡಿನಾದ್ಯಂತ ಸಾವಿರಾರು ತೌಳವ ನಾಗಬನಗಳು “ವೈದಿಕ ನಾಗಾಲಯ” ಗಳಾಗಿ ಬದಲಾಗಿರುವುದೇ ಸಾಕ್ಷಿ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಪರಂಪರೆಗೆ ಭಂಗ ಅನವಶ್ಯಕವಾಗಿ ತರಬಾರದು,ತುರುಕಬಾರದು.ಪ್ರತಿಯೊಂದು ಪರಂಪರೆಯೂ ಅನನ್ಯವಾದದ್ದು,ವಿಶಿಷ್ಟವಾದದ್ದು. ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವೂ ಇದೆ. ಪರಂಪರೆಯನ್ನು ಅನುಸರಿಸುವ ಪಂಗಡಗಳಲ್ಲಿ ಈ ಬಗ್ಗೆ ಜಾಗೃತಿ ಇರಬೇಕು,ಮೂಡಿಸ ಬೇಕು.ಅನವಶ್ಯಕ ಬದಲಾವಣೆಗಳಿಗೆ ಬೇಡಿಕೆ ಮಂಡಿಸುವಂತಾಗಬಾರದು,ಒತ್ತಾಯಕ್ಕೆ ಬಗ್ಗುವಂತಿರಬಾರದು ಎಂದು ರಮೇಶ್ ಭಟ್ ದೇಲಂಪಾಡಿ ಮಂಡಲ ವಿಚಾರವಾಗಿ ಕಾಮೇಂಟ್ ಮಾಡಿದ್ದಾರೆ.

ಖ್ಯಾತ ಸಾಹಿತಿ ಅರವಿಂದ್ ಚೊಕ್ಕಾಡಿ ಭಾಗ್ಯೇಶ್ ರೈಯವರ ವಿಚಾರ ಸರಿ ಇದೆ ಎಂದಿದ್ದು. ಈ ಕೆಲವು ಜನ ಮಾಡುವ ಅಸಂಬದ್ಧಗಳಿಗೆ ಎಲ್ಲ ಬ್ರಾಹ್ಮಣರೂ ತಲೆಕೊಡಬೇಕಾದ ಪರಿಸ್ಥಿತಿ. ನೀವು ಹೇಳುವ ವಿಷಯ ಅಬ್ರಾಹ್ಮಣರಿಗಿಂತ ಹೆಚ್ಚಾಗಿ ಬ್ರಾಹ್ಮಣರ ಹಿತದೃಷ್ಟಿಯ ಪರವಾಗಿದೆ. ನಿಮಗೆ ನನ್ನ ಬೆಂಬಲವಿದೆ ಎಂದಿದ್ದಾರೆ.