ಕಾಸರಗೋಡು: ಅನ್ ಲೈನ್ ನಲ್ಲಿ ಅರ್ಡರ್ ಮಾಡಿದ ಆಹಾರ ಸೇವನೆಯಿಂದ ಮೃತಪಟ್ಟಿದ್ದಾಳೆ ಎಂದು ಈ ಹಿಂದೆ ವರದಿಯಾಗಿದ್ದ ಕಾಸರಗೋಡು ಮೂಲದ ಅಂಜುಶ್ರೀ ಪಾರ್ವತಿ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿನಿ ಪೆರುಂಬಳ ಬೇನೂರಿನ ಅಂಬಿಕಾ ಅವರ ಪುತ್ರಿ ಅಂಜುಶ್ರೀ (19) ಅವರು ಸ್ಥಳೀಯ ಹೋಟೆಲ್‌ನಿಂದ ಬಿರಿಯಾನಿ ಖಾದ್ಯವನ್ನು ಆನ್‌ಲೈನ್ ಮೂಲಕ ತರಿಸಿಕೊಂಡಿದ್ದು 20 ಅದನ್ನು ಸೇವಿಸಿದ ಬಳಿಕ ಮೃತಪಟ್ಟಿದ್ದಾಳೆ ಎಂದು ಈ ಹಿಂದೆ ವರದಿಯಾಗಿತ್ತು . ಆದರೇ ಸದ್ಯ ಲಭಿಸುತ್ತಿರುವ ಮಾಹಿತಿಗಳ ಪ್ರಕಾರ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ
ಪ್ರಕರಣದ ತನಿಖೆ ನಡೆಸಿದ ತನಿಖಾ ತಂಡವು ಯುವತಿ ಬರೆದಿದ್ದಾಳೆ ಎನ್ನಲಾದ ಡೆತ್ ನೋಟ್ ಹಾಗೂ ಅವಳ ಮೊಬೈಲ್ ಫೋನ್ ನಿಂದ ಅದೊಂದು ಆತ್ಮಹತ್ಯೆ ಎಂದು ಸಾಬೀತು ಮಾಡುವ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಮೊಬೈಲ್ ನಲ್ಲಿ ದೊರೆತ ಮಾಹಿತಿಗಳ ಪ್ರಕಾರ ಅಂಜು ಶ್ರೀ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂಬ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ
ಆಕೆಯ ಸಾವಿಗೆ ವಿಷಾಹಾರ ಕಾರಣವಲ್ಲ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೃತಳ ಕರುಳು ನಿಷ್ಕ್ರಿಯವಾಗಿತ್ತು ಹಾಗೂ ಹಳದಿ ಜ್ವರ ಬಾಧಿಸಿತ್ತು ಎಂದು ವರದಿಯಲ್ಲಿ ತಿಳಿಸಿದೆ.ಹೆಚ್ಚಿನ ತನಿಖೆಗಾಗಿ ಅವರ ಆಂತರಿಕ ಅವಯವಗಳನ್ನು ರಾಸಾಯನಿಕ ತಪಾಸಣೆಗಾಗಿ ಕಳುಹಿಸಲಾಗಿದೆ.
ಇದೇ ವೇಳೆ ಅಂಜುಶ್ರೀ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆಯೆಂದೂ ವರದಿಯಲ್ಲಿ ಹೇಳಲಾಗಿದೆ. ಅದು ಆಹಾರದಲ್ಲಿನ ವಿಷ ಅಲ್ಲವೆಂದು ಫಾರೆನ್ಸಿಕ್ ಸರ್ಜನ್ ಅವರ ಅಭಿಪ್ರಾಯವಾಗಿದೆ. ವಿಷ ಕರುಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ವರದಿಯಲ್ಲಿ ವ್ಯಕ್ತಪಡಿಸಿದೆ. ಈಗ ಲಭಿಸಿರುವುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಾಗಿದ್ದು , ಕೆಲ ದಿನಗಳ ಬಳಿಕ ವಿಸ್ತೃತ ವರದಿ ಸಿಗಲಿದ್ದೂ ಆಗ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
ಶನಿವಾರ ಬೆಳಗ್ಗೆ ಅಂಜುಶ್ರೀ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಡಿ. 31ರಂದು ಕುಳಿಮಂದಿ ಸೇವಿಸಿದ ಕಾರಣ ಅಸ್ವಾಸ್ಥ್ಯ ಕಾಣಿಸಿಕೊಂಡಿತ್ತು. ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿತ್ತೆಂದು ಸಂಶಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಟೇಲ್ ಮಾಲಕ ಸಹಿತ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.