Shabarimale ಕೊಚ್ಚಿ: ಶಬರಿಮಲೆ ಯಾತ್ರಾರ್ಥಿಗಳು ಸಿನಿಮಾ ನಟರು, ರಾಜಕಾರಣಿಗಳ ಪೋಸ್ಟರ್ ಇತ್ಯಾದಿ ಸಿಲೆಬ್ರಿಟಿಗಳ ಚಿತ್ರದೊಂದಿಗೆ 18ನೇ ಮೆಟ್ಟಿಲು ಏರುವುದನ್ನು ನಿಷೇಧಿಸಿ ಕೇರಳ ಹೈಕೋರ್ಟು ಆದೇಶಿಸಿದೆ. ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಶಿಸ್ತು ಪಾಲನಯಲ್ಲಿ ಲೋಪವಾಗದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಗಮನಿಸಬೇಕು. ದೇವಾಲಯದ ನಿಯಮಿತ ವಿಧಾನಗಳು ಮತ್ತು ಆಚರಣೆಗಳನ್ನು ಅನುಸರಿಸಿ ಭಕ್ತರು ದರ್ಶನಕ್ಕೆ ಬದ್ಧರಾಗಿರುತ್ತಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇತ್ತೀಚೆಗೆ, ತಮಿಳು ನಟ ಅಜಿತ್ ಅವರ “ತುನಿವ್” ಚಿತ್ರದ ಪೋಸ್ಟರ್ ಮತ್ತು ಕನ್ನಡ ನಟ ದಿ.ಪುನೀತ್ ರಾಜ್‌ಕುಮಾರ್ ಅವರ ಚಿತ್ರಗಳ ಪೋಸ್ಟರ್‌ಗಳನ್ನು ಹಿಡಿದ ಭಕ್ತರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.ಈ ಚಿತ್ರಗಳನ್ನು ಅಯ್ಯಪ್ಪ ಭಕ್ತರೊಬ್ಬರು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಕಳುಹಿಸಿದ ಆಧಾರದ ಮೇಲೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.
ಅಯ್ಯಪ್ಪನನ್ನು ಗೌರವಿಸುವ ಭಕ್ತರು ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸಿ ದರ್ಶನ ಪಡೆಯಬೇಕು. ಇದಕ್ಕೆ ವ್ಯತಿರಿಕ್ತವಾಗಿ ಚಿತ್ರಗಳು ಮತ್ತು ಪೋಸ್ಟರ್‌ಗಳೊಂದಿಗೆ ಬರುವ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಮತ್ತು ಪಿ.ಜಿ.ಅಜಿತ್ ಕುಮಾರ್ ಅವರನ್ನೊಳಗೊಂಡ ದೇವಸ್ವಂ ವಿಭಾಗೀಯ ನ್ಯಾಯ ಪೀಠ ಸೂಚಿಸಿದೆ.

ಪ್ರತಿದಿನ 80ಸಾವಿರದಿಂದ 90 ಸಾವಿರ ಭಕ್ತರು ದರ್ಶನಕ್ಕೆ ಬರುವ ಸಂದರ್ಭದಲ್ಲಿ ನಿಮಿಷಕ್ಕೆ 70ರಿಂದ 80 ಭಕ್ತರನ್ನು ಹದಿನೆಂಟು ಮೆಟ್ಟಿಲು ದಾಟಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಧಾರ್ಮಿಕ ವಿಧಿವಿಧಾನಗಳು ಎಲ್ಲ ಭಕ್ತರಿಗೂ ಸಮಾನಾಗಿ ಅನ್ವಯವಾಗುವುದರಿಂದ ಇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಕೋರ್ಟ್ ಸೂಚನೆಗೆ ದೇವಸ್ವಂ ಮಂಡಳಿ ಒಪ್ಪಿಗೆ ಸೂಚಿಸಿದೆ.
ಹದಿನೆಂಟು ಮೆಟ್ಟಿಲ ಮುಂದೆ ಡೋಲು ಮುಂತಾದ ವಾದ್ಯಗಳನ್ನು ಪ್ರದರ್ಶಿಸಲು ಭಕ್ತರಿಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಖ್ಯಾತ ಡ್ರಮ್ಮರ್ ಶಿವಮಣಿ ಶಬರಿಮಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಡೋಲು ಬಾರಿಸಿದ್ದು, ಇದನ್ನು ಆಧರಿಸಿ ನ್ಯಾಯಾಲಯ ಆದೇಶ ನೀಡಿದೆ. ಘಟನೆಗೆ ಸಂಬಂಧಿಸಿ ಹದಿನೆಂಟು ಮೆಟ್ಟಿಲಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ದೇವಸ್ವಂ ಮಂಡಳಿಯ ವಕೀಲರು ತಿಳಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ದೇವಸ್ವಂ ಬೋರ್ಡ್ ಗೆ ನೆನಪಿಸಿದೆ.