ಉಳ್ಳಾಲ: ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ಕ್ಯಾನ್ಸರ್ ವಿಭಾಗದ ತಜ್ಞ ವೈದ್ಯರಾದ ಗುರುಪುರ ಪರಾರಿ ದೋಟ ಕೊಳಕೆಬೈಲು ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿರುವ ಡಾ. ಜಯರಾಮ ಶೆಟ್ಟಿ (53) ಹೃದಯಾಘಾತದಿಂದ (Heart Attack) ಜ.11ರಂದು ಬುಧವಾರ ನಿಧನ ಹೊಂದಿದರು.
ಮಂಗಳೂರಿನ ಕೆ.ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಉನ್ನತ ಶಿಕ್ಷಣ ಪಡೆದ ಬಳಿಕ ಸುಮಾರು ಒಂದು ದಶಕಗಳಿಗಿಂತ ಹೆಚ್ಚು ಕಾಲ ರೇಡಿಯೇಷನ್ ಆಂಕಾಲಜಿ ಚಿಕಿತ್ಸಾ ವಿಭಾಗದಲ್ಲಿ ಸೇವೆ ಸಲ್ಲಿಸಿ ಕಳೆದ 11 ವರುಷಗಳಿಂದ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ರೇಡಿಯೇಷನ್ ಅಂಕೋಲಾಜಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಬುಧವಾರ ಸಂಜೆಯವರೆಗೆ ಕಾರ್ಯ ನಿರ್ವಹಿಸಿ ಮನೆಗೆ ತೆರಳಿ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ.ಬಡವರಿಗೆ ಉಚಿತ ವೈದ್ಯಕೀಯ ಸೇವೆ , ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕ ಜೊತೆಯೂ ಅನ್ಯೋನ್ಯತೆಯಿಂದ ಇದ್ದ ಜಯರಾಮ್ ಶೆಟ್ಟಿಯವರ ಅಕಾಲಿಕ ಮರಣಕ್ಕೆ ಕೆಎಸ್ ಹೆಗ್ಡೆ ಸಂಸ್ಥೆ ಸಿಬ್ಬಂದಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ಅವರು ಅನೇಕ ಬಡ ರೋಗಿಗಳ ಚಿಕಿತ್ಸೆಗೆ ಸಹಾಯಹಸ್ತ ನೀಡುತ್ತಿದ್ದರು.
ಡಾ. ಜಯರಾಮ ಶೆಟ್ಟಿ ನಿಧನಕ್ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಆಡಳಿತ ಮಂಡಳಿ, ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಪತ್ನಿ ಜ್ಯೋತಿ, ಪುತ್ರಿ ವೀಕ್ಷಣಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.