ಉಡುಪಿ: ಮಕ್ಕಳಿಗೆ ಸಾತ್ವಿಕ ಆಹಾರ ಕೊಡಿ ಎಂದಿದ್ದೇನೆ. ಪ್ರಾಣಿವಧೆಯನ್ನು ಮಕ್ಕಳ ಎದುರಲ್ಲಿ ಮಾಡುವುದರಿಂದ ಮಕ್ಕಳ ಮನಸ್ಸು ವಿಕಾರವಾಗುವ ಸಾಧ್ಯತೆ ಇದೆ. ಹಾಗಾಗಿ ಕೇವಲ ಮಾಂಸದ ಅಂಗಡಿ ಮಾತ್ರವಲ್ಲ. ಮನೆಯಲ್ಲೂ ಈ ನಿಯಮ ಪಾಲಿಸಿ ಎಂದು ಹೇಳಿದ್ದೇನೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿ (Pejavara Sri) ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.
ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯ ಇರಬಾರದು. ಮಕ್ಕಳ ದೇಶ, ಸಮಾಜದ ಭವಿಷ್ಯ ಎಂಬುದನ್ನು ಯಾರೂ ಮರೆಯಬಾರದು. ಹೀಗಾಗಿ ಮಕ್ಕಳ ಎದುರಿನಲ್ಲಿ ಪ್ರಾಣಿವಧೆ ಮಾಡುವುದು , ಮಾಂಸ ನೇತಾಡಿಸುವುದು ಸರಿಯಲ್ಲ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರ ಕಡೆಯಿಂದಲೇ ವಿರೋಧ ಚರ್ಚೆ ಆಗಿದೆ. ಕೆಲವರು ಮಠದ ಪಂಕ್ತಿ ಭೇದ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ ಎಂದು ತಾವು ನೀಡಿದ್ದ ಸಲಹೆಯನ್ನು ಪುನರುಚ್ಚಿಸಿದರು. ಮಾಂಸವನ್ನು ವಧೆ ಮಾಡಿ ತೂಗು ಹಾಕಬೇಡಿ. ಮಕ್ಕಳ ಮುಂದೆ ಮಾಂಸ ನೇತು ಹಾಕಬಾರದು. ಮಕ್ಕಳ ಮುಂದೆ ಪ್ರಾಣಿ ವಧೆ ಮಾಡಬಾರದು.
ಕೇವಲ ಮಾಂಸದ ಅಂಗಡಿ ಮಾತ್ರವಲ್ಲ. ಮನೆಯಲ್ಲೂ ಈ ನಿಯಮ ಪಾಲಿಸಿ. ದಯವಿಟ್ಟು ಮಕ್ಕಳ ಎದುರಲ್ಲಿ ಪ್ರಾಣಿವಧೆ ಮಾಡಬೇಡಿ. ರಕ್ತ ಚಿಮ್ಮುವ, ಜೋತಾಡುವ, ಸ್ಥಿತಿಯಲ್ಲಿ ಪ್ರಾಣಿಗಳನ್ನು ಮಾರ್ಗದ ಬದಿಯಲ್ಲಿ ನೇತು ಹಾಕುವುದು ಸರಿಯಲ್ಲ.
ಮಾಂಸದ ಅಂಗಡಿಗಳಲ್ಲಿ ನೇತು ಹಾಕುವ ಪದ್ಧತಿ ನಿಲ್ಲಿಸಬೇಕು ಅಥವಾ ಮರೆ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿರುವ ಬಗ್ಗೆ ತಿಳಿಸಿದರು. ಮಕ್ಕಳು ಸಾತ್ವಿಕ ಆಹಾರ ತಿನ್ನಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರಿಂದಲೇ ವಿರೋಧ : ಬಲಪಂಥೀಯ ಪರವಾಗಿರುವ ಅಜಿತ್ ಶೆಟ್ಟಿ ಕೆರಾಡಿ , ವಸಂತ ಗಿಳಿಯಾರು ಸಹಿತ ಹಲವರು ಸ್ವಾಮಿಜೀ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.



ಶಿಕ್ಷಣದ ಮೌಲ್ಯವರ್ಧನೆ ಸಹಿತ ವಿವಿಧ ವಿಷಯಗಳ ಕುರಿತು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಿದ್ದ ಧಾರ್ಮಿಕ ಮುಖಂಡರ ದುಂಡು ಮೇಜಿನ ಸಭೆಯ ಕುರಿತು ಬುಧವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಸಮಾಜ ಬಯಸದ್ದನ್ನು ಮಕ್ಕಳಿಂದ ದೂರ ಇಡಬೇಕು ಎಂದರು.
ಕ್ರೌರ್ಯ ಮಕ್ಕಳ ಕಣ್ಣಿಗೆ ಯಾವತ್ತು ಬೀಳಬಾರದು. ಮಾಂಸಾಹಾರ ಮಾಡುವುದು ತಪ್ಪಲ್ಲ. ಆದರೆ, ಮಕ್ಕಳ ಕಣ್ಮುಂದೆ ಪ್ರಾಣಿ ವಧೆ ಮಾಡುವುದು ಸರಿಯಲ್ಲ. ಪ್ರಾಣಿ ಚೀರಾಡುವುದು, ನರಳಾಡುವುದನ್ನು ಮಕ್ಕಳಿಗೆ ತೋರಿಸಬಾರದು, ಮಾಂಸ ನೇತಾಡಿಸಬಾರದು ಎಂದರು. ಚೀರಾಟ, ದುಃಖ, ಆಕ್ರಂದನ ಮಕ್ಕಳ ಮೇಲೆ ತುಂಬ ದುಷ್ಪರಿಣಾಮ ಬೀರುತ್ತದೆ. ಮಾಂಸದಂಗಡಿ ಇಡುವುದೂ ತಪ್ಪಲ್ಲ, ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ, ಎಲ್ಲರ ಮುಂದೆ ಮಾಂಸ ನೇತು ಹಾಕುವುದು ಸರಿಯಲ್ಲ. ಮಾಂಸವನ್ನು ನೇತು ಹಾಕದೆ ಒಳಗೆ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಯಾವುದು ಬೇಕಾದರೂ ನೀಡಿ. ಆದರೆ ಅದು ಸಾತ್ವಿಕ ಆಹಾರವಾಗಿದ್ದರೆ ಒಳ್ಳೆಯದು. ಆಹಾರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆಯುರ್ವೇದ ಶಾಸ್ತ್ರ ಇದನ್ನೇ ಹೇಳುತ್ತದೆ. ಮನಸ್ಸು ತಾಮಸ ಆಗುವ ಯಾವುದೇ ಆಹಾರ ಮಕ್ಕಳಿಗೆ ಕೊಡುವುದು ಸರಿಯಲ್ಲ. ಮಕ್ಕಳು ಯಾವ ಆಹಾರವನ್ನು ತಿನ್ನಬೇಕೆಂದು ಹಿರಿಯರು ನಿರ್ಧರಿಸಬೇಕು. ಹಿರಿಯರು ಯಾವ ತೀರ್ಮಾನ ಮಾಡಿದರೂ ಅದಕ್ಕೆ ನಮ್ಮ ವಿರೋಧ ಇಲ್ಲ.
ಮಕ್ಕಳ ಎದುರಲ್ಲಿ ಪ್ರಾಣಿ ವಧೆ , ಮಾಂಸ ನೇತು ಹಾಕಿದರೆ ಮನಸ್ಸಿಗೆ ಘಾಸಿ ಆಗ್ತದೆ : ಈರುಳ್ಳಿ, ಬೆಳ್ಳುಳ್ಳಿ ಉದ್ರೇಕಕಾರಿ- ಕಾಫಿ,ಟೀ ಉದ್ವೇಗಕಾರಿ
ಪಂಚರತ್ನ ಕಥೆಗಳ ರೀತಿ ವಾರದಲ್ಲಿ ಒಂದು ತರಗತಿ ಮಕ್ಕಳಿಗೆ ಕಾರ್ಟೂನ್ ತೋರಿಸಬೇಕು : ಪೇಜಾವರ ಶ್ರೀ
ಸಮಾಜದಲ್ಲಿ ಕ್ರೌರ್ಯ, ಹಿಂಸೆ ಬೇಡವಾದರೆ ಅದಕ್ಕೆ ಅನುಗುಣವಾದ ಆಹಾರ ನೀಡಬೇಕು. ಕ್ರೌರ್ಯ ಹಿಂಸೆ ಮಕ್ಕಳ ಮೇಲೆ ಪರಿಣಾಮ ಬೀರದ ಹಾಗೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.
ಶಾಲೆಯಲ್ಲಿ ಪುರಾಣ ಪಾತ್ರಗಳ ಮೂಲಕ ಮಕ್ಕಳಲ್ಲಿ ಮೌಲ್ಯ ತುಂಬಬೇಕು. ಮಕ್ಕಳಲ್ಲಿ ಆದರ್ಶ ತುಂಬುವುದು ಬಹು ಮುಖ್ಯ. ರಾಮಾಯಣ, ಮಹಾಭಾರತದ ಪ್ರಸಂಗಳನ್ನು ಮಕ್ಕಳಿಗೆ ತಿಳಿಸಬೇಕು. ಇವುಗಳನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸಭೆಯಲ್ಲಿ ಸಲಹೆ ನೀಡಿದ್ದೇವೆ. ಮಕ್ಕಳ ನೈತಿಕ ಮೌಲ್ಯ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಯಾರಲ್ಲೂ ಅಭಿಪ್ರಾಯ ಭೇದ ಬಂದಿಲ್ಲ ಎಂದರು.
ಮುಕ್ತ ಮತ್ತು ಸ್ವತಂತ್ರವಾಗಿ ಅಭಿಪ್ರಾಯಗಳು ಮಂಡನೆ ಆಗಿವೆ. ಧರ್ಮ ಗುರುಗಳು ನೀಡಿದಂತಹ ವಿಚಾರದಲ್ಲಿ ಯಾರೂ ಪ್ರತಿರೋಧ ಮಾಡಿಲ್ಲ. ಮುಸ್ಲಿಂ, ಕ್ರೈಸ್ತ, ಹಿಂದೂ ಸಮಾಜದ ಎಲ್ಲ ಪಂಗಡ, ಸಮಾಜದ ಸಾಧು- ಸಂತರು ಭಾಗವಹಿಸಿದ್ದರು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂಬುದೇ ಎಲ್ಲರ ಒಟ್ಟಾರೆ ಅಭಿಪ್ರಾಯವಾಗಿತ್ತು ಎಂದರು.
ಮಕ್ಕಳ ಎದುರಲ್ಲಿ ಪ್ರಾಣಿ ವಧೆ , ಮಾಂಸ ನೇತು ಹಾಕಿದರೆ ಮನಸ್ಸಿಗೆ ಘಾಸಿ ಆಗ್ತದೆ : ಈರುಳ್ಳಿ, ಬೆಳ್ಳುಳ್ಳಿ ಉದ್ರೇಕಕಾರಿ- ಕಾಫಿ,ಟೀ ಉದ್ವೇಗಕಾರಿ
ಪಂಚರತ್ನ ಕಥೆಗಳ ರೀತಿ ವಾರದಲ್ಲಿ ಒಂದು ತರಗತಿ ಮಕ್ಕಳಿಗೆ ಕಾರ್ಟೂನ್ ತೋರಿಸಬೇಕು : ಪೇಜಾವರ ಶ್ರೀ