ಪುತ್ತೂರು: ಬಾಡಿಗೆ ಮನೆಯಿಂದ ಸುಮಾರು ರೂ. 75 ಸಾವಿರ ಮೌಲ್ಯದ ವಿವಿಧ ವಸ್ತುಗಳನ್ನು ಕಳವುಗೈದ ಇಬ್ಬರು ಆರೋಪಿಗಳನ್ನು ಬಂದಿಸುವಲ್ಲಿ ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪುತ್ತೂರು ತಾಲೂಕಿನ ಕೂರ್ನಡ್ಕ ನಿವಾಸಿ ಮಹಮ್ಮದ್ ಮುಸ್ತಫ್ಪ (28) ಹಾಗೂ ಕಡಬ ತಾಲೂಕಿನ ಸವಣೂರು ಚಾಪಳ್ಳ ನಿವಾಸಿ ಶಮೀರ್ (24) ಬಂಧಿತರು.
ಎ.ಪಿ.ಎಂ.ಸಿ ರಸ್ತೆಯ ಸೂತ್ರಬೆಟ್ಟು ಬಾಡಿಗೆ ಮನೆ ನಿವಾಸಿ ವಿವೇಕಾನಂದ ಯಾನೆ ಸತ್ಯನಾರಾಯಣ ಎಂಬವರು ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ ಜ 4 ರಿಂದ 7 ತಾರೀಕಿನ ಮಧ್ಯೆ ಕಳ್ಳತನವಾಗಿತ್ತು. ಗೋಪಿನಾಥ್ ಮತ್ತು ವಿವೇಕಾನಂದ ಯಾನೆ ಸತ್ಯನಾರಾಯಣ ಅವರು ಸಹೋದರರಾಗಿದ್ದು, ಸೂತ್ರಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಇವರು ಮೂಲತ : ತಮಿಳು ನಾಡಿನ ಮದುರೈ ನವರು.
ಬೈಕ್ ಬಾಕ್ಸ್ ನಲ್ಲಿತ್ತು ಕೀ
ತಾಯಿಯ ಅಸೌಖ್ಯತೆ ಹಿನ್ನಲೆಯಲ್ಲಿ ಸಹೋದರರಿಬ್ಬರು ಜ 4 ರಂದು ತಮ್ಮ ಬಾಡಿಗೆ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದರು. ಹೀಗೆ ತೆರಳುವ ವೇಳೆ ತಮ್ಮ ಬಳಿಯಿದ್ದ ಎರಡು ಜತೆ ಕೀಗಳ ಪೈಕಿ ಒಂದು ಜೊತೆಯನ್ನು ಮನೆಯ ಮುಂದೆ ನಿಲ್ಲಿಸಿದ ಬೈಕ್‌ನ ಬಾಕ್ಸ್‌ನೊಳಗೆ ಇರಿಸಿ ತೆರಳಿದ್ದರು. ಕಳ್ಳರು ಬೈಕ್‌ನ ಬಾಕ್ಸ್‌ನಲ್ಲಿದ್ದ ಕೀಯ ಮೂಲಕ ಮನೆಯ ಬೀಗ ತೆರೆದು ಸೊತ್ತುಗಳನ್ನು ಕಳವು ಮಾಡಿದ್ದರು.
ಜ.8 ರಂದು ಗೋಪಿನಾಥ್ ಮತ್ತು ವಿವೇಕಾನಂದ ಯಾನೆ ಸತ್ಯನಾರಾಯಣರವರು ವಾಪಸ್ಸು ಪುತ್ತೂರಿಗೆ ಬಂದಿದ್ದು ಬಾಡಿಗೆ ಮನೆಯ ಬೀಗ ಯಥಾ ಸ್ಥಿತಿಯಲ್ಲಿದ್ದು, ಒಳಗಡೆ ನೋಡಿದಾಗ ಚಾವಡಿ ಮತ್ತು ಬೆಡ್ ರೂಮ್ ನ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿಯಾಗಿತ್ತು. ಪರಿಶೀಲಿಸಿದಾಗ ಮನೆಯಲ್ಲಿದ್ದ 18 ಸಾವಿರ ನಗದು, ಟಿವಿ, ಯುಪಿಎಸ್ ಬ್ಯಾಟರಿ, ಇಸ್ತ್ರಿಪೆಟ್ಟಿಗೆ ,5 ಮೊಬೈಲ್, ಲೈಟ್, ಬ್ಲೂಟೂತ್ ಸ್ಪೀಕರ್, 14 ಅಂಗಿ, 4 ಜೀನ್ಸ್ ಪ್ಯಾಂಟ್, ವಾಚು ಕಾಣೆಯಾಗಿತ್ತು.
ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್ ನ ಬಾಕ್ಸ್ ತೆರೆದುಕೊಂಡಿದ್ದು ಅದರಲ್ಲಿದ್ದ ಮನೆಯ ಕೀ ಅದರಲ್ಲೆ ಇತ್ತಾದರೂ, ಬೈಕ್ ಪೆಟ್ರೋಲ್ ಟ್ಯಾಂಕ್ ಮುಚ್ಚಳ ತೆರೆದುಕೊಂಡಿತ್ತು. ಇದನ್ನು ಗಮನಿಸಿದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯ ಕಳ್ಳರು ನುಗ್ಗಿರುವುದು ಖಾತ್ರಿಯಾಗಿ ಪೊಲೀಸರಿಗೆ ದೂರು ನೀಡಿದ್ದರು.
ಕಳವಾದ ದಿನ ಬಾಡಿಗೆ ಮನೆಯ ಅಸುಪಾಸಿನಲ್ಲಿ ಅನುಮಾನಸ್ಪದಾವಗಿ ಇಬ್ಬರು ತಿರುಗಾಡುತ್ತಿದ್ದನ್ನು ನೋಡಿದ್ದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಇದೇ ಅಧಾರದಲ್ಲಿ ತನಿಖೆ ಚುರುಕುಗೊಳಿಸಿದ ಪೊಳೀಸರು ಆರೋಪಿಗಳನ್ನು ಜ 11 ರಂದು ಬಂಧಿಸಿದ್ದಾರೆ