ಕೊಚ್ಚಿ, ಜ 12 : ಶಬರಿಮಲೆ (Sabarimala) ದೇವಸ್ಥಾನದ ಅರವಣ ಪ್ರಸಾದ ತಯಾರಿಕೆ ಮತ್ತು ಮಾರಾಟಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಸಾದ ತಯಾರಿಕೆಗೆ ಬೇಕಾಗುವ ಏಲಕ್ಕಿಯಲ್ಲಿ ಅತಿಯಾದ ಕೀಟನಾಶಕ ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದೆ.
ಪ್ರಸಾದ ತಯಾರಿಕೆಗೆ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಪ್ರಸಾದ ಮಾರಾಟ ಮಾಡದಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿದೆ.
ಕಂಪೆನಿಯೊಂದರ ಅರ್ಜಿ ಹಿನ್ನೆಲೆಯಲ್ಲಿ ಏಲಕ್ಕಿಯನ್ನು ಪರೀಕ್ಷೆಗೊಳಪಡಿಸುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಕೊಚ್ಚಿಯಲ್ಲಿರುವ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಲ್ಯಾಬ್ ನಲ್ಲಿ ಅರವಣ ಪಾಯಸಂ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಬಳಸಿರುವುದು ಗೊತ್ತಾಗಿದೆ.
ಬಳಿಕ ಈ ಪರೀಕ್ಷಾ ಮಾದರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ನ್ಯಾಯಾಲಯವು ಪ್ರಸಾದ ವಿತರಣೆಗೆ ತಡೆ ನೀಡಿದೆ.
ಇನ್ನು ದೇವಸ್ವಂ ಮಂಡಳಿ ಪ್ರತಿಕ್ರಿಯಿಸಿ, ಪ್ರಸಾದ ತಯಾರಿಕೆ ಯಂತ್ರ ಸ್ಛಚ್ಚಗೊಳಿಸಿ ಏಲಕ್ಕಿ ರಹಿತವಾಗಿ ಪಾಯಸಂ ತಯಾರಿಸಿ ವಿತರಿಸುತ್ತೇವೆ. ಸಾವಯವ ಏಲಕ್ಕಿ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದೆ.